ADVERTISEMENT

ಸುಪ್ತ ಪ್ರತಿಭೆ ಗುರುತಿಸುವುದೇ ಸಾಧನೆಗೆ ಮುನ್ನುಡಿ: ನಾ.ಸೊಮೇಶ್ವರ ಕಿವಿಮಾತು

ಗವಿಮಠ ಜಾತ್ರಾ ಮಹೋತ್ಸವಕ್ಕೆ ಸಂಭ್ರಮದ ತೆರೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 6:38 IST
Last Updated 8 ಜನವರಿ 2026, 6:38 IST
ಗವಿಮಠದ ಜಾತ್ರೆಯಲ್ಲಿ ಬುಧವಾರ ತಮಿಳುನಾಡಿನ ಮಕ್ಕಳು ಯೋಗ ನೃತ್ಯ ಪ್ರದರ್ಶಿಸಿದರು
ಗವಿಮಠದ ಜಾತ್ರೆಯಲ್ಲಿ ಬುಧವಾರ ತಮಿಳುನಾಡಿನ ಮಕ್ಕಳು ಯೋಗ ನೃತ್ಯ ಪ್ರದರ್ಶಿಸಿದರು   

ಕೊಪ್ಪಳ: ‘ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿ ಮಾಡಬೇಕು. ಅವರಲ್ಲಿನ ಸುಪ್ತ ಪ್ರತಿಭೆಯನ್ನು ಬಾಲ್ಯದಲ್ಲಿಯೇ ಗುರುತಿಸಿದರೆ ಅದು ಭವಿಷ್ಯದಲ್ಲಿ ದೊಡ್ಡ ಸಾಧನೆಗೆ ಮುನ್ನುಡಿಯಾಗುತ್ತದೆ’ ಎಂದು ಲೇಖಕ‌ ನಾ.ಸೋಮೇಶ್ವರ ಹೇಳಿದರು.

ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಕೈಲಾಸ ಮಂಟಪದಲ್ಲಿ ನಡೆದ ಜಾತ್ರೆಯ ಸಮಾರೋಪ‌ ಕಾರ್ಯಕ್ರಮದಲ್ಲಿ ‌ಮಾತನಾಡಿದ ಅವರು, ‘ಮಗುವಿನ ಜನ್ಮದತ್ತ ಗುಣ ಏನು ಎನ್ನುವುದನ್ನು ಪ್ರಾಮಾಣಿಕವಾಗಿ ಗುರುತಿಸುವ ಕೆಲಸವಾಗಬೇಕು. ಆ ಸುಪ್ತ ಪ್ರತಿಭೆ ಹೊರಬರಲು ಏನು ಕ್ರಮ ಕೈಗೊಂಡಿದ್ದೀರಿ ಎನ್ನುವುದನ್ನು ಗುರುತಿಸಿ. ಆಗ ಮಕ್ಕಳು ದೇಶದ ಆಸ್ತಿ ಆಗುತ್ತಾರೆ’ ಎಂದರು.

‘ದಿಗ್ಗಜ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ಹಾಗೂ ಸಚಿನ್ ತೆಂಡೂಲ್ಕರ್ ಅವರ ಬದುಕಿನ ಕಥನವನ್ನು ಉದಾಹರಣೆಯಾಗಿ ನೀಡಿದ ಅವರು ದೊಡ್ಡ ಸಾಧನೆ ಮಾಡಿದ ಬಳಿಕ‌ ಮಕ್ಕಳು ತಾಯಿ, ತಾಯಿಭಾಷೆ ಹಾಗೂ ತಾಯ್ನಾಡಿನ ಬಗ್ಗೆ ಅಭಿಮಾನ ಉಳಿಸಿಕೊಳ್ಳಬೇಕು. ಇದನ್ನು ಮೀರಿದವರು ಯಾರೂ ಇಲ್ಲ. ಜಾತ್ರೆಯ ಸಮಾರೋಪ ಈ ವರ್ಷದ ಜಾತ್ರೆಗೆ ಮಾತ್ರ ಸೀಮಿತ. ಸಾಧನೆಯ ನವಮನ್ವಂತರಕ್ಕೆ ಜಾತ್ರೆಯ ಕಾರ್ಯಕ್ರಮಗಳು ಅಂಕುರವಾಗಲಿ’ ಎಂದು ಹಾರೈಸಿದರು.

