ADVERTISEMENT

ಕುಷ್ಟಗಿ| ಗಣಿತ, ಇಂಗ್ಲಿಷ್‌ ಪ್ರಾವೀಣ್ಯತೆ ಅಗತ್ಯ: ಉಪ ವಿಭಾಗಾಧಿಕಾರಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 5:51 IST
Last Updated 14 ಜನವರಿ 2026, 5:51 IST
ಕುಷ್ಟಗಿಯ ಎಸ್‌ವಿಸಿ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ದಿನಾಚರಣೆ ಮತ್ತು ‘ಅಭಯೋತ್ಸವ’ವನ್ನು ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ ಉದ್ಘಾಟಿಸಿದರು. ಸಿ.ವಿ.ಚಂದ್ರಶೇಖರ ಇತರರು ಇದ್ದರು
ಕುಷ್ಟಗಿಯ ಎಸ್‌ವಿಸಿ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ದಿನಾಚರಣೆ ಮತ್ತು ‘ಅಭಯೋತ್ಸವ’ವನ್ನು ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ ಉದ್ಘಾಟಿಸಿದರು. ಸಿ.ವಿ.ಚಂದ್ರಶೇಖರ ಇತರರು ಇದ್ದರು   

ಕುಷ್ಟಗಿ: ‘ಗಣಿತ ಮತ್ತು ಇಂಗ್ಲಿಷ್‌ ಭಾಷೆಯಲ್ಲಿನ ಹೆಚ್ಚಿನ ಪ್ರಾವೀಣ್ಯತೆ ಕೊರತೆ ಕಾರಣದಿಂದ ಈ ಭಾಗದ ಬಹುತೇಕ ವಿದ್ಯಾರ್ಥಿಗಳು ಕೀಳರಿಮೆಯಿಂದ ಬಳಲುವಂತಾಗಿದೆ’ ಎಂದು ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ ಹೇಳಿದರು.

ಇಲ್ಲಿಯ ಎಸ್‌ವಿಸಿ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಮತ್ತು ಅಭಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ‘ಗಣಿತ ವಿಷಯ ಮತ್ತು ಇಂಗ್ಲೀಷ್‌ ಭಾಷೆ ಹಾಗೂ ತಂತ್ರಜ್ಞಾನ ಈ ಕಾಲಘಟ್ಟದ ಸಂಕೀರ್ಣ ವಿಷಯಗಳಿಗೆ ಬುನಾದಿಯಾಗಿವೆ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಇವುಗಳಲ್ಲಿ ಪ್ರಭುತ್ವ ಸಾಧಿಸಿದರೆ ಕಲ್ಯಾಣ ಕರ್ನಾಟಕ ಪ್ರದೇಶದ 371ಜೆ ಕಲಂ ಅನ್ವಯ ಲಭ್ಯವಾಗುವ ಉದ್ಯೋಗಾವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರಾಥಮಿಕ ಹಂತದಿಂದಲೇ ಗಣಿತ, ಇಂಗ್ಲಿಷ್‌ ವಿಷಯಗಳಿಗೆ ಹೆಚ್ಚಿನ ಗಮನಹರಿಸುವ ಅಗತ್ಯವಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿ.ವಿ.ಚಂದ್ರಶೇಖರ ಮಾತನಾಡಿ, ‘ಕುಷ್ಟಗಿ ಹಾಗೂ ಸುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಉಚಿತ ಬಸ್‌, ಹಾಸ್ಟೆಲ್‌ ಸೌಲಭ್ಯ ಒದಗಿಸಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ದತ್ತು ಪಡೆದು ಉಚಿತ ಶಿಕ್ಷಣ ನೀಡಲಾಗುತ್ತಿದೆ. ಈ ಭಾಗದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಸ್ಥಾನ ತಲುಪುವಂತಾಗಬೇಕೆಂಬ ಮಹದಾಸೆ ಶಿಕ್ಷಣ ಸಂಸ್ಥೆಯ ಧ್ಯೇಯಗಳಲ್ಲಿ ಒಂದಾಗಿದೆ’ ಎಂದು ಹೇಳಿದರು.

ADVERTISEMENT

ಕೊಪ್ಪಳ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಎಸ್‌.ವಿ.ಡಾಣಿ, ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ ಅಂಗಡಿ ಇತರರು ಕಾರ್ಯಕ್ರಮ ಕುರಿತು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮದ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಎರಡು ದಿನಗಳ ವರೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನಸೆಳೆದವು. ವಿದ್ಯಾರ್ಥಿಗಳು, ಕಾಲೇಜಿನ ಸಿಬ್ಬಂದಿ ಹಾಗೂ ಪಾಲಕರು, ಪೋಷಕರು ಹಾಜರಿದ್ದರು.