ADVERTISEMENT

‘ಸರ್ಕಾರ ಪೂರ್ಣಾವಧಿ ಪೂರೈಸಲಿದೆ’; ಸಚಿವ ಹಾಲಪ್ಪ ಆಚಾರ

ಸಣ್ಣಪುಟ್ಟ ಭಿನ್ನಮತ ಸಿಎಂ ಶಮನ ಮಾಡುವರು: ಹಾಲಪ್ಪ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 1:14 IST
Last Updated 15 ಆಗಸ್ಟ್ 2021, 1:14 IST
ಹಾಲಪ್ಪ ಆಚಾರ
ಹಾಲಪ್ಪ ಆಚಾರ   

ಕೊಪ್ಪಳ: ‘ಸರ್ಕಾರ ಮತ್ತು ಸಚಿವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅಸಮಾಧಾನ ಇದ್ದರೆ ಅದನ್ನು ಮುಖ್ಯಮಂತ್ರಿ ಪರಿಹರಿಸಲು ಸಮರ್ಥರಿದ್ದಾರೆ. ಸರ್ಕಾರ ಯಾವುದೇ ಗೊಂದಲವಿಲ್ಲದೆ ಪೂರ್ಣಾವಧಿ ಪೂರೈಸಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರುವುದು ಸಾಮಾನ್ಯ. ಅವುಗಳನ್ನು ಮಾತುಕತೆ ಮೂಲಕ ಬಗೆಹರಿಸುತ್ತಾರೆ. ಇಂದಿರಾ ಕ್ಯಾಂಟೀನ್‌ ಹೆಸರು ಬದಲಾವಣೆಚರ್ಚೆ ನಡೆದಿದೆ. ಅಲ್ಲಿನ ಗುಣಮಟ್ಟದ ಆಹಾರ, ವ್ಯವಸ್ಥೆ ಕುರಿತು ನಮಗೆಲ್ಲ ತಿಳಿದಿದೆ. ಉತ್ತಮ ಆಹಾರ ದೊರೆಯಬೇಕು ಎಂಬುವುದಷ್ಟೇ ನಮ್ಮ ಅಭಿಪ್ರಾಯ ವೈಯಕ್ತಿಕ ಅಭಿಪ್ರಾಯ ಹೇಳಲು ನಿರಾಕರಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಹಿಂದೆ ಅಕ್ರಮ ನಡೆದಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ಬಂದಿದೆ. ಆದರೆ ಇಲಾಖೆಯ ಅಧಿಕಾರಿಗಳು ಯಾರೂ ಇದರಲ್ಲಿ ಭಾಗಿಯಾಗಿಲ್ಲ. ಅಲ್ಲದೆ ಇದಕ್ಕೂ ಇಲಾಖೆಗೂ ಸಂಬಂಧವಿಲ್ಲ. ಆರೋಪ ಬಂದ ತಕ್ಷಣ ಆರೋಪಿ ಆಗುವುದಿಲ್ಲ. ಈ ಕುರಿತು ನಾವು ಆಂತರಿಕ ಮಾಹಿತಿ ಪಡೆದುಕೊಂಡಿದ್ದು, ಮುಂದೆ ಟೆಂಡರ್‌ ಸೇರಿದಂತೆ ಎಲ್ಲ ಆಡಳಿತವನ್ನು ಪಾರದರ್ಶಕವಾಗಿ ನಡೆಸಲಾಗುತ್ತದೆ. ರಾಜ್ಯದಲ್ಲಿಯೇ ಇಲಾಖೆ ಮಾದರಿಯಾದ ನಡೆ ಅನುಸರಿಸಲಿದೆ ಎಂದು ಭರವಸೆ ನೀಡಿದರು.

ADVERTISEMENT

ಈ ಸಲ ತಜ್ಞರು ಹೇಳುವ ಪ್ರಕಾರ ಮಕ್ಕಳಿಗೆ ಕೋವಿಡ್ ಸೋಂಕು ಹೆಚ್ಚು ಹರಡುತ್ತದೆ ಎಂಬ ಕಾರಣಕ್ಕಾಗಿ ವೆಂಟಿಲೇಟರ್ ಹಾಗೂ ಮಕ್ಕಳಿಗಾಗಿಯೇ ಪ್ರತ್ಯೇಕ ವಾರ್ಡ್ ಹಾಗೂ ಇತರೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಈಗಾಗಲೇ ಪೂರ್ವಭಾವಿ ಸಭೆ ಕರೆದು ತೊಂದರೆಯಾಗದಂತೆ ಕ್ರಮ ವಹಿಸಲು ಸೂಚಿಸಿದ್ದೇನೆ ಎಂದರು.

ಹೋದ ಸಲ ಕೋವಿಡ್ ಸಂದರ್ಭದಲ್ಲಿ ಆಮ್ಲಜನಕಕ್ಕಾಗಿ ಪರದಾಡಿದ್ದೇವೆ. ಆದರೆ ಆಮ್ಲಜನಕ ಕೊರತೆಯಿಂದ ಯಾವುದೇ ಜೀವ ಹಾನಿಯಾಗಿಲ್ಲ. ಈ ಸಲ ಆ ರೀತಿಯ ಯಾವುದೇ ಆಮ್ಲಜನಕ ಸಮಸ್ಯೆಯಾಗದಂತೆ ಅಗತ್ಯವಿರುವ ಕಡೆ ಆಮ್ಲಜನಕ ಘಟಕಗಳನ್ನು ನಿರ್ಮಿಸಲಾಗುವುದು. ನಮ್ಮ ಸರ್ಕಾರವು ಕೋವಿಡ್ ನಿರ್ವಹಣೆಗಾಗಿ ಸಾಕಷ್ಟು ವೈದ್ಯರನ್ನು ಅಗತ್ಯವಿರುವ ಆಸ್ಪತ್ರೆಗಳಲ್ಲಿ ನೇಮಿಸಿಕೊಳ್ಳುತ್ತಿದ್ದು, ಕೋವಿಡ್ ನಿರ್ಮೂಲನೆಗಾಗಿ ನಮ್ಮ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವರು ಹೇಳಿದರು.

ಸಂಸದ ಕರಡಿ ಸಂಗಣ್ಣ, ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.