ADVERTISEMENT

ಕೊಪ್ಪಳ: ಎರಡನೇ ದಿನವೂ ಮುಂದುವರಿದ ಸಂಸದ ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2023, 6:46 IST
Last Updated 7 ನವೆಂಬರ್ 2023, 6:46 IST
   

ಕೊಪ್ಪಳ: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ರಾಜ್ಯ ಸರ್ಕಾರ ಮೊದಲು ನೀಡುತ್ತಿದ್ದ ಪರಿವರ್ತಕ ಸಹಿತ ಉಚಿತ ಮೂಲಸೌಕರ್ಯ ಒದಗಿಸುವ ಯೋಜನೆ ಸ್ಥಗಿತಗೊಳಿಸಿದ್ದು, ಪುನಃ ಆರಂಭಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರು ಜಿಲ್ಲಾಡಳಿತ ಭವನ ಎದುರು ನಡೆತ್ತಿರುವ ಉಪವಾಸ ಮಂಗಳವಾರ ಎರಡನೇ ದಿನಕ್ಕೆ ಕಾಲಿರಿಸಿದೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸಂಸದರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಸರ್ಕಾರ ರೈತರಿಗೆ ಅನುಕೂಲವಾಗುವ ರೀತಿಯಲ್ಲಿಯೇ ನಡೆದುಕೊಳ್ಳಲಿದೆ ಎಂದರು. ಸರ್ಕಾರದಿಂದ ಆದೇಶವಾಗುವ ತನಕ ಉಪವಾಸ ಕೈ ಬಿಡುವುದಿಲ್ಲ ಎಂದು ಸಂಸದ ಪಟ್ಟು ಹಿಡಿದರು.

ಸೆ. 22ರ ನಂತರ ನೋಂದಣಿಯಾದ ರೈತರ ಕೃಷಿ ಕೊಳವೆ ಬಾವಿಗಳಿಗೆ ಪರಿಕರಗಳನ್ನು ಸ್ವಂತ ಖರ್ಚಿನಲ್ಲಿ ತಂದುಕೊಳ್ಳಬೇಕು ಎಂದು ಸರ್ಕಾರ ಆದೇಶ ಮಾಡಿದ್ದು ಅದಕ್ಕಾಗಿ ಹೋರಾಟ ನಡೆಸುತ್ತಿರುವ ಎಂದು ಸಂಗಣ್ಣ ತಿಳಿಸಿದರು.

ADVERTISEMENT

ಸಚಿವ ಶಿವರಾಜ ತಂಗಡಗಿ ಮಾತನಾಡಿ, 500 ಮೀಟರ್ ವರೆಗೆ ಉಚಿತವಾಗಿ ವಿದ್ಯುತ್ ಕಂಬ ಹಾಗೂ ತಂತಿ ನೀಡುತ್ತೇವೆ‌. ಜಿಲ್ಲೆಯಲ್ಲಿ 273 ಅಕ್ರಮ ಪಂಪ್ ಸೆಟ್ ಗಳಿವೆ. ಅವುಗಳನ್ನು ಸಕ್ರಮ ಮಾಡುತ್ತೇವೆ. ಉಪವಾಸ ಕೈ ಬಿಡುವಂತೆ ಮನವಿ ಮಾಡಿದ್ದೇವೆ ಎಂದರು.

ಸರ್ಕಾರದ ಆದೇಶದಲ್ಲಿ ಹೊಸ ಪಂಪ್‌ಸೆಟ್ ಗಳಿಗೆ ರೈತರೇ ಹಣ ಭರಿಸಬೇಕೆಂಬ ಆದೇಶ ತಿದ್ದುಪಡಿ ಮಾಡುತ್ತೇವೆ. ಈ ಬಗ್ಗೆ ಇಂಧನ ಸಚಿವ ಹಾಗೂ ಇಲಾಖೆ ಕಾರ್ಯದರ್ಶಿಯೊಂದಿಗೆ ಮಾತನಾಡಿರುವೆ.

15 ದಿನಗದಲ್ಲಿ ಆದೇಶ ಹೊರ ಬೀಳಲಿದೆ. ನೀವು ನಿರಶನ ವಾಪಸ್ ಪಡೆಯಿರಿ ಎಂದು ಮನವಿ ಮಾಡಿದರು.

ಸಚಿವ ಬೈರೇಗೌಡ ಸಹ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದರು.

ಆದೇಶ ವಾಪಸ್ ಪಡೆಯುವ ಬಗ್ಗೆ ಮರು ಆದೇಶ ಮಾಡುವವರೆಗೆ ಸತ್ಯಾಗ್ರಹ ವಾಪಸ್ ಪಡೆಯುವುದಿಲ್ಲ ಎಂದು ಸಂಗಣ್ಣ ಪಟ್ಟು ಹಿಡಿದು ಮುಂದುವರೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.