ADVERTISEMENT

ಉದ್ಯೋಗ ಖಾತರಿ ಯೋಜನೆ: ಅಂತರ್ಜಲ ಹೆಚ್ಚಳಕ್ಕೆ ಇಂಗು ಗುಂಡಿ

ಉದ್ಯೋಗ ಖಾತರಿ ಯೋಜನೆಯಲ್ಲಿ ರೈತರ ತೋಟಗಳಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 31 ಮೇ 2021, 11:24 IST
Last Updated 31 ಮೇ 2021, 11:24 IST
ಹನುಮಸಾಗರ ಸಮೀಪದ ಹಾಬಲಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂಗು ಗುಂಡಿ ನಿರ್ಮಿಸಲಾಗುತ್ತಿದೆ
ಹನುಮಸಾಗರ ಸಮೀಪದ ಹಾಬಲಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂಗು ಗುಂಡಿ ನಿರ್ಮಿಸಲಾಗುತ್ತಿದೆ   

ಹನುಮಸಾಗರ: ಸಮೀಪದ ಹಾಬಲಕಟ್ಟಿ, ಮಾಸ್ತಕಟ್ಟಿ, ಗಡಚಿಂತಿ ಗ್ರಾಮಗಳಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿ ಕೊಳವೆಬಾವಿಗೆ ವೈಜ್ಞಾನಿಕವಾಗಿ ಇಂಗುಗುಂಡಿ ನಿರ್ಮಾಣ ಮಾಡಲಾಗುತ್ತಿದೆ. ಇದು ಸುತ್ತಲಿನ ರೈತರಿಗೆ ಉತ್ತೇಜನ ನೀಡುತ್ತಿದೆ.

‘ಅಂತರ್ಜಲ ಕುಸಿದಿದೆ. ತೋಟಗಳಲ್ಲಿಯ ಹಾಗೂ ಕುಡಿಯುವ ನೀರು ಪೂರೈಸುವ ಕೊಳವೆಬಾವಿಗಳು ಬತ್ತಿವೆ. ಗ್ರಾಮ ಪಂಚಾಯಿತಿಯ ತಾಂತ್ರಿಕ ಸಲಹೆ ಹಾಗೂ ಆರ್ಥಿಕ ನೆರವಿನಿಂದ ಇಂಗು ಗುಂಡಿ ನಿರ್ಮಾಣ ಮಾಡುತ್ತಿದ್ದೇನೆ. ಒಂದೆರಡು ಮಳೆಯಾದರೆ ಕೊಳವೆಬಾವಿಗೆ ನೀರು ಬರುವ ವಿಶ್ವಾಸವಿದೆ’ ಎಂದು ಇಂಗು ಗುಂಡಿ ನಿರ್ಮಾಣ ಮಾಡುತ್ತಿರುವ ಬಸವರಾಜ ಪಾಟೀಲ ಹೇಳಿದರು.

ಮಳೆಗಾಲದಲ್ಲಿ ನೀರು ಹರಿಯುವ ನಾಲೆಗಳನ್ನು ಅಗೆದು ಮಧ್ಯದಲ್ಲಿ ಚೆಕ್‍ಡ್ಯಾಮ್ ತರಹದ್ದನ್ನು ಮಾಡಿ ನೀರು ನಿಲ್ಲಿಸಲಾಗುತ್ತದೆ. ಜತೆಗೆ ಮಧ್ಯದಲ್ಲಿ ಸಿಮೆಂಟ್ ಪೈಪ್ ರೋಲರ್ ಜೋಡಿಸಿ ಸುತ್ತಲೂ ಗುಂಡು ಕಲ್ಲುಗಳನ್ನು ತುಂಬಿ ಅದರ ಮೇಲಿನ ಭಾಗದಲ್ಲಿ ಜಲ್ಲಿ ಹಾಕಿ ಹರಿಯುವ ನೀರಿಗೆ ತಡೆಗೋಡೆ ಮಾಡಿದ್ದಾರೆ.

ADVERTISEMENT

ಇಲ್ಲಿಂದ ಹೆಚ್ಚಾದ ನೀರು ಮುಂದೆ ಹರಿದು, ಕೊಳವೆಬಾವಿ ಸುತ್ತ 7 ಅಡಿ ಅಗಲ ಹಾಗೂ 10 ಅಡಿ ಉದ್ದ ಬಾವಿ ತೋಡಿ ಕಲ್ಲುಗಳನ್ನು ತುಂಬಿರುವ ತಗ್ಗಿಗೆ ಹರಿದು ಬರುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವೇಂದ್ರಪ್ಪ ಕಮತರ ಮಾಹಿತಿ ನೀಡಿ,‘ನೇರಗಾ ಯೋಜನೆ ಅಡಿ ಬೋಲ್ಡರ್ ಚೆಕ್ ಹಾಗೂ ಕೊಳವೆಬಾವಿಗೆ ಇಂಗು ಗುಂಡಿ ನಿರ್ಮಾಣ ಕಾಮಗಾರಿಗೆ ತಲಾ ₹2 ಲಕ್ಷ ಮಂಜೂರು ಮಾಡಲಾಗಿದೆ. ಹಾಬಲಕಟ್ಟಿಯಲ್ಲಿ ಐದು, ಮಾಸ್ತಕಟ್ಟಿಯಲ್ಲಿ ಎರಡು, ಗಡಚಿಂತಿಯಲ್ಲಿ ಎರಡು ಕಡೆ