ADVERTISEMENT

ಕುಷ್ಟಗಿ: ಯುವಕನ ಕೊಲೆ– ಮನೆಯಲ್ಲೇ ಶವಕ್ಕೆ ಬೆಂಕಿ!

ಕುಷ್ಟಗಿ ತಾಲ್ಲೂಕು ಹಿರೇಮನ್ನಾಪುರದಲ್ಲಿ ಘಟನೆ: ಅನೈತಿಕ ಸಂಬಂಧದ ಶಂಕೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 6:53 IST
Last Updated 1 ಅಕ್ಟೋಬರ್ 2024, 6:53 IST
ಶರಣಪ್ಪ ಮಸ್ಕಿ
ಶರಣಪ್ಪ ಮಸ್ಕಿ   

ಕುಷ್ಟಗಿ: ಯುವಕನೊಬ್ಬನನ್ನು ಆತನ ಮನೆಯಲ್ಲಿಯೇ ಭೀಕರವಾಗಿ ಕೊಲೆಗೈದ ದುಷ್ಕರ್ಮಿಗಳು ನಂತರ ಅರೆಬರೆಯಾಗಿ ಸುಟ್ಟು ಪರಾರಿಯಾರುವ ಘಟನೆ ತಾಲ್ಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ಬೆಳಕಿಗೆ ಬಂದಿದೆ.

ಮೃತನನ್ನು ಶರಣಪ್ಪ ಶಿವಪ್ಪ ಮಸ್ಕಿ (22) ಎಂದು ಗುರುತಿಸಲಾಗಿದ್ದು, ಕೂಲಿಕಾರ್ಮಿಕನಾಗಿದ್ದ ಆತನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತನ ಪಕ್ಕದಲ್ಲಿಯೇ ಅಡುಗೆ ಅನಿಲದ ಸಿಲಿಂಡರ್‌ ಇತ್ತು. ಬೆಳಿಗ್ಗೆ ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಯವರು ಮೃತನ ತಂದೆಗೆ ಮಾಹಿತಿ ನೀಡಿದ ಘಟನೆ ಬೆಳಕಿಗೆ ಬಂದಿದೆ.

ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ವಿಧಿವಿಜ್ಞಾನ ವೈಜ್ಞಾನಿಕ ತಂಡದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ, ಡಿವೈಎಸ್‌ಪಿ ಸಿದ್ಧಲಿಂಗಪ್ಪಗೌಡ, ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್‌ಐ ಹನುಮಂತಪ್ಪ ತಳವಾರ ಭೇಟಿ ನೀಡಿದ್ದರು. ಮೃತನ ತಂದೆ ಶಿವಪ್ಪ ಮಸ್ಕಿ ನೀಡಿದ ದೂರಿನ ಅನ್ವಯ ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಸುತ್ತಲೂ ಅನೇಕ ಮನೆಗಳಿದ್ದರೂ ಘಟನೆ ನಡೆದಿರುವುದು ಯಾರ ಗಮನಕ್ಕೂ ಬಂದಿಲ್ಲ ಎನ್ನಲಾಗಿದೆ. ರಾತ್ರಿ ಬಹಳ ಹೊತ್ತಿನವರೆಗೂ ಯುವಕ ತಿರುಗಾಡಿದ್ದನ್ನು ಜನರು ಗಮನಿಸಿದ್ದಾರೆ. ಆದರೆ ಬೆಳಗಿನಜಾವ ಘಟನೆ ನಡೆದಿರುವ ಸಾಧ್ಯತೆ ಇದೆ. ಆ ಸಮಯದಲ್ಲಿ ವಿದ್ಯುತ್‌ ಕೂಡ ಇರಲಿಲ್ಲ ಎಂದು ಗ್ರಾಮದ ಮೂಲಗಳು ತಿಳಿಸಿವೆ. ತಾಯಿ ಇಲ್ಲ, ಅವಿವಾಹಿತನಾಗಿದ್ದ ಯುವಕ ತಂದೆಯ ಜೊತೆಗೆ ಇದ್ದು ಘಟನೆ ನಡೆದ ದಿನ ತಂದೆ ಬೇರೆ ಊರಿಗೆ ಹೋಗಿದ್ದರು ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಇದೇ ಮನೆಯಲ್ಲಿ ಮಹಿಳೆಯೊಬ್ಬರು ಇದ್ದರು. ಅನೈತಿಕ ಸಂಬಂಧವೇ ಕೊಲೆಗೆ ಕಾರಣವಾಗಿರಬಹುದು ಎಂದು ಹೆಸರು ಬಹಿರಂಗಪಡಿಸದ ಗ್ರಾಮದ ಮೂಲಗಳು ಅನುಮಾನ ವ್ಯಕ್ತಪಡಿಸಿವೆ.

ಈ ಕುರಿತು ವಿವರಿಸಿದ ಸಿಪಿಐ ಯಶವಂತ ಬಿಸನಳ್ಳಿ, ‘ಕೊಲೆಗೆ ಕಾರಣ ಗೊತ್ತಾಗಿಲ್ಲ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.