ADVERTISEMENT

ಮುಸ್ಲಿಮರು, ಕ್ರೈಸ್ತರಿಗೆ ವ್ಯಾಪಾರಕ್ಕೆ ಅವಕಾಶ ಬೇಡ: ಮುತಾಲಿಕ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 4:10 IST
Last Updated 6 ಡಿಸೆಂಬರ್ 2022, 4:10 IST
ಅಂಜನಾದ್ರಿಯಲ್ಲಿ ಆಂಜನೇಯದ ದರ್ಶನ ಪಡೆದ ಪ್ರಮೋದ ಮುತಾಲಿಕ್‌
ಅಂಜನಾದ್ರಿಯಲ್ಲಿ ಆಂಜನೇಯದ ದರ್ಶನ ಪಡೆದ ಪ್ರಮೋದ ಮುತಾಲಿಕ್‌   

ಕೊಪ್ಪಳ: ‘ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳ ಪ್ರಕಾರವೇ ಅಂಜನಾದ್ರಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕು. ದೇವಸ್ಥಾನದ 200 ಮೀಟರ್‌ ಅಂತರದಲ್ಲಿ ಮುಸ್ಲಿಮರಿಗೆ ಹಾಗೂ ಕ್ರೈಸ್ತರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು’ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಆಗ್ರಹಿಸಿದರು.

ಅಂಜನೇಯನ ದರ್ಶನ ಪಡೆದ ಬಳಿಕ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಒಂದು ವೇಳೆ ಅವಕಾಶ ನೀಡಿದರೆ ಹನುಮ ಭಕ್ತರೇ ಅವರನ್ನು ಓಡಿಸುತ್ತಾರೆ’ ಎಂದರು.

‘ಹಿಂದೂತ್ವವನ್ನು ಉಳಿಸಲು ಹಾಗೂ ಅವರ ರಕ್ಷಣೆಗೆ 25 ಜನ ಹಿಂದೂ ಕಾರ್ಯಕರ್ತರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಕೊಡಬೇಕು ಎನ್ನುವ ಬೇಡಿಕೆಯನ್ನು ಈಗಾಗಲೇ ಬಿಜೆಪಿಗೆ ತಿಳಿಸಿದ್ದೇವೆ. ಒಂದು ವೇಳೆ ಟಿಕೆಟ್‌ ಕೊಡದಿದ್ದರೆ ನಮ್ಮ ಸಂಘಟನೆಯಿಂದಲೇ 25 ಜನರನ್ನು ಕಣಕ್ಕೆ ಇಳಿಸಲಾಗುವುದು. ನಾನೂ ಸ್ಪರ್ಧಿಸುತ್ತೇನೆ’ ಎಂದು ತಿಳಿಸಿದರು.

ADVERTISEMENT

‘ರಾಜ್ಯದಲ್ಲಿ ರೌಡಿಶೀಟರ್‌ಗಳನ್ನು ಹಾಗೂ ಭಯೋತ್ಪಾದಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗುತ್ತಿದೆ. ಇದು ಪಕ್ಷಕ್ಕೆ ಶೋಭೆಯಲ್ಲ. ಬಿಜೆಪಿ ಕೂಡ ತುಷ್ಠೀಕರಣದ ರಾಜಕಾರಣ ಮಾಡುತ್ತ ಕಾಂಗ್ರೆಸ್‌ ಹಾದಿಯಲ್ಲಿ ಸಾಗುತ್ತಿದೆ. ಸಂಘದವರು ಈಗಲೇ ಎಚ್ಚೆತ್ತುಕೊಳ್ಳಬೇಕು. ಬಿಜೆಪಿ ಇರುವುದೇ ಹಿಂದೂಗಳ ರಕ್ಷಣೆಗಾಗಿ’ ಎಂದರು.

‘ಮಾಲಾಧಾರಿಗಳ ಬಗ್ಗೆ ಕೆಲ ವರ್ಷಗಳ ಹಿಂದೆ ಅವಹೇಳನಕಾರಿಯಾಗಿ ಮಾತನಾಡಿದ ಇಕ್ಬಾಲ್‌ ಅನ್ಸಾರಿ ಕುತಂತ್ರಕ್ಕೆ ಹಿಂದೂಗಳು ಬಲಿಯಾಗಬಾರದು. ಕೊನೆಯವರೆಗೂ ಇಲ್ಲಿನ ಕ್ಷೇತ್ರ ಹಿಂದೂಗಳ ಕೈಯಲ್ಲಿಯೇ ಇರುತ್ತದೆ. ಇಕ್ಬಾಲ್‌ ಅನ್ಸಾರಿ ಯಾವ ಕನಸು ಕಾಣುವ ಅಗತ್ಯವಿಲ್ಲ. ಹನುಮನ ಶಾಪ ಅನ್ಸಾರಿಗೆ ತಟ್ಟದೇ ಇರದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.