ಕೊಪ್ಪಳ: ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಜು. 25ರಂದು ಬಳ್ಳಾರಿಯಲ್ಲಿ ಚುನಾವಣೆ ನಿಗದಿಯಾಗಿದ್ದು ಈ ಸ್ಥಾನದ ಚುಕ್ಕಾಣಿ ಹಿಡಿಯಲು ತೆರೆಮರೆಯಲ್ಲಿ ಕಸರತ್ತುಗಳು ಚುರುಕು ಪಡೆದುಕೊಂಡಿವೆ.
ಈಗಿನ ಲೆಕ್ಕಾಚಾರದಂತೆ ಕೊಪ್ಪಳ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ರಾಘವೇಂದ್ರ ಹಿಟ್ನಾಳ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿ ಮಂಗಳವಾರ ನಿರೀಕ್ಷೆಯಂತೆಯೇ ಸರ್ಕಾರ ಆದೇಶ ಹೊರಡಿಸಿದ್ದು ಅವರೇ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.
ಯಲಬುರ್ಗಾ ತಾಲ್ಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಹಂಪಯ್ಯಸ್ವಾಮಿ ಹಿರೇಮಠ ಅವರು ಆಡಳಿತ ಮಂಡಳಿಗೆ ಮಾಡಲಾಗಿದ್ದ ನಾಮನಿರ್ದೇಶನವನ್ನು ಸರ್ಕಾರ ರದ್ದುಪಡಿಸಿದೆ. ಸಹಕಾರಿ ವಲಯದಲ್ಲಿ ಈಗಾಗಲೇ ಚರ್ಚೆ ಬಿರುಸು ಪಡೆದುಕೊಂಡಿರುವ ‘ರಾಘವೇಂದ್ರ ಹಿಟ್ನಾಳ ಒಕ್ಕೂಟದ ಮುಂದಿನ ಅಧ್ಯಕ್ಷ’ ಎನ್ನುವುದಕ್ಕೂ ಈ ನೇಮಕಾತಿ ಪುಷ್ಠಿ ನೀಡಿದೆ.
ಕೆಎಂಎಫ್ ಸ್ಥಾನದ ಮೇಲೆ ಕಣ್ಣು: ಶಾಸಕ ಹಿಟ್ನಾಳ ಆರಂಭಿಕ ಹೆಜ್ಜೆಯಾಗಿ ರಾಬಕೊವಿ ಒಕ್ಕೂಟದ ಅಧ್ಯಕ್ಷರಾಗಿ ಮುಂದೆ ಕೆಎಂಎಫ್ ಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದಕ್ಕೆ ಬೇಕಾದ ವೇದಿಕೆಯನ್ನು ಸಿದ್ಧಪಡಿಸಿಕೊಳ್ಳುವ ಭಾಗವಾಗಿಯೇ ರಾಜ್ಯದ ವಿವಿಧ ಹಾಲು ಒಕ್ಕೂಟಗಳಲ್ಲಿರುವ ಆಪ್ತರನ್ನು ಕೆಎಂಎಫ್‌ಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡಲಾಗುತ್ತಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
ರಾಘವೇಂದ್ರನ ಮೊರೆ: ಒಂದೆಡೆ ಶಾಸಕ ರಾಘವೇಂದ್ರ ಹಿಟ್ನಾಳ ರಾಬಕೊವಿ ಚುಕ್ಕಾಣಿ ಹಿಡಿಯಲು ಸಿದ್ಧವಾಗಿದ್ದರೆ ಇನ್ನೊಂದೆಡೆ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಂದ ರಾಬಕೊವಿಗೆ ನೇಮಕವಾದ ನಿರ್ದೇಶಕರು ಮಂತ್ರಾಲಯದ ‘ರಾಘವೇಂದ್ರ’ನ ಮೊರೆ ಹೋಗಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಈ ಎರಡೂ ಜಿಲ್ಲೆಗಳಿಂದ ಆಯ್ಕೆಯಾದ ನಿರ್ದೇಶಕರ ಪೈಕಿ ಒಬ್ಬರನ್ನು ಹೊರತುಪಡಿಸಿ ಉಳಿದವರು ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆದಿದ್ದಾರೆ. ಚುನಾವಣೆ ದಿನವೇ ಒಂದಾಗಿ ಬಳ್ಳಾರಿಗೆ ಹೋಗಲು ಸಿದ್ಧತೆಗೆ ಮಾಡಿಕೊಂಡಿದ್ದಾರೆ.
ಕೆಎಂಎಫ್‌ಗೆ ಹಂಪಯ್ಯಸ್ವಾಮಿ
ಕೊಪ್ಪಳ: ರಾಬಕೊವಿ ಆಡಳಿತ ಮಂಡಳಿಗೆ ನಾಮನಿರ್ದೇಶನಗೊಂಡಿದ್ದ ಹಂಪಯ್ಯ ಸ್ವಾಮಿ ಅವರಿಗೆ ಈಗ ಮತ್ತೊಂದು ಬಂಪರ್ ಅವಕಾಶ ಲಭಿಸಿದೆ. ಶಾಸಕ ಹಿಟ್ನಾಳ ನೇಮಕದ ಬೆನ್ನಲ್ಲೆ ಮತ್ತೊಂದು ಆದೇಶ ಮಾಡಿರುವ ರಾಜ್ಯ ಸರ್ಕಾರ ಹಂಪಯ್ಯಸ್ವಾಮಿ ಅವರನ್ನು ರಾಬಕೊವಿ ನಾಮನಿರ್ದೇಶಕ ಸ್ಥಾನದಿಂದ ರದ್ದುಮಾಡಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಂಎಎಫ್)ಗೆ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ನೇಮಿಸಿದೆ. ‘ರಾಬಕೊವಿಗೆ ನಾಮನಿರ್ದೇಶಿತ ಸದಸ್ಯ ಆಗಬೇಕು ಎನ್ನುವ ಅಭಿಲಾಷೆಯಿತ್ತು. ಬಸವರಾಜ ರಾಯರಡ್ಡಿ ರಾಘವೇಂದ್ರ ಹಿಟ್ನಾಳ ಹಾಗೂ ಅಮರೇಗೌಡ ಬಯ್ಯಾಪುರ ಅವರ ನೆರವಿನಿಂದ ಕೆಎಂಎಫ್‌ಗೆ ನೇಮಿಸಿದ್ದು ಖುಷಿ ನೀಡಿದೆ’ ಎಂದು ಹಂಪ್ಪಯ್ಯಸ್ವಾಮಿ ಹೇಳಿದರು.
ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ರಾಬಕೊವಿ ಒಕ್ಕೂಟಕ್ಕೆ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಲಾಗಿದೆ. ಮುಂದಿನ ಹಾದಿಯ ಪಯಣ ದೀರ್ಘವಾಗಿದೆ.– ರಾಘವೇಂದ್ರ ಹಿಟ್ನಾಳ, ಕೊಪ್ಪಳ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.