ADVERTISEMENT

ನಿಗದಿಯಾಗದ ಮೀಸಲಾತಿ: ಸದಸ್ಯರ ಪೇಚಾಟ

ಜಿಲ್ಲೆಯ ಐದು ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿಗಳ ಮುಂದುವರಿಕೆ

ಸಿದ್ದನಗೌಡ ಪಾಟೀಲ
Published 13 ಏಪ್ರಿಲ್ 2022, 4:32 IST
Last Updated 13 ಏಪ್ರಿಲ್ 2022, 4:32 IST
ಎರಡು ದಶಕದಿಂದ ನೆನೆಗುದಿಗೆ ಬಿದ್ದಿರುವ ಭಾಗ್ಯನಗರ-ಓಜನಹಳ್ಳಿ ರಸ್ತೆ ದುಃಸ್ಥಿತಿ ಈ ಸಾರಿ ಸಮಸ್ಯೆಗೆ ಪರಿಹಾರ ಕಾಣಲಿದೆ ಎಂದರೆ ಆಡಳಿತ ಮಂಡಳಿ ಇಲ್ಲದೇ ಸಮಸ್ಯೆ ಹಾಗೆ ಮುಂದುವರಿದಿದೆ
ಎರಡು ದಶಕದಿಂದ ನೆನೆಗುದಿಗೆ ಬಿದ್ದಿರುವ ಭಾಗ್ಯನಗರ-ಓಜನಹಳ್ಳಿ ರಸ್ತೆ ದುಃಸ್ಥಿತಿ ಈ ಸಾರಿ ಸಮಸ್ಯೆಗೆ ಪರಿಹಾರ ಕಾಣಲಿದೆ ಎಂದರೆ ಆಡಳಿತ ಮಂಡಳಿ ಇಲ್ಲದೇ ಸಮಸ್ಯೆ ಹಾಗೆ ಮುಂದುವರಿದಿದೆ   

ಕೊಪ್ಪಳ: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮ ರಾಜಕೀಯ ಭವಿಷ್ಯ ಕಂಡುಕೊಂಡು ಜಯಶಾಲಿ ಯಾದ ಸದಸ್ಯರಿಗೆ ಅಧಿಕಾರವಿಲ್ಲದೆ ಪರದಾಡುವಂತೆ ಆಗಿದೆ. ಜನರ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದರೂ ಮೀಸಲಾತಿ ಇಲ್ಲದೆ ಆಡಳಿತ ಮಂಡಳಿ ಅನುಷ್ಠಾನವಾಗದೇ ಪರದಾಡುವಂತೆ ಆಗಿದೆ.

ಜಿಲ್ಲೆಯ ಐದು ನಗರ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ತಿಂಗಳು ಕಳೆದಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ಮೀಸಲಾತಿ ಪ್ರಕಟಿಸದ ಕಾರಣ ಸದಸ್ಯರು ಜಾತಕ ಪಕ್ಷಿಯಂತೆ ಕಾಯುವಂತಾಗಿದೆ.

ಗ್ರಾಮೀಣ ಭಾಗದ ಕದನಕ್ಕೆ ಪೂರಕವಾಗಿ ಕಾರಟಗಿ ಪುರಸಭೆ, ಕನಕಗಿರಿ, ತಾವರಗೇರಾ, ಕುಕನೂರು ಹಾಗೂ ಭಾಗ್ಯನಗರ ಪಟ್ಟಣ ಪಂಚಾಯಿತಿಗಳಿಗೆ ಡಿಸೆಂಬರ್ 2021ರಲ್ಲಿ ಚುನಾವಣೆ ನಡೆದಿದೆ. ವರ್ಷದ ಕೊನೆಯಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಕನಕಗಿರಿ ಹಾಗೂ ಕುಕನೂರಿನಲ್ಲಿ ಮತದಾರ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿದ್ದಾನೆ. ಕಾರಟಗಿ, ಭಾಗ್ಯನಗರ ಹಾಗೂ ತಾವರಗೇರಾ ಸಂಸ್ಥೆಗಳು ಅತಂತ್ರವಾಗಿದ್ದು, ಜೆಡಿಎಸ್ ಪಕ್ಷೇತರರು ನಿರ್ಣಾಯಕರಾಗಲಿದ್ದಾರೆ.

ADVERTISEMENT

ಫಲಿತಾಂಶ ಪ್ರಕಟವಾಗುತ್ತಲೇ ಅಧಿಕಾರ ಹಿಡಿಯುವ ಲೆಕ್ಕಾಚಾರಗಳು ಜೋರಾಗಿ ಕೇಳಿ ಬಂದಿದ್ದವು. ಎರಡು ಸಂಸ್ಥೆಗಳಲ್ಲಿ ಸ್ಪಷ್ಟ ಬಹುಮತ ಇದ್ದರೂ ಮೀಸಲಾತಿ ಜಾರಿಯಾಗದ ಕಾರಣ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆ ದೊರೆಯದೇ ಕೈಕೈ ಹಿಸುಕಿಕೊಳ್ಳುವಂತೆ ಆಗಿದೆ.

ಮೂರರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿ ಆಡಳಿತಾರೂಢ ಬಿಜೆಪಿಗೆ ತೀವ್ರ ಮುಖಭಂಗ ಅನುಭವಿಸಿದ್ದರೂ ಪಕ್ಷೇತರರ ನೆರವಿನಿಂದ ಅಧಿಕಾರ ಹಿಡಿಯಲು ನಾನಾ ಕಸರತ್ತು ನಡೆಸಿದೆ.

ಫಲಿತಾಂಶದಲ್ಲಿ ಆದ ಪರಾಜಯ ವನ್ನು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಮೇಲೆ ಜಯ ಸಾಧಿಸಿ ಸಮಾಧಾನ ಮಾಡಿಕೊಳ್ಳುವ ಯತ್ನದಲ್ಲಿ ಬಿಜೆಪಿ ಇದೆ. ಕೈ ಪಾಳಯ ಬಹುಮತ ಪಡೆದರೂ, ಅಧಿಕಾರ ಗದ್ದುಗೆಗೆ ಏರಲು ಅಥವಾ ತಪ್ಪಿಸಿಕೊಳ್ಳಲು ಮೀಸಲಾತಿಯಲ್ಲಿ ಅವಕಾಶ ಸಿಗಲಿದೆ. ಹೀಗಾಗಿ ಉಭಯ ಪಕ್ಷಗಳ ನಾಯಕರು ನಾನಾ ತಂತ್ರ ಹೆಣೆದುಕೊಂಡು ಕಾಯುತ್ತಿದ್ದಾರೆ. ಪಕ್ಷೇತರರು ಹಾಗೂ ಜೆಡಿಎಸ್‌ನವರಿಗೆ ಗಾಳ ಹಾಕಲು ಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಹಣಕಾಸು ವರ್ಷ ಮುಗಿಯುತ್ತಿದ್ದು, ಚುನಾಯಿತರ ಕೈಗೆ ಅಧಿಕಾರ ಬಂದಲ್ಲಿ ಉಳಿಕೆ ಅನುದಾನದಲ್ಲಿ ಹಲವು ಕಾಮಗಾರಿ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ.

ಗೆದ್ದರೂ, ಪುರಸಭೆ, ಪಪಂಗೆ ಸಾಮಾನ್ಯರಂತೆ ಹೋಗಿ ಬರುವುದಕ್ಕೆ ಸೀಮಿತವಾಗಿದೆ. ಆದರೆ, ಸರ್ಕಾರ ಕೋವಿಡ್ ಹೆಸರಿನಲ್ಲಿ ದಿನದೂಡುತ್ತಿದ್ದು, ಸದಸ್ಯರು ಪರಿತಪಿಸುವಂತಾಗಿದೆ. ಫಲಿತಾಂಶ ಹೊರ ಬಿದ್ದು ವಾರದೊಳಗೆ ಮೀಸಲು ಪ್ರಕಟವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ,ನಾಲ್ಕು ತಿಂಗಳುಕಳೆದರೂ ಪ್ರಕಟವಾಗದ ಕಾರಣ ತಾಳ್ಮೆಗೆಡುವಂತೆ ಮಾಡಿದೆ.

ಹೀಗಿದೆ ಪಕ್ಷಗಳ ಬಲಾಬಲ...

ಕಾರಟಗಿ ಪುರಸಭೆ, ಕನಕಗಿರಿ, ತಾವರಗೇರಾ, ಭಾಗ್ಯನಗರ, ಕುಕನೂರು ಪಟ್ಟಣ ಪಂಚಾಯಿತಿಗಳ 96 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಕಾಂಗ್ರೆಸ್ ಕಾರಟಗಿ 1, ಭಾಗ್ಯನಗರ 2 ಹಾಗೂ ತಾವರಗೇರಾದಲ್ಲಿ 1 ಸ್ಥಾನವನ್ನು ಅವಿರೋಧವಾಗಿ ಗೆದ್ದಿದೆ.

ಒಟ್ಟು 96 ಸ್ಥಾನಗಳಲ್ಲಿ ಕಾಂಗ್ರೆಸ್ 49 ಸ್ಥಾನ ಪಡೆದಿದ್ದು, ಕನಕಗಿರಿ ಹಾಗೂ ಕುಕನೂರು ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲು ಸ್ಪಷ್ಟ ಬಹುತ ಪಡೆದುಕೊಂಡಿದೆ.

ಬಿಜೆಪಿ 41 ಸ್ಥಾನ ಪಡೆದಿದ್ದು, ಭಾಗ್ಯನಗರ ಪ.ಪಂ.ನ 19 ಸ್ಥಾನಗಳಲ್ಲಿ 9 ಸ್ಥಾನ ಗಳಿಸಿದರೂ, ಸ್ಪಷ್ಟ ಬಹುಮತ ಪಡೆದಿಲ್ಲ. ಕಾರಟಗಿ ಪುರಸಭೆಯಲ್ಲಿ ಕೈ-ಕಮಲ ತಲಾ 11 ಸ್ಥಾನ ಪಡೆದು ಸಮಬಲ ಸಾಧಿಸಿವೆ.

ತಾವರಗೇರಾ ಪ.ಪಂ.ನಲ್ಲೂ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಕಾರಟಗಿಯಲ್ಲಿ ಜೆಡಿಎಸ್, ಭಾಗ್ಯನಗರ, ತಾವರಗೇರಾದಲ್ಲಿ ಪಕ್ಷೇತರರು ಅಧಿಕಾರ ಹಿಡಿಯುವಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದು, ಅಧ್ಯಕ್ಷ-ಉಪಧ್ಯಕ್ಷ ಸ್ಥಾನದ ಮೀಸಲಿಗಾಗಿ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.