ADVERTISEMENT

ಇದಕ್ಕೂ ‌ಮೊದಲು‌ ಮಾತನಾಡಿದ ನಟ ಎಚ್.ಜಿ.ದತ್ತಾತ್ರೇಯ (ದತ್ತಣ್ಣ), ‘ಶರಣ ಪರಂಪರೆಯಲ್ಲಿ ಅಕ್ಷರ, ಅನ್ನ ದಾಸೋಹ ಮಹತ್ವ ಪಡೆದುಕೊಂಡಿವೆ. ಗವಿಮಠದ ಇತಿಹಾಸ ಕೇಳಿದಾಗ ರೋಮಾಂಚನವಾಯಿತು. ಕಾರ್ಯಕ್ರಮದಲ್ಲಿ ಇದೊಂದು ಅದ್ಭುತ ಕ್ಷಣ. ಒದಗಿದ ಸೌಭಾಗ್ಯ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅಶಾಂತಿ ಸೃಷ್ಟಿಯಾದ ಸಮಯದಲ್ಲಿ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರುವ ಇಂತಹ ಯತ್ನ ಉತ್ತಮ ಸಂದೇಶ. ಅಮೆರಿಕಾ, ಜೀನಿವಾ ದೇಶದವರು ಇದನ್ನು ನೋಡಲಿ. ಜಗತ್ತಿನಲ್ಲಿ ಶಾಂತಿ ನೆಲೆಸುವಂತಾಗಲಿ’ ಎಂದರು.

‘ಗವಿಮಠಕ್ಕೆ ಬಂದ ಮೇಲೆ ಅರಿವು, ಬೆರಗು ಪದಗಳ ನಿಜವಾದ ಅರ್ಥವಾಗಿದೆ‌. ನಾವು ಎಷ್ಟೇ‌ ಮಾಹಿತಿ ಹೊಂದಿದ್ದರೂ ಸ್ವಂತ ಅನುಭವ ಬೇರೆಯೇ ಆಗಿರುತ್ತದೆ. ಇಂದು ಅನುಭವಕ್ಕೆ ಬಂದಿದೆ’ ಎಂದು ಹೇಳಿದರು.

ಜಾನಪದ ‌ಕಾರ್ಯಕ್ರಮ: ಬೆಂಗಳೂರಿನ ಮುನಿರಾಜು ಕಡಬಿಗೇರಿ ಹಾಗೂ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಜನಪದ ಚಾವಡಿ ಜರುಗಿತು.

ಕೊನೆಯಲ್ಲಿ ಹಾಸ್ಯ‌ ಭಾಷಣಕಾರ ಗಂಗಾವತಿಯ ಬಿ.ಪ್ರಾಣೇಶ ಅವರ ಹಾಸ್ಯದ ಕಚಗುಳಿಗೆ ಮೈ ನಡುಗಿಸುವ ಚಳಿಯನ್ನೂ ಸಹಿಸಿಕೊಂಡು ಕುಳಿತಿದ್ದ ಸಾವಿರಾರು ಜನರನ್ನು ನಗೆಗಡಲಲ್ಲಿ ತೇಲಾಡುವಂತೆ ಮಾಡಿತು.

