ಕೊಪ್ಪಳ: ‘ಆರೋಗ್ಯ, ಕಾರ್ಮಿಕರ ಮಕ್ಕಳ ಶಿಕ್ಷಣ, ಭವಿಷ್ಯಕ್ಕಾಗಿ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚನೆಯಾಗಿದೆ. ಆದರೆ ಈಗ ಈ ಮಂಡಳಿ ಮೇಲೆ ಸಾಕಷ್ಟು ಲೂಟಿಕೋರರ ಕಣ್ಣು ಬಿದ್ದಿದೆ. ಕಾರ್ಮಿಕರು ಒಕ್ಕಟ್ಟಿನಿಂದ ಸಂಘಟನೆ ಕಟ್ಟಿ ಮಂಡಳಿಯ ಹಣವನ್ನು ಕಾರ್ಮಿಕರ ಕಲ್ಯಾಣಕ್ಕಾಗಿಯೇ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಸಿಐಟಿಯು ಕಾರ್ಮಿಕ ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಹೇಳಿದರು.
ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ನಗರದಲ್ಲಿ ಭಾನುವಾರ ಆರಂಭವಾದ ಕಾರ್ಮಿಕರ 5ನೇ ರಾಜ್ಯ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ‘ನಮ್ಮ ಹೋರಾಟ ಸೌಲಭ್ಯಗಳಿಗೆ ಸೀಮಿತವಾಗಬಾರದು. ಯಾವ ಬೇಡಿಕೆ ರಾಜಕೀಯ ಪ್ರಶ್ನೆಯಾಗಿ ರೂಪುಗೊಳ್ಳುತ್ತದೆಯೋ ಅದು ಮಾತ್ರ ಇತ್ಯರ್ಥವಾಗುತ್ತದೆ’ ಎಂದರು.
ಫೆಡರೇಷನ್ ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ ಪ್ರಾಸ್ತಾವಿಕವಾಗಿ ಮಾತನಾಡಿ ‘ದೇಶದಲ್ಲಿ ಕೃಷಿ ಬಿಟ್ಟರೆ ಅತಿ ಹೆಚ್ಚು ಕಾರ್ಮಿಕರು ಕಟ್ಟಡ ನಿರ್ಮಾಣ ವಲಯದಲ್ಲಿದ್ದಾರೆ. ಪ್ರತಿ ವರ್ಷ ಹಳ್ಳಿಗಳ ಜನಸಂಖ್ಯೆಯ ಶೇ. 2ರಷ್ಟು ಜನ ನಗರಗಳಿಗೆ ವಲಸೆ ಬರುತ್ತಿದ್ದು, ಅವರಲ್ಲಿ ಬಹುಪಾಲು ಜನ ಕಟ್ಟಡ ಕಾರ್ಮಿಕರೇ ಇದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಕಾರ್ಮಿಕರಿದ್ದಾರೆ’ ಎಂದರು.
ಹಟ್ಟಿ ಚಿನ್ನದ ಗಣಿಯ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಶಫಿ, ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಸೀಂ ಸರ್ದಾರ್, ನಿರ್ಮಾಣ ಕಾರ್ಮಿಕರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಯು.ಪಿ. ಜೋಸೆಫ್, ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್, ಸ್ವಾಗತ ಸಮಿತಿಯ ಇಸ್ಮಾಯಿಲ್ ಇಟಗಿ, ರಾಜ್ಯ ಮುಖಂಡ ಶಬ್ಬೀರ ಜಾಲಹಳ್ಳಿ, ಜಿಲ್ಲಾ ಮುಖಂಡರಾದ ಜಿ. ನಾಗರಾಜ, ಹುಸೇನಪ್ಪ, ಬಾಳಪ್ಪ ಹುಲಿಹೈದರ, ಅಮರೇಶ ಕಡಗದ, ರಂಗಪ್ಪ ದೊರೆ, ಮಂಜುನಾಥ ಡಗ್ಗಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.