ADVERTISEMENT

ಅಂತರ್ಜಲಕ್ಕೆ ಖಾತ್ರಿ ರಕ್ಷಕ

ಕುಷ್ಟಗಿ ತಾಲ್ಲೂಕಿನಲ್ಲಿ 'ಬದು ನಿರ್ಮಾಣ ಅಭಿಯಾನ' ಯಶಸ್ವಿ: ಇದು ನರೇಗಾ ಯಶಸ್ಸಿನ ಕಥೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 3:00 IST
Last Updated 30 ಸೆಪ್ಟೆಂಬರ್ 2020, 3:00 IST
ಕುಷ್ಟಗಿ ತಾಲ್ಲೂಕಿನಲ್ಲಿ ನರೇಗಾದಲ್ಲಿ ನಿರ್ಮಾಗೊಂಡಿರುವ ಕಂದಕ ಬದುಗಳಲ್ಲಿ ಮಳೆ ನೀರು ಸಂಗ್ರಹವಾಗಿರುವುದು
ಕುಷ್ಟಗಿ ತಾಲ್ಲೂಕಿನಲ್ಲಿ ನರೇಗಾದಲ್ಲಿ ನಿರ್ಮಾಗೊಂಡಿರುವ ಕಂದಕ ಬದುಗಳಲ್ಲಿ ಮಳೆ ನೀರು ಸಂಗ್ರಹವಾಗಿರುವುದು   

ಕುಷ್ಟಗಿ: ತಾಲ್ಲೂಕಿನಲ್ಲಿ ನರೇಗಾ ಯೋಜನೆ ಅಡಿ ಕೈಗೊಳ್ಳಲಾಗಿರುವ ಕಂದಕ ಬದು ನಿರ್ಮಾಣ ಅಭಿಯಾನ ಯಶಸ್ವಿಯಾಗಿದೆ. ಮಳೆ ನೀರು ಹೊಂಡ, ಬದುಗಳಲ್ಲಿ ತುಂಬಿ ತುಳುಕುತ್ತಿದೆ. ಅದರ ಯಶಸ್ಸಿನ ಫಲ ಈಗ ಅರಿವಿಗೆ ಬರುತ್ತಿದೆ.

ನರೇಗಾ ಯೋಜನೆಯ ಅನುದಾನವನ್ನು ಅಧಿಕಾರಿಗಳು ಸಮರ್ಪಕ ರೀತಿಯಲ್ಲಿ ಬಳಕೆ ಮಾಡಿಕೊಂಡಿದ್ದಾರೆ.

ಜನರಿಗೆ ಇದ್ದಲ್ಲಿಯೇ ಉದ್ಯೋಗ ದೊರಕಿಸಿಕೊಡುವ ಉದ್ದೇಶ ಮತ್ತು ಅತಂರ್ಜಲ ಹೆಚ್ಚಳಕ್ಕೆ ಪೂರಕವಾಗುವ ರೀತಿಯಲ್ಲಿ ಕೃಷಿ ಹೊಂಡಗಳನ್ನು ಹಾಗೂ ಕಂದಕ ಬದುಗಳನ್ನು ನಿರ್ಮಿಸಲಾಗಿದೆ. ಹೆಚ್ಚು ಪ್ರಗತಿ ಸಾಧಿಸಿ ಮೊದಲ ಸ್ಥಾನಕ್ಕೆ ಏರುವ ಮೂಲಕ ತಾಲ್ಲೂಕು ರಾಜ್ಯದ ಗಮನಸೆಳೆದಿದೆ.

ADVERTISEMENT

ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳಲ್ಲಿಯೂ ಬದು, ಹೊಂಡ ನಿರ್ಮಾಣ ಅಭಿಯಾನ ಕಾಮಗಾರಿ ನಡೆದಿದೆ. ಸುಮಾರು 4,800 ಕಂದಕ ಬದು ನಿರ್ಮಾಣ ಕಾಮಗಾರಿಯ ಮೂಲಕ 4,32,790 ಮಾನವ ದಿನಗಳನ್ನು ಸೃಜಿಸಲಾಗಿದೆ. ಅದರ ಜತೆಗೆ ಕೃಷಿ ಹೊಂಡಗಳನ್ನೂ ನಿರ್ಮಿಸಲಾಗಿದೆ.

ಪ್ರತಿ ವರ್ಷ ನರೇಗಾದಲ್ಲಿ ಕೂಲಿಕಾರರಿಗೆ ಸಾಮೂಹಿಕ ರೀತಿಯಲ್ಲಿ ಕೆರೆ ಕಟ್ಟೆಗಳ ಹೂಳೆತ್ತುವ ಕೆಲಸವನ್ನು ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್‌ ಸಮಸ್ಯೆಯಿಂದಾಗಿ ಜನರನ್ನು ಗುಂಪುಗೂಡಿಸದೆ ಕೆಲಸ ನೀಡುವುದು ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿತ್ತು. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಸಾವಿರಾರು ಕೂಲಿಕಾರರು ಇದ್ದಿದ್ದರಿಂದ ಯಾರಿಗೆ ಎಲ್ಲಿ ಕೆಲಸ ನೀಡಬೇಕು ಎನ್ನುವ ದೊಡ್ಡ ಸಮಸ್ಯೆ ತಲೆದೋರಿತ್ತು. ಆದರೂ ಕೊರೊನಾ ಭೀತಿ ಮತ್ತು ಮಾರ್ಚ್, ಏಪ್ರಿಲ್ ನಲ್ಲಿ ಜಾರಿಯಾಗಿದ್ದ ಲಾಕ್‌ಡೌನ್‌ ಸಂದರ್ಭದಲ್ಲಿ ರೈತ ಕೂಲಿಕಾರರಿಗೆ ವೈಯಕ್ತಿಕ ಕೆಲಸ ನೀಡಿ ಸೋಂಕು ಹರಡದಂತೆ ಸುರಕ್ಷತೆಗೂ ಹೆಚ್ಚಿನ ಗಮನ ಹರಿಸಿದ್ದರಿಂದ ಒಂದೇ ಯೋಜನೆಯಲ್ಲಿ ಜನರಿಗೆ ಕೂಲಿ ಕೆಲಸ ನೀಡುವುದು ಮತ್ತು ಆಸ್ತಿ ನಿರ್ಮಾಣದ ಎರಡೂ ಪ್ರಮುಖ ಉದ್ದೇಶಗಳು ಈಡೇರಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.