ಕೊಪ್ಪಳ: ಇಲ್ಲಿನ ನಗರಸಭೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ ಬಳಿಕ ‘ಲೆಕ್ಕ’ ಸರಿಪಡಿಸುವ ಕಸರತ್ತು ನಡೆಯುತ್ತಿದ್ದು ನಿಯಮಬಾಹಿರವಾಗಿ ನೇಮಕ ಮಾಡಿಕೊಳ್ಳಲಾಗಿದ್ದ 30 ಜನ ಕೆಲಸಗಾರರನ್ನು ತೆಗೆದು ಹಾಕಲಾಗಿದೆ.
2022ರ ಗವಿಸಿದ್ಧೇಶ್ವರ ಮಠದ ಜಾತ್ರೆಯ ಸಮಯದಲ್ಲಿ ಇಲ್ಲಿನ ನಗರಸಭೆ ವಿವಿಧ ಕೆಲಸಗಳಿಗಾಗಿ 15 ಜನ ಲೋಡರ್ಸ್ ಮತ್ತು ಇನ್ನು 15 ಜನ ಸ್ವೀಪರ್ಸ್ ಕೆಲಸಗಾರರನ್ನು ನೇಮಕ ಮಾಡಿಕೊಂಡಿತ್ತು. ಎರಡು ತಿಂಗಳ ಅವಧಿಗೆ ಮಾತ್ರ ಆಗಿದ್ದ ಈ ನೇಮಕವನ್ನು ಅದೇ ವರ್ಷಪೂರ್ತಿ ಮುಂದುವರಿಸಿಕೊಂಡು ಹೋಗಲಾಯಿತು. ಮರು ಟೆಂಡರ್ ಮಾಡದೆ ಮರುವರ್ಷವೂ ಅವರನ್ನೇ ಮುಂದುವರಿಸಿಕೊಂಡು ಹೋಗಲಾಗಿದೆ.
ಇತ್ತೀಚೆಗೆ ನಗರಸಭೆ ಹಾಗೂ ಅಲ್ಲಿ ಕೆಲಸ ಮಾಡುತ್ತಿರುವ ಪ್ರಮುಖ ಅಧಿಕಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು ನೂರಾರು ಕಡತಗಳನ್ನು ಪರಿಶೀಲನೆ ಮಾಡಿದ್ದಾರೆ. ಇನ್ನಷ್ಟು ಕಡತಗಳನ್ನು ತಂದುಕೊಡುವಂತೆ ಸೂಚನೆ ನೀಡಿದ್ದಾರೆ. ನಗರಸಭೆಯಲ್ಲಿ ‘ಲೆಕ್ಕ’ ಸರಿಪಡಿಸುವ ಕೆಲಸ ನಡೆಯುತ್ತಿರುವ ಕಾರಣ ಇರುವ 30 ಜನ ಕೆಲಸಗಾರರಿಗೆ ಮೂರು ತಿಂಗಳಿಂದ ವೇತನ ಪಾವತಿ ಬಾಕಿ ಉಳಿದಿದೆ. ಪ್ರತಿ ಕೆಲಸಗಾರನಿಗೆ ₹17 ಸಾವಿರ ನೀಡಲಾಗುತ್ತಿದ್ದು, ಒಟ್ಟು ₹15.30 ಲಕ್ಷ ಪಾವತಿಸಬೇಕಾಗಿದೆ.
ಎರಡು ತಿಂಗಳ ಅವಧಿಗೆ ನೇಮಕವಾಗಿ ಈಗಿನ ತನಕವೂ 30 ಜನರ ಕೆಲಸ ಮುಂದುವರಿಸಿದ್ದ ನಗರಸಭೆಗೆ ಈಗ ಅವರಿಗೆ ವೇತನ ಪಾವತಿಗೆ ಅನುದಾನದ ಕೊರತೆಯಾಗಿದೆ. ಆದ್ದರಿಂದ ಏಕಾಏಕಿ ಕೆಲಸಕ್ಕೆ ಬರಬೇಡಿ ಎಂದು ಹೇಳಿದ್ದಾರೆ. ’ನಿಯಮ ಬಾಹಿರವಾಗಿ ನಿಮ್ಮನ್ನು ಕೆಲಸದಲ್ಲಿ ಮುಂದುವರಿಸಲು ಬರುವುದಿಲ್ಲ. ಮುಂದೆ ಕಾನೂನು ಪ್ರಕಾರವೇ ಟೆಂಡರ್ ಕರೆಯಲಾಗುವುದು’ ಎನ್ನುವ ತಿಳಿವಳಿಕೆಯನ್ನೂ ಅಧಿಕಾರಿಗಳು ಹೇಳಿದ್ದಾರೆ.
ಆದರೆ ಕೆಲಸ ಕಳೆದುಕೊಂಡ 30 ಜನರಿಗೆ ಈಗ ಏನು ಮಾಡಬೇಕು ಎನ್ನುವುದೇ ತೋಚದಂತಾಗಿದೆ. ’ಎರಡ್ಮೂರು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದೆವು. ಈಗ ಕೆಲಸದಿಂದ ತೆಗೆದು ಹಾಕಿದ್ದರಿಂದ ಏನು ಮಾಡಬೇಕೆನ್ನುವುದೇ ತೋಚದಂತಾಗಿದೆ. ಜನಪ್ರತಿನಿಧಿಗಳು ನಮಗೆ ನೆರವಾಗಬೇಕು’ ಎಂದು ಹೆಸರು ಹೇಳಲು ಬಯಸದ ಕೆಲಸ ಕಳೆದುಕೊಂಡು ವ್ಯಕ್ತಿಯೊಬ್ಬರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.