ADVERTISEMENT

ಉತ್ತರ ಕರ್ನಾಟಕದ ಊಟ, ಜನ ಬಹಳ ಇಷ್ಟ: ನೀನಾಸಂ ಸತೀಶ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 17:32 IST
Last Updated 31 ಆಗಸ್ಟ್ 2018, 17:32 IST
ಕೊಪ್ಪಳದ ಸ್ಟಾರ್‌ ಚಿತ್ರಮಂದಿರದಲ್ಲಿ ಶನಿವಾರ ಅಯೋಗ್ಯ ಚಲನಚಿತ್ರ ಮೂರನೇ ವಾರದ ಪ್ರದರ್ಶನ ಕಾರ್ಯಕ್ರಮ ವೀಕ್ಷಣೆಗೆ ಬಂದಿದ್ದ ನಟ ನೀನಾಸಂ ಸತೀಶ ಅವರಿಗೆ ರುಮಾಲು ತೊಡಿಸಿ ಅಭಿಮಾನಿಗಳು ಸಂಭ್ರಮಿಸಿದರು
ಕೊಪ್ಪಳದ ಸ್ಟಾರ್‌ ಚಿತ್ರಮಂದಿರದಲ್ಲಿ ಶನಿವಾರ ಅಯೋಗ್ಯ ಚಲನಚಿತ್ರ ಮೂರನೇ ವಾರದ ಪ್ರದರ್ಶನ ಕಾರ್ಯಕ್ರಮ ವೀಕ್ಷಣೆಗೆ ಬಂದಿದ್ದ ನಟ ನೀನಾಸಂ ಸತೀಶ ಅವರಿಗೆ ರುಮಾಲು ತೊಡಿಸಿ ಅಭಿಮಾನಿಗಳು ಸಂಭ್ರಮಿಸಿದರು   

ಕೊಪ್ಪಳ: ‘ಉತ್ತರ ಕರ್ನಾಟಕಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಇಲ್ಲಿನ ಊಟ ಹಾಗೂ ಜನ ನನಗೆ ಬಹಳ ಇಷ್ಟ’ ಎಂದು ನಟ ನೀನಾಸಂ ಸತೀಶ ಹೇಳಿದರು.

ನಗರದ ಸ್ಟಾರ್‌ ಚಿತ್ರಮಂದಿರದಲ್ಲಿ ಶನಿವಾರ 'ಅಯೋಗ್ಯ' ಚಲನಚಿತ್ರ ಮೂರನೇ ವಾರದ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಉತ್ತರ ಕರ್ನಾಟಕದ ಜನ ಯಾವತ್ತೂ ನನ್ನ ಕೈ ಬಿಟ್ಟಿಲ್ಲ. ಎಲ್ಲ ಚಲನಚಿತ್ರಗಳನ್ನು ಗೆಲ್ಲಿಸುತ್ತಾ ಬಂದಿದ್ದಾರೆ. ಈ ಭಾಗದ ಕಂಪನಿ ನಾಟಕಗಳಲ್ಲಿ ನನ್ನ ಹಾಡುಗಳನ್ನು ಹೆಚ್ಚು ಬಳಸುತ್ತಾರೆ. ನಾನು ಮಂಡ್ಯದಲ್ಲಿ ಹುಟ್ಟಿದ್ದೇನೆ ಅಷ್ಟೇ, ಆದರೆ ಉತ್ತರ ಕರ್ನಾಟಕ ಸೇರಿದಂತೆ ನನಗೆ ಎಲ್ಲವೂ ಒಂದೇ’ ಎಂದರು.

ADVERTISEMENT

‘ಉತ್ತರ ಕರ್ನಾಟಕಕ್ಕೆ ಏನೇ ಆದರೂ ನಾವು ಬರುತ್ತೇವೆ. ಮಹಾದಾಯಿ ಹೋರಾಟ ಬೆಂಬಲಿಸಿದ್ದೇವೆ. ಯಾವುದೇ ರೀತಿಯಲ್ಲಿ ತಾರತಮ್ಯ ಮಾಡುವುದಿಲ್ಲ. ಅದೇ ರೀತಿ ಗಡಿ ಭಾಗದಲ್ಲಿ ಸಮಸ್ಯೆಯಾದರೂ ನಾವು ಬರುತ್ತೇವೆ. ಜನ ನಮ್ಮನ್ನು ಸ್ವೀಕರಿಸಿದ್ದಾರೆ. ಅದಕ್ಕಾಗಿ ಕರ್ನಾಟಕದ ಹೈ–ಕ, ಗಡಿ ಸೇರಿದಂತೆ ಯಾವುದೇ ಭಾಗವಾದರೂ ನಾವು ಸ್ಪಂದಿಸುತ್ತೇವೆ’ ಎಂದರು.

'ಅಯೋಗ್ಯ' ಚಲನಚಿತ್ರದಲ್ಲಿ ಬಯಲು ಶೌಚಾಲಯ ಕುರಿತು ಮಾತನಾಡಿದ್ದೇನೆ. ಶೌಚಾಲಯ ನಿರ್ಮಾಣಕ್ಕೆ ಇಲ್ಲಿನ ಎಷ್ಟೋ ಜನರಿಗೆ ಜಾಗ ಇಲ್ಲ. ಶೌಚಾಲಯದ ಕುರಿತು ಅವರಲ್ಲಿ ಜಾಗೃತಿ ಇಲ್ಲ. ಕೆಲವರು ಬಯಲು ಶೌಚಕ್ಕೆ ಹೋಗಿ ಹಾವು ಕಚ್ಚಿಸಿಕೊಂಡಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ ಯತ್ನ ಕೂಡ ನಡೆದಿದೆ. ಅದಕ್ಕಾಗಿ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ. ವೈಯಕ್ತಿ ಶೌಚಾಲಯ ಕಟ್ಟಿಸಿಕೊಳ್ಳುವಂತೆ ಪ್ರೇರೆಪಿಸಬೇಕು. ಉತ್ತರ ಕರ್ನಾಟಕ ಬರ, ನೀರು ಸೇರಿದಂತೆ ಎಲ್ಲ ಸಮಸ್ಯೆಗಳಿಂದ ಮುಕ್ತವಾಗಬೇಕು’ ಎಂದರು.

ನಿರ್ದೇಶಕ ಮಹೇಶಕುಮಾರ, ಚಿತ್ರಮಂದಿರದ ಮಾಲೀಕ ಅಲಿಸಾಬ್‌ ಖಾದ್ರಿ, ಮ್ಯಾನೇಜರ್ ಎಂ.ಎಂ.ಕಲ್ಲೇದಾರ, ಜಹೀರ್ ಹುಸೇನ್‌, ಶ್ಯಾಂಸುಂದರ, ಹರ್ಷ, ರಾಕೇಶ, ಮಂಜು, ಸಾಗರ, ಅನಿಲ್‌, ಶಿವಾನಂದ ಹೊದ್ಲೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.