ADVERTISEMENT

ಹಾಸ್ಟೆಲ್‍ನಲ್ಲಿ ಪ್ರತಿ ತಿಂಗಳು ಪಾಲಕರ ಸಭೆ

ಜಿಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 6:38 IST
Last Updated 5 ಡಿಸೆಂಬರ್ 2025, 6:38 IST
ಯಲಬುರ್ಗಾ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾ.ಪಂ ಸಾಮಾನ್ಯ ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಮಾತನಾಡಿದರು. ತಾಪಂ ಇಒಗಳಾದ ನೀಲಗಂಗಾ ಬಬಲಾದ ಹಾಗೂ ಸಂತೋಷ ಪಾಟೀಲ ಇದ್ದರು.
ಯಲಬುರ್ಗಾ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾ.ಪಂ ಸಾಮಾನ್ಯ ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಮಾತನಾಡಿದರು. ತಾಪಂ ಇಒಗಳಾದ ನೀಲಗಂಗಾ ಬಬಲಾದ ಹಾಗೂ ಸಂತೋಷ ಪಾಟೀಲ ಇದ್ದರು.   

ಯಲಬುರ್ಗಾ: ‘ಮಹಿಳಾ ವಸತಿ ನಿಲಯಗಳಲ್ಲಿ ವಿದ್ಯಾರ್ಥಿನಿಯರ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಹಾಗೂ ಪ್ರತಿ ತಿಂಗಳು ಕಡ್ಡಾಯ ಪಾಲಕರ ಸಭೆಯನ್ನು ಆಯೋಜಿಸಿ ಯೋಗಕ್ಷೇಮ ವಿಚಾರಿಸುವ ಕೆಲಸ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ವಸತಿ ನಿಲಯದಲ್ಲಿ ನಡೆದ ಘಟನೆಯು ಗಂಭೀರ ಸ್ವರೂಪದ್ದಾಗಿದೆ. ಇಂತಹ ಘಟನೆಗಳು ಯಾವುದೇ ಕಾರಣಕ್ಕೂ ಮರುಕಳಿಸದಂತೆ ಎಚ್ಚೆತ್ತುಕೊಳ್ಳಬೇಕು. ಆಗಾಗ ಆರೋಗ್ಯ ತಪಾಸಣೆ ನಡೆಸುವುದು ಅವಶ್ಯಕ’ ಎಂದರು.

ಬಿಸಿಎಂ ಅಧಿಕಾರಿ ಶಿವಶಂಕರ ಕರಡಕಲ್ ಮಾತನಾಡಿ, ‘ತಾಲ್ಲೂಕಿನ ವಸತಿ ನಿಲಯದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ನಿಲಯದ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ವಿದ್ಯಾರ್ಥಿನಿಯರೊಂದಿಗೆ ಪಾಲಕರ ಪೋಟೋ ಕಡ್ಡಾಯವಾಗಿ ಸಂಗ್ರಹಿಸಲಾಗುತ್ತದೆ. ಪಾಲಕರು ಖುದ್ದಾಗಿ ಕರೆಯಲು ಬಂದಾಗ ಮಾತ್ರ ಪರಿಶೀಲಿಸಿಯೇ ಕಳಹಿಸಲು ಕ್ರಮಕೈಗೊಳ್ಳಲಾಗಿದೆ’ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ADVERTISEMENT

‘ಬೀದಿನಾಯಿ ಹಾಗೂ ಮಂಗಗಳ ಕಾಟ ವಿಪರೀತವಾಗಿದ್ದು, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅವುಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ. ಶಾಲಾ–ಕಾಲೇಜುಗಳು, ಬಸ್ ನಿಲ್ದಾಣ ಹಾಗೂ ಆಸ್ಪತ್ರೆಗಳಲ್ಲಿ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬಂದರೆ ಅವುಗಳನ್ನು ಹಿಡಿದು ಬೇರೆ ಕಡೆ ಸಾಗಿಸುವ ಕೆಲಸ ಮಾಡಬೇಕು’ ಎಂದರು.

‘ಮಂಗಗಳಿಂದ ರೈತರಿಗೂ ಹಾಗೂ ಸಾರ್ವಜನಿಕರಿಗೂ ಸಾಕಷ್ಟು ತೊಂದರೆಯಾಗುತ್ತಿದೆ. ಅವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸಂತಾನ ಹರಣ ಚಿಕಿತ್ಸೆಕೊಡಿಸಿಸುವ ಕೆಲಸ ಪಟ್ಟಣ ಪಂಚಾಯಿತಿ ಮತ್ತು ಪಶು ಸಂಗೋಪನಾ ಇಲಾಖೆ ಮಾಡಬೇಕು’ ಎಂದು ಅಧಿಕಾರಿಗಳು ಸೂಚಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಡೆಂಗೆ, ಚಿಕೂನ್‍ಗುನ್ಯ ಹಾಗೂ ಇನ್ನಿತರ ಸಾಂಕ್ರಾಮಿಕ ರೋಗಗಳು ಹರಡದಂತೆ ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಯವರು ಸೇರಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಜಾಗೃತಿ ಮೂಡಿಸುವುದು, ಸ್ವಚ್ಛತೆ ಕಾಪಾಡಲು ಕ್ರಮಕೈಗೊಳ್ಳುವುದು, ಗ್ರಾಮೀಣ ಜನರ ಆರೋಗ್ಯ ತಪಾಸಣೆಗೆ ಶಿಬಿರ ಏರ್ಪಡಿಸಿವುದು ಸೇರಿದಂತೆ ಗ್ರಾಮೀಣ ಆರೋಗ್ಯ ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಆರೋಗ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ರೇಷ್ಮೆ ಇಲಾಖೆ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಸಮಾಜಕಲ್ಯಾಣ ಇಲಾಖೆ, ಜೆಸ್ಕಾಂ, ಕಂದಾಯ ಇಲಾಖೆ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿ ವರದಿಯನ್ನು ಓದಿದರು.

ಯಲಬುರ್ಗಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ, ಕುಕನೂರು ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.