ಹಿರೇಸಿಂದೋಗಿ ಕಪ್ಪತ್ತೇಶ್ವರಮಠದ ಚಿದಾನಂದ ಸ್ವಾಮೀಜಿ, ಮೈನಳ್ಳಿ-ಬಿಕನಹಳ್ಳಿ ಹಿರೇಮಠದ ಸಿದ್ದೇಶ್ವರ ಸ್ವಾಮೀಜಿ, ನಿಡಗುಂದಿಕೊಪ್ಪ ಶಾಖಾಶಿವಯೋಗ ಮಂದಿರದ ಶಿವಬಸವ ಸ್ವಾಮೀಜಿ, ಬಿಜಕಲ್‌ನ ಶಿವಲಿಂಗ ಸ್ವಾಮೀಜಿ, ಭಾಗ್ಯನಗರದ ಶಂಕರಮಠದ ಶಿವರಾಮ ಕೃಷ್ಣಾನಂದ ಸ್ವಾಮೀಜಿ, ಹೂವಿನಹಡಗಲಿ ಶಾಖಾ ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಸಂತೆಕಲ್ಲೂರು ಮಹಾಂತೇಶ್ವರಮಠದ ಶಿವಾಚಾರ್ಯರು ಅಮಲಝರಿ-ಮೆಳ್ಳಿಗೇರಿಯ ಜ್ಞಾನಮಯಾನಂದ ಸ್ವಾಮೀಜಿ, ಗದಗ ರಾಜೂರ ಅಡ್ನೂರ ಬ್ರಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯರು ಸೇರಿ ಅನೇಕರು ಪಾಲ್ಗೊಂಡಿದ್ದರು.

ಸಾಧಕರಿಗೆ ಗೌರವ ಸಲ್ಲಿಕೆ

ಮಕ್ಕಳು ಶಾಲೆಗೆ ಹೋಗಲು ಅಡ್ಡವಾಗಿದ್ದ ಗುಡ್ಡವನ್ನು ಎರಡು ವರ್ಷಗಳ ಕಾಲ ಕಡಿದು ಎಂಟು ಕಿ.ಮೀ. ರಸ್ತೆ ಮಾಡಿದ ಒಡಿಶಾದ ಜಲಂಧರ್ ನಾಯಕ್, ಒಂದು ಬೆರಳು ಹೊರತುಪಡಿಸಿ ದೇಹದ ಉಳಿದ ಅಂಗಗಳ ಸ್ವಾಧೀನ ಇಲ್ಲದ ಬೆಂಗಳೂರಿನ ಎಂಜಿನಿಯರ್ ಅಶ್ವಿನ್ ಹಾಗೂ ತ್ಯಾಗದ ಮೂಲಕ ಬದುಕು ಕಟ್ಟಿಕೊಟ್ಟ ಅವರ ತಾಯಿ ಪ್ರಭಾ ಅವರನ್ನು ಸನ್ಮಾನಿಸಲಾಯಿತು.

ಜೀವನದಲ್ಲಿ ಏನನ್ನಾದರೂ ಸಾಧಿಸಲು ಹುರುಪು ತುಂಬುವುದೇ ಜಾತ್ರೆಯ ಉದ್ದೇಶ. ನಮ್ಮ ಉದ್ದೇಶ ಸಾಕಾರಗೊಳ್ಳಲಿ
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಗವಿಮಠ
ನಿಜವಾದ ಭಾರತವನ್ನು ನೋಡಲು ಕೊಪ್ಪಳದ ಜಾತ್ರೆಗೆ ಬರಬೇಕು.‌ ಗವಿಮಠದ ಅಭಿನವ ಸ್ವಾಮೀಜಿ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿಸಲು‌ ಟೊಂಕ ಕಟ್ಟಿ ‌ನಿಂತಿದ್ದಾರೆ
ಮಹಾಂತಪ್ರಭು ಸ್ವಾಮೀಜಿ, ಶೇಗುಣಸಿ ವಿರಕ್ತಮಠ
ಕೊಪ್ಪಳದ ಗವಿಮಠದ ಜಾತ್ರೆಯಲ್ಲಿ ಬುಧವಾರ ಮಾತನಾಡಿದ ನಾ. ಸೋಮೇಶ್ವರ
ನಟ ದತ್ತಣ್ಣ ಮಾತನಾಡಿದ ಕ್ಷಣ
ಕಾರ್ಯಕ್ರಮದಲ್ಲಿ ‌ಪಾಲ್ಗೊಂಡಿದ್ದ ಜನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.