ADVERTISEMENT

ಕನಕಗಿರಿ | ನ್ಯಾಯ ಬೆಲೆ ಅಂಗಡಿಗಳ ಮುಂದೆ ನಾಮಫಲಕ ಕಡ್ಡಾಯ: ಹಜರತ್ ಹುಸೇನ್

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 15:21 IST
Last Updated 10 ಸೆಪ್ಟೆಂಬರ್ 2024, 15:21 IST
ಕನಕಗಿರಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು
ಕನಕಗಿರಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು   

ಕನಕಗಿರಿ: ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಬಹಳ ಪ್ರಮುಖವಾಗಿವೆ.  ಅಧಿಕಾರಿ ವರ್ಗ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕ್ರಮ ವಹಿಸಬೇಕು ಎಂದು ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಹಜರತ್ ಹುಸೇನ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಭಾಗಗಳಿಗೆ ಸಮರ್ಪಕವಾಗಿ ಬಸ್ ಓಡಾಡುತ್ತಿಲ್ಲ. ಬಸ್ ವ್ಯವಸ್ಥೆ ಇಲ್ಲದ ಪರಿಣಾಮ ಶಾಲಾ ಮಕ್ಕಳು ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದಿರುವುದು ಕಂಡು ಬಂದಿದ್ದು, ಕೂಡಲೇ ಶಾಲಾ ಕಾಲೇಜುಗಳ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.

ADVERTISEMENT

ಸಾರಿಗೆ ಇಲಾಖೆಯ ಡಿಪೊ ವ್ಯವಸ್ಥಾಪಕರು ಸಭೆಗೆ ಗೈರು ಹಾಜರಾಗಿದ್ದರಿಂದ ಅಸಮಾಧಾನಗೊಂಡ ಅಧ್ಯಕ್ಷ ಹಜರತ್‌ ಹುಸೇನ್‌ ಮೇಲಧಿಕಾರಿಗಳಿಗೆ ವರದಿ ಮಾಡಲು ತಿಳಿಸಿದರು.

ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ ಸಾರ್ವಜನಿಕರ ಜತೆಗೆ ಸಭ್ಯತೆಯಿಂದ ನಡೆದುಕೊಳ್ಳಬೇಕು. ನ್ಯಾಯಬೆಲೆ ಅಂಗಡಿಗಳ ಮುಂದೆ ಕಡ್ಡಾಯವಾಗಿ ನಾಮಫಲಕ ಹಾಗೂ ವಿತರಕರ ಹೆಸರನ್ನು ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಹಾರ ಇಲಾಖೆಯ ಶಿರಸ್ತೇದಾರರಿಗೆ ಸೂಚಿಸಿದರು.

ಗೃಹಲಕ್ಷ್ಮಿ ಯೋಜನೆಯ ಹಣ ಸಾಕಷ್ಟು ಮಹಿಳೆಯರಿಗೆ ಪಾವತಿ ಆಗಿಲ್ಲ. ಈ ಬಗ್ಗೆ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಗ್ಯಾರಂಟಿ ಸಮಿತಿ ಸದಸ್ಯರು ಅಧಿಕಾರಿಗಳ ಗಮನಕ್ಕೆ ತಂದರು.

ನೋಂದಣಿಯಾದ ಎಲ್ಲಾ ಫಲಾನುಭವಿಗಳಿಗೆ ಹಣ ಜಮೆ ಆಗಲಿದೆ. ಕೆಲ ಫಲಾನುಭವಿಗಳಿಗೆ ತಾಂತ್ರಿಕ ತೊಂದರೆಯಿಂದ ಹಣ ಜಮೆಯಾಗಿಲ್ಲ. ಆ ಬಗ್ಗೆ ಕೂಡಲೇ ಕ್ರಮವಹಿಸಲಾಗುವುದು ಎಂದು ಶಿಶು ಅಭಿವೃದ್ಧಿ ಯೋಜ‌ನಾಧಿಕಾರಿ ವಿರೂಪಾಕ್ಷಿ ಹೇಳಿದರು.

ತಾಲ್ಲೂಕು ಪಂಚಾಯಿತಿಯ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಕೆ.ರಾಜಶೇಖರ ಮಾತನಾಡಿ, ಗೃಹಜ್ಯೋತಿ ಸೇರಿ ಎಲ್ಲಾ ಐದು ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ  ನಿರ್ದೇಶನ ನೀಡಿದರು.

ಕನಕಗಿರಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು

ಜೆಸ್ಕಾಂ ಎಇಇ ಗಳಾದ ವೀರೇಶ, ಮಂಜುನಾಥ, ಆನಂದ, ಸಾರಿಗೆ ಇಲಾಖೆಯ ಸಂಚಾರ ನಿಯಂತ್ರಕ ಶ್ರೀರಾಮ ನಾಯಕ, ಉದ್ಯೋಗ ವಿನಿಮಯ ಅಧಿಕಾರಿ ಶಿವಯೋಗಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಜಗದೀಶ ಅಂಗಡಿ, ನೀಲಕಂಠ ಬಡಿಗೇರ, ಕರಿಯಪ್ಪ ನಾಯಕ, ಯಮನೂರಪ್ಪ, ಕನಕಪ್ಪ ತಳವಾರ, ನಾಗರಾಜ, ಚೆನ್ನಬಸನಗೌಡ, ಹನುಮಮ್ಮ ಪಾಟೀಲ, ವೀರೇಶ‌ ನವಲಿ ಹಾಗೂ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.