ಯಲಬುರ್ಗಾ: ತಾಲ್ಲೂಕಿನ ಮುಧೋಳ ಗ್ರಾಮದ ಶರಣಬಸವೇಶ್ವರ ಪುರಾಣ ಮುಕ್ತಾಯ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಪ್ರಯುಕ್ತ ದೇವಸ್ಥಾನದಲ್ಲಿ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ನಿಡಗುಂದಿ ಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ, ‘ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಳ್ಳುವ ಪುರಾಣ ಕಾರ್ಯಕ್ರಮವು ಜನರಲ್ಲಿ ಆಧ್ಯಾತ್ಮಿಕ ಮನೋಭಾವ ಬೆಳೆಸುವುದರ ಜೊತೆಗೆ ಒಳ್ಳೆಯ ಜೀವನ ಕಂಡುಕೊಳ್ಳಲು ಸನ್ಮಾರ್ಗಗಳನ್ನು ತೋರಿಸುತ್ತವೆ. ಸಾಮಾಜಿಕ ಸಂಘಟನೆಯಲ್ಲಿ ಸುಧಾರಣೆ, ಧರ್ಮ ಮತ್ತು ಸಂಸ್ಕೃತಿಗಳನ್ನು ರೂಢಿಸಿಕೊಂಡು ಹೋಗುವಂತೆ ಮಾಡುತ್ತವೆ. ಗ್ರಾಮದಲ್ಲಿ ನಡೆದ 78ನೇ ವರ್ಷದ ಪುರಾಣ ಕಾರ್ಯಕ್ರಮವು ಹಿಂದಿನ ಕಾರ್ಯಕ್ರಮಗಳಿಗಿಂತಲೂ ಹೆಚ್ಚು ವಿಶೇಷವಾಗಿತ್ತು’ ಎಂದು ಹೇಳಿದರು.
ಪಲ್ಲಕ್ಕಿ ಮೆರವಣಿಗೆ ಸಂದರ್ಭದಲ್ಲಿ ಪುರವಂತರು ದೇವರ ಒಡುಪುಗಳನ್ನು ಹೇಳುತ್ತಾ ರಂಜಿಸಿದರು. ಮಹಿಳೆಯರು ಕುಂಭಗಳೊಂದಿಗೆ ಭಾಗವಹಿಸಿದ್ದರು. ಮನ್ನೇರಾಳದ ಶರಣಬಸವಶಾಸ್ತ್ರಿ ಹಿರೇಮಠ, ದೇವೇಂದ್ರಕುಮಾರ ಪತ್ತಾರ ನೇತೃತ್ವದಲ್ಲಿ ಪುರಾಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಗೀತ ಕಲಾವಿದರಾದ ನೂರಂದಪ್ಪ ವಿವೇಕಿ, ಚಂದ್ರಶೇಖರ ಕೋಗಿಲೆ, ಶಿವಸಂಗಪ್ಪ ಕಮತರ, ಕಲ್ಲಪ್ಪ ಮಾಸ್ತರ ಹಾಗೂ ಇತರರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಚಂದಾಲಿಂಗಪ್ಪ ಹುನಗುಂದ, ಚಂದ್ರಬಾಯಿ ಕುದರಿ, ಅನುತಾ ಹುನಗುಂದ, ಮಲ್ಲೇಶಪ್ಪ ದೇವಕ್ಕಿ, ಹೊನ್ನೇಶ ಹಾದಿಮನಿ ಸೇರಿ ಅನೇಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.