ADVERTISEMENT

ಮಾಸಕ್ಕೊಮ್ಮೆ ಸಾಧಕ ರೈತರಿಗೆ ಗೌರವ

ಗಂಗಾವತಿ ಕೆವಿಕೆ ವತಿಯಿಂದ ‘ನಮ್ಮ ಹೆಮ್ಮೆಯ ರೈತ’ ವಿನೂತನ ಕಾರ್ಯ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 4:44 IST
Last Updated 23 ಡಿಸೆಂಬರ್ 2025, 4:44 IST
ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಾಧಕ ಕೃಷಿ ಮಹಿಳೆ ಕುರಿತು ಹಾಕಿರುವ ಮಾಹಿತಿ ಫಲಕ
ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಾಧಕ ಕೃಷಿ ಮಹಿಳೆ ಕುರಿತು ಹಾಕಿರುವ ಮಾಹಿತಿ ಫಲಕ   

ಗಂಗಾವತಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗೌರವಿಸಲು ಹಲವು ವೇದಿಕೆಗಳಿವೆ. ಆದರೆ ಕೃಷಿ ಕ್ಷೇತ್ರದಲ್ಲಿ ಗಣನೀಯವಾಗಿ ಸಾಧನೆ ಮಾಡಿ ಮಾದರಿ ರೈತರನ್ನು ಗುರುತಿಸುವ ಕಾರ್ಯ ವಿರಳ. ಇಂಥ ವಿನೂತನ ಕಾರ್ಯಕ್ರಮವನ್ನು ಗಂಗಾವತಿ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಹಮ್ಮಿಕೊಳ್ಳುವ ಮೂಲಕ ರೈತರ ಸಾಧನೆಗೆ ಪ್ರೇರಣೆಯಾಗುತ್ತಿದೆ.

ಗಂಗಾವತಿಯ ಕೆವಿಕೆ ‘ನಮ್ಮ ಹೆಮ್ಮೆಯ ರೈತ’ ಎಂಬ ಕಾರ್ಯಕ್ರಮದಡಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರೈತರನ್ನು ಗುರುತಿಸಿ ಪ್ರತಿ ತಿಂಗಳು ಓರ್ವ ಸಾಧಕರ ಸಾಧನೆಯನ್ನು ಕೆವಿಕೆ ಕೇಂದ್ರದ ಹೊರಭಾಗದಲ್ಲಿ ಫಲಕದ ಮೇಲೆ ತೋರಿಸಲಾಗುತ್ತಿದೆ. 

‘ನಮ್ಮ ಹೆಮ್ಮೆಯ ರೈತ’ ಕಾರ್ಯಕ್ರಮ 2023 ಆಗಸ್ಟ್ ತಿಂಗಳಲ್ಲಿ ಆರಂಭಿಸಿದ್ದು, ಈವರೆಗೆ ಕೊಪ್ಪಳ ಜಿಲ್ಲೆಯ ಎಲ್ಲ ತಾಲ್ಲೂಕಿನಿಂದ 23ಕ್ಕೂ ಹೆಚ್ಚು ಪುರುಷ ಮತ್ತು ಮಹಿಳಾ ಸಾಧಕ ರೈತರ ಸಾಧನೆ ಮಾಹಿತಿಯನ್ನು ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರದರ್ಶನ ಮಾಡಿದೆ. 

ADVERTISEMENT

ಈ ಕಾರ್ಯಕ್ರಮ ರಾಯಚೂರು ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ 7 ಜಿಲ್ಲೆಗಳಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯುತ್ತಿದ್ದು, ಈ ಜಿಲ್ಲೆಗಳ ಪೈಕಿ ಗಂಗಾವತಿ ಕೃವಿ ವಿಜ್ಞಾನ ಕೇಂದ್ರವು ಒಂದಾಗಿದೆ.

ಕೃಷಿ ಪ್ರೇರಣೆಗೆ ಕಾರ್ಯಕ್ರಮ: ಕೃಷಿಯಲ್ಲಿ ಗಣನೀಯವಾಗಿ ರೈತರು ಅಲ್ಲಲ್ಲಿ ಸಾಧನೆಗೈಯುತ್ತಿದ್ದಾರೆ. ಕೆಲವರು ಕೃಷಿ ಕ್ಷೇತ್ರದಲ್ಲಿ ಎಷ್ಟೇ ಕಷ್ಟಪಟ್ಟರು ಬದುಕಿಲ್ಲವೆಂದು ಕೃಷಿಯನ್ನು ತೊರೆಯುತ್ತಿದ್ದಾರೆ. ಈ ನಕಾರಾತ್ಮಕ ಭಾವನೆ ತಗೆಯಲು, ಕೃಷಿಯಲ್ಲಿ ಸಾಧಕ ರೈತರು ಏನೆಲ್ಲ ಸಾಧಿಸಿದ್ದಾರೆ ಎಂಬುದನ್ನು ರೈತರಿಗೆ ತಿಳಿಸಲು ‘ನಮ್ಮ ಹೆಮ್ಮೆಯ ರೈತ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪ್ರತಿ ತಿಂಗಳು ಒಬ್ಬ ಸಾಧಕ ರೈತನನ್ನು ಗುರುತಿಸಿ, ಅವರ ಮಾಹಿತಿ, ಸಾಧನೆ, ಸಂಪರ್ಕ ಮಾಹಿತಿ, ವಿವರವನ್ನು ಕೇಂದ್ರದಲ್ಲಿ ಒಂದು ತಿಂಗಳ ಕಾಲ ಪ್ರದರ್ಶನಕ್ಕೆ ಇಡಲಾಗುತ್ತಿದೆ. ರೈತರನ್ನು ಗೌರವದಿಂದ ನೋಡುವ ಜತೆಗೆ ಸಾಧಕರ ರೈತರ ಸಾಧನೆ ಮತ್ತೊಬ್ಬರಿಗೆ ಸ್ಫೂರ್ತಿಯಾಗಬೇಕು. ಯುವಕರಿಗೆ ಕೃಷಿಯಲ್ಲಿ ತೊಡಗಲು ಪ್ರೇರಣೆ ದೊರೆಯಬೇಕು ಎನ್ನುವುದು ಇದರ ಮುಖ್ಯ ಉದ್ದೇಶವಾಗಿದೆ.

ಯಾರಾರೂ ಸಾಧಕರು: ಈವರೆಗೆ ಕೆವಿಕೆ ಕೇಂದ್ರದಲ್ಲಿ ಆಚಾರ ತಿಮ್ಮಪೂರದ ಶ್ರೀಪಾದರಾಜ ಮುರಡಿ, ಹನುಮಸಾಗರದ ಮೊಹಮ್ಮದ್ ಸಿರಾಜುದ್ದೀನ್ ಮೂಲಿಮನಿ, ಮಲಕನಮರಡಿಯ ವೀರನಗೌಡ ಕುಲಕರ್ಣಿ, ಕುದುರಿಮೋತಿಯ ಸುರೇಶ ಸಣ್ಣಪ್ಪ ಚೌಡಕಿ, ಕಾತರಕಿಯ ಶ್ರೀನಿವಾಸ ರೆಡ್ಡಿ, ಉಡಮಕಲ್ಲಿನ ಶಿವಮೂರ್ತಿಗೌಡ ಎಸ್.ಪಾಟೀಲ, ನಿಡಶೇಷಿ ರಮೇಶ, ಬಸಾಪಟ್ಟಣದ ಅನೀಲಕುಮಾರ.ಟಿ, ಹುಲಿಹೈದರ ಗ್ರಾಮದ ಮಾರುತಿನವಾಬ್ ನಾಯಕ, ತಾವರಗೇರಾದ ಬಸಯ್ಯ ಹಿರೇಮಠ, ಕಲ್ಲತಾವರಗೇರಾದ ಶೇಖಮ್ಮ ಹುಚ್ಚಪ್ಪವಾಣಿ, ಚಿಕ್ಕಮನ್ನಾಪುರದ ನೀಲಮ್ಮ ಮೂಲಿ, ಚಿಕ್ಕಜಂತಕಲ್‌ನ ಮಹಾದೇವಿ, ಕಾಮನೂರು ಗ್ರಾಮದ ಶಿವಮ್ಮ ವಕ್ಕಲಕುಂಟಿ, ಆಗೋಲಿ ಶಂಕ್ರಮ್ಮ ಕಲಮಂಗಿ, ಹೊಸಕೇರಾದ ರಾಧಾ, ತಾವರಗೇರಾದ ಮಹಾಂತಮ್ಮ ಪಾಟೀಲ, ಹೇರೂರು ಎನ್.ತುಳಸಿ ಸೀತಾ, ಕೊಪ್ಪಳದ ಸೌಮ್ಯ ಪಾಟೀಲ, ಶಿರಗುಂಪಿನ ನಿಂಗಮ್ಮ ಛಲವಾದಿ ಎಂಬ ರೈತರನ್ನು ಸಾಧಕರಾಗಿ ಗುರುತಿಸಿ ಸಾಧನೆಯ ಸಾರಾಂಶವನ್ನು ಫಲಕದಲ್ಲಿ ಪ್ರದರ್ಶಿಸಲಾಗಿದೆ.

ಯುವಜನತೆ ಕೃಷಿಯಿಂದ ವಿಮುಖವಾಗದಂತೆ ಸಾಧಕ ರೈತರ ಸಾಧನೆ ಆದಾಯ ಕೃಷಿ ಪದ್ದತಿ ಬಗ್ಗೆ ಜಾಗೃತಿ ಮೂಡಿಸಿ ಕೃಷಿಯತ್ತ ಸೆಳೆಯಲು ಹಾಗೂ ಸಾಧಕ ರೈತರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಇದರಿಂದ ರೈತರಿಗೂ ಸಹ ಹೆಮ್ಮ ಅನಿಸುತ್ತದೆ
ರಾಘವೇಂದ್ರ ಎಲಿಗಾರ ಕೆವಿಕೆ ಮುಖ್ಯಸ್ಥ ಗಂಗಾವತಿ

ವರ್ಷದ ನಂತರ ಚರ್ಚಾಗೋಷ್ಠಿ

ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರತಿ ತಿಂಗಳಿಗೆ ಒಬ್ಬರಂತೆ 12 ತಿಂಗಳು ರೈತರ ಸಾಧನೆ ಮಾಹಿತಿಯನ್ನು ಪ್ರದರ್ಶನ ಮಾಡಲಾಗುತ್ತದೆ. ಒಂದು ವಿಶೇಷ ಕಾರ್ಯಕ್ರಮ ಆಯೋಜಿಸಿ ವರ್ಷದ ಎಲ್ಲ ಸಾಧಕ ರೈತರನ್ನು ಕಾರ್ಯಕ್ರಮಕ್ಕೆ ಕರೆಯಲಾಗುತ್ತದೆ. ಅಲ್ಲಿ ಅವರ ಅನುಭವಗಳನ್ನು ಇತರ ರೈತರಿಗೆ ತಿಳಿಸಿಕೊಡುವ ಜೊತೆಗೆ ಚರ್ಚಾಗೋಷ್ಠಿ ಏರ್ಪಡಿಸಲಾಗುತ್ತದೆ. ರೈತರ ಸಾಧನೆ ಕುರಿತ ಪುಸ್ತಕ ಸಹ ರಚಿಸಲಾಗು‌ತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.