ADVERTISEMENT

ಅಸ್ಪೃಶ್ಯತೆ ನಿವಾರಣೆ ಸಭೆಗೆ ಅಧಿಕಾರಿಗಳ ಗೈರು, ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 2:21 IST
Last Updated 4 ಡಿಸೆಂಬರ್ 2021, 2:21 IST
ಕುಷ್ಟಗಿ ತಾಲ್ಲೂಕಿನ ಮುದೇನೂರಿನಲ್ಲಿ ಅಸ್ಪೃಶ್ಯತೆ ನಿವಾರಣಾ ಕಾರ್ಯಕ್ರಮಕ್ಕೆ ಅಧಿಕಾರಿಗಳು ಗೈರಾಗಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು
ಕುಷ್ಟಗಿ ತಾಲ್ಲೂಕಿನ ಮುದೇನೂರಿನಲ್ಲಿ ಅಸ್ಪೃಶ್ಯತೆ ನಿವಾರಣಾ ಕಾರ್ಯಕ್ರಮಕ್ಕೆ ಅಧಿಕಾರಿಗಳು ಗೈರಾಗಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು   

ಕುಷ್ಟಗಿ: ತಾಲ್ಲೂಕಿನ ಮುದೇನೂರಿನಲ್ಲಿ ನಡೆಯಬೇಕಿದ್ದ ಅಸ್ಪೃಶ್ಯತೆ ನಿವಾರಣೆ ಅರಿವು ಕಾರ್ಯಕ್ರಮಕ್ಕೆ ಅಧಿಕಾರಿಗಳೇ ಬಾರದೆ ಸಭೆ ರದ್ದುಗೊಂಡ ಘಟನೆ ನಡೆಯಿತು.

ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಅಸ್ಪೃಶ್ಯತೆ ಆಚರಣೆ ನಿವಾರಣೆಗೆ ಸಂಬಂಧಿಸಿದಂತೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಬೇಕಿತ್ತು. ತಹಶೀಲ್ದಾರ್, ಸರ್ಕಲ್‌ ಇನ್‌ಸ್ಪೆಕ್ಟರ್ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದರಲ್ಲಿ ಭಾಗವಹಿಸಬೇಕಿತ್ತು.

ಗ್ರಾಮದ ಮಠದ ಬಳಿ ಕಾರ್ಯಕ್ರಮದ ವೇದಿಕೆ, ಪೆಂಡಾಲ್‌ ಸಿದ್ಧಪಡಿಸಲಾಗಿತ್ತು. ಆದರೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹೊರತುಪಡಿಸಿ ಬೇರೆ ಯಾರೊಬ್ಬರೂ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ತಾಸುಗಟ್ಟಲೇ ಕಾದು ಕುಳಿತರೂ ಇತರೆ ಪ್ರಮುಖ ಇಲಾಖೆ ಅಧಿಕಾರಿಗಳು ಬರಲಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಳದ ಪ್ರಮುಖರಾದ ಆನಂದ ಭಂಡಾರಿ, ಹುಸೇನಪ್ಪ ಹಿರೇಮನಿ, ಪಾಂಡಪ್ಪ, ಶಶಿಧರ ಇತರರು ಅಧಿಕಾರಿಗಳ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಇಲ್ಲ. ಆದರೂ ಅಸ್ಪೃಶ್ಯತೆ ಇದೆ ಎಂಬಂತೆ ಬಿಂಬಿಸಿ ಅರಿವು ಮೂಡಿಸುವ ನೆಪದಲ್ಲಿ ಇಂಥ ಕಾರ್ಯಕ್ರಮ ಆಯೋಜಿಸಿ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಿಸುವಲ್ಲಿ ನಿರತರಾಗಿದ್ದೀರಿ. ಕಾರ್ಯಕ್ರಮಕ್ಕೆ ಅಸಡ್ಡೆ ತೋರಿ ಅವಮಾನಿಸುವ ಮೂಲಕ ಅಧಿಕಾರಿಗಳೇ ಅಸ್ಪೃಶ್ಯತೆ ಆಚರಣೆಗೆ ಕುಮ್ಮಕ್ಕು ನೀಡುತ್ತಿದ್ದೀರಿ’ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಾಲಚಂದ್ರ ಸಂಗನಾಳ ಅವರನ್ನು ಸ್ಥಳದಲ್ಲಿಯೇ ತರಾಟೆಗೆ ತೆಗೆದುಕೊಂಡರು.

ಸಭೆಗೆ ಬರುವುದಾಗಿ ಎಲ್ಲ ಅಧಿಕಾರಿಗಳೂ ಹೇಳಿದ್ದರು. ಇದರಲ್ಲಿ ತಮ್ಮ ತಪ್ಪೇನೂ ಇಲ್ಲ ಎಂದು ಸಮಾಜ ಕಲ್ಯಾಣಾಧಿಕಾರಿ ಸಮರ್ಥಿಸಿ ಕೊಳ್ಳಲು ಯತ್ನಿಸಿದರು. ನಂತರ ಸ್ಥಳಕ್ಕೆ ಬಂದ ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ವೀರಪ್ಪ ನಾಯಕ ಅವರು ಜನರನ್ನು ಸಮಾಧಾನಪಡಿಸಲು ಯತ್ನಿಸಿದರಾದರೂ ಅವರ ಸಲಹೆಯನ್ನು ಜನರು ಕಿವಿಗೆ ಹಾಕಿಕೊಳ್ಳಲಿಲ್ಲ. ಅನಿವಾರ್ಯವಾಗಿ ಕಾರ್ಯಕ್ರಮವನ್ನೇ ಮುಂದೂಡಲಾಯಿತು. ವಿವಿಧ ಇಲಾಖೆಗಳ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿ ಖಾಲಿ ಕುಳಿತು ಮರಳುವಂತಾಯಿತು.

ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ ಜೊತೆ ಮಾತನಾಡಿ, ‘ಚುನಾವಣೆ ಇದೆ, ಎಲ್ಲ ಅಧಿಕಾರಿಗಳು ಕರ್ತವ್ಯದಲ್ಲಿರುತ್ತಾರೆ. ಪಟ್ಟಣದಲ್ಲಿ ಬಿಜೆಪಿ ಪ್ರಚಾರ ಸಭೆಯೂ ಇರುವುದರಿಂದ ಸಚಿವರು ಭಾಗವಹಿಸಲಿದ್ದಾರೆ. ಹೀಗಾಗಿ ಮತದಾನ ಮುಗಿದ ನಂತರ ಬೇರೆ ದಿನ ನಿಗದಿಪಡಿಸಿ ಸಭೆ ನಡೆಸೋಣ ಎಂದು ತಿಳಿಸಿದ್ದರೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಭೆ ಏರ್ಪಡಿಸಿದ್ದರಿಂದ ಇತರ ಅಧಿಕಾರಿಗಳು ಜನರ ಆಕ್ರೋಶಕ್ಕೆ ಗುರಿಯಾಗಬೇಕಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.