ADVERTISEMENT

ತಾಯಿ, ಇಬ್ಬರು ಮಕ್ಕಳ ಸಾವು; ಆಕ್ರಂದನ, ಬದುಕುಳಿದ 6 ತಿಂಗಳ ಗಂಡು ಮಗು

​ಪ್ರಜಾವಾಣಿ ವಾರ್ತೆ
Published 7 ಮೇ 2022, 5:00 IST
Last Updated 7 ಮೇ 2022, 5:00 IST
ಶೈಲಾ, ಸಾನ್ವಿ, ಪವನ
ಶೈಲಾ, ಸಾನ್ವಿ, ಪವನ   

ಕನಕಗಿರಿ: ಮನೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ತಾಯಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ಸಮೀಪದ ಹುಲಿಹೈದರ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ.

ಮೃತರನ್ನು ಶೈಲಾ(26), ಸಾನ್ವಿ( 6), ಪವನ(4) ಎಂದು ಗುರುತಿಸಲಾಗಿದೆ. ಮೃತರಾದ ಶೈಲಾ ಮನೆಕೆಲಸ ಮಾಡಿಕೊಂಡಿದ್ದರು. ಅವರ ಪತಿ ಚಾಲಕರಾಗಿದ್ದಾರೆ.

ಆಗಿದ್ದೇನು?: ಟಾಟಾ ಏಸ್ ವಾಹನ ಚಾಲನೆ ಮಾಡುತ್ತಾ ಬದುಕಿನ ಬಂಡಿ ಸಾಗಿಸುತ್ತಿದ್ದ ಗ್ರಾಮದ ಉಮೇಶ ಅವರು ಸ್ವಂತ ಮನೆ ಇಲ್ಲದ ಕಾರಣ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ತಗಡಿನ ಮನೆಯಲ್ಲಿ ಬಾಡಿಗೆಗೆ ಇದ್ದರು. ತನ್ನ ಟಾಟಾ ಏಸ್ ವಾಹನದಲ್ಲಿ ಕುರಿ, ಮೇಕೆಗಳನ್ನು ತುಂಬಿಕೊಂಡು ವಾರದ ಸಂತೆಗೆ ಹೋಗುತ್ತಿದ್ದರು.

ADVERTISEMENT

ಈಚೆಗೆ ಸುರಿದ ಮಳೆ ಹಾಗೂ ರಭಸವಾಗಿ ಬೀಸಿದ ಗಾಳಿಗೆ ವಿದ್ಯುತ್ ಸಂಪರ್ಕದ ವೈರ್ ಸಡಿಲಗೊಂಡು ಮನೆಗೆ ಹಾಕಿದ್ದ ಕಬ್ಬಿಣದ ಸರಳಿಗೆ ತಾಗಿದೆ. ಮಕ್ಕಳು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕಬ್ಬಿಣದ ಕಂಬ ಹಿಡಿದು ಕೊಂಡಿದ್ದಾರೆ. ಇದನ್ನು ನೋಡಿದ ತಾಯಿ ಶೈಲಾ ಅವರು ಮಕ್ಕಳನ್ನು ಬಿಡಿಸಲು ಹೋದಾಗ ಮೂವರೂ ದುರಂತಕ್ಕೆ ಬಲಿಯಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದರು. ಘಟನೆ ಸಮಯದಲ್ಲಿ ಮನೆಯಲ್ಲಿದ್ದ ಮತ್ತೊಂದು ಆರು ತಿಂಗಳ ಗಂಡು ಮಗು ಸುರಕ್ಷಿತವಾಗಿ ಬದುಕುಳಿದಿದೆ.

ಮೃತಳ ಸಹೋದರ ಸುರೇಶ ಲೋಕಪ್ಪ ಅವರು ನೀಡಿದ ದೂರಿನನ್ವಯ ಇಲ್ಲಿನ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಕಾರಟಗಿ ಹಾಗೂ ಗಂಗಾವತಿ ಪಿಐಗಳಾದ ವೀರಭದ್ರಯ್ಯ ಹಿರೇಮಠ ಮತ್ತು ಚಂದ್ರಪ್ಪ ಚಿಕ್ಕೋಡಿ, ಪಿಎಸ್‌ಐಗಳಾದ ಕಾಶೀಂಸಾಬ ಹಾಗೂ ತಾರಾಬಾಯಿ ಭೇಟಿ
ನೀಡಿದರು.

ಕುಟುಂಬಸ್ಥರು, ಸ್ಥಳೀಯರ ಕಂಬನಿ: ತಾಯಿ ಹಾಗೂ ಇಬ್ಬರು ಮಕ್ಕಳ ಸಾವಿನ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಮನೆಗೆ ಬಂದು ಕಂಬನಿ ಮಿಡಿದರು. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇಂಥ ಸಾವನ್ನು ದೇವರು ಯಾರಿಗೂ ಕೊಡಬಾರದು, ದೇವರಿಗೆ ಕರುಣೆ ಇಲ್ಲ, ದೇವರು ಪಾಪಿ ಎಂದು ನೆರೆಹೊರೆಯವರು ಜರಿಯುತ್ತಿರುವುದು ಕಂಡು ಬಂತು.

ದಿನ ಬೆಳಿಗ್ಗೆ ಎದ್ದರೆ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳು ವಿಧಿಯಾಟಕ್ಕೆ ಬಲಿಯಾಗಿರುವುದು ದೊಡ್ಡ ದುರಂತ ಎಂದು ಅಲ್ಲಿನ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.

ಆರ್ಥಿಕ ನೆರವು: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಹನುಮೇಶ ನಾಯಕ, ವೀರೇಶ ಸಮಗಂಡಿ, ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರಸ್ವಾಮಿ ಸೇರಿದಂತೆ ವಿವಿಧ ಪಕ್ಷದ ಮುಖಂಡರು ಭೇಟಿ ನೀಡಿ ಸಾಂತ್ವನ ಹೇಳಿದರು.

ಬಿಜೆಪಿ ಮುಖಂಡ ಜಿ. ತಿಮ್ಮಾರೆಡ್ಡಿ ₹25 ಸಾವಿರ ಹಾಗೂ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮೌನೇಶ ದಢೇಸೂಗೂರು ಅವರು ₹20 ಸಾವಿರ ಆರ್ಥಿಕ ನೆರವು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.