ADVERTISEMENT

ಗಂಗಾವತಿ | ಕೊಲೆ ಮಾಡಿದ ಸ್ಟೇಟಸ್‌ ಇಟ್ಟುಕೊಂಡ ಅಪರಾಧಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 6:48 IST
Last Updated 11 ಡಿಸೆಂಬರ್ 2025, 6:48 IST
<div class="paragraphs"><p><strong>ಸಾಂದರ್ಭಿಕ ಚಿತ್ರ</strong></p></div>

ಸಾಂದರ್ಭಿಕ ಚಿತ್ರ

   

ಗಂಗಾವತಿ: ಕೊಲೆ ಆರೋಪದಲ್ಲಿ ಪೊಲೀಸ್ ಠಾಣೆಗೆ ಶರಣಾಗಿದ್ದ ನಗರದ ನೂರ್ ಅಹ್ಮದ್ ಬಾರಿ ಎಂಬ ವ್ಯಕ್ತಿಯ ಮೇಲಿನ ಆರೋಪ ಸಾಬೀತಾಗಿದ್ದು ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸಷೆನ್ಸ್‌ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹4.5 ಲಕ್ಷ ದಂಡ ವಿಧಿಸಿ ಆದೇಶಿಸಿದ್ದಾರೆ.

ಗಂಗಾವತಿಯ ಎಚ್.ಆರ್.ಎಸ್. ಕಾಲೊನಿ ನಿವಾಸಿ ನೂರ್ ಅಹ್ಮದ್ ಹೆಂಡತಿ ಮತ್ತು ಮೃತ ಮೌಲಾಹುಸೇನನ ಪತ್ನಿ ಇಬ್ಬರೂ ಖಾಸಾ ಸಹೋದರಿಯರಾಗಿದ್ದು, ಅಪರಾಧಿಯು ಇಲ್ಲಿನ ಸೇವಾಲಾಲ್ ಕ್ರಾಸ್‌ನಲ್ಲಿ ಮಾಂಸ ಮಾರಾಟದ ಅಂಗಡಿ ವ್ಯಾಪಾರ ನಡೆಸುತ್ತಿದ್ದ. ಎಚ್‌ಆರ್‌ಎಸ್‌ ಕಾಲೊನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. 

ADVERTISEMENT

ಕೊಲೆ ಮಾಡುವ ಕೆಲವು ತಿಂಗಳು ಮೊದಲು ತನ್ನ ಹೆಂಡತಿಯ ಅಕ್ಕನ ಗಂಡನಾದ ಮೃತ ಮೌಲಾಹುಸೇನ್‌ನನ್ನು ತನ್ನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರಲು ಕರೆಯಿಸಿಕೊಂಡು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದರು. ಕೃತ್ಯ ಎಸಗುವ ಒಂದು ದಿನ ಮೊದಲು ಅಪರಾಧಿ ಮತ್ತು ಆತನ ಪತ್ನಿ ತವರು ಮನೆ ಕಾರಟಗಿಗೆ ತೆರಳಿದ್ದಾಗ ಆ ದಿನ ಗಂಡ–ಹೆಂಡತಿ ನಡುವೆ ಜಗಳವಾಗಿದ್ದರಿಂದ ಪತ್ನಿ ತಲಾಖ್‌ ಕೇಳಿದ್ದಳು. 

ಇದಕ್ಕೆಲ್ಲಾ ಮೃತ ಮೌಲಾಹುಸೇನನೇ ಕುಮ್ಮಕ್ಕು ಕಾರಣವೆಂದು ಭಾವಿಸಿದ ಅಪರಾಧಿಯು ತನ್ನ ಮನೆಯಲ್ಲಿ ಮಲಗಿದ್ದ ಮೌಲಾಹುಸೇನನನ್ನು 2023ರ ಅಕ್ಟೋಬರ್ 3ರಂದು ಬೆಳಗಿನ ಜಾವ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿ ಅದನ್ನು ವ್ಯಾಟ್ಸ್‌ ಆ್ಯಪ್‌ ಹಾಗೂ ಇನ್‌ಸ್ಟಾಗ್ರಾಮ್‌ ಸಾಮಾಜಿಕ ತಾಣಗಳಲ್ಲಿ ಸ್ಟೇಟಸ್‌ ಇಟ್ಟುಕೊಂಡು ನಗರ ಪೊಲೀಸ್ ಠಾಣೆಗೆ ಶರಣಾಗಿದ್ದನು.

ನಗರ ಪೊಲೀಸ್ ಠಾಣೆಯ ಅಂದಿನ ತನಿಖಾಧಿಕಾರಿ ಅಡಿವೆಪ್ಪ ಗುದಿಕೊಪ್ಪ, ಮಂಜುನಾಥ ಎಸ್, ಆಂಜನೇಯ ಡಿ.ಎಸ್. ಮತ್ತು ಪೊಲೀಸ್‌ ಇನ್‌ಸ್ಟೆಕ್ಟರ್‌ ಪ್ರಕಾಶ ಮಾಳಿ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ಪ್ರಕಟಿಸಿದ್ದಾರೆ.

302 ಕಲಂ ಅಪರಾಧಕ್ಕೆ ಜೀವಾವಧಿ ಹಾಗೂ ₹4.50 ಲಕ್ಷ ದಂಡ, ದಂಡದ ಮೊತ್ತವನ್ನ ತೀರ್ಪಿನ ಮೂರು ತಿಂಗಳ ಒಳಗಾಗಿ ಪಾವತಿಸದಿದ್ದರೆ ಒಂದು ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ನಾಗಲಕ್ಷ್ಮೀ ಎಸ್‌. ಅವರು ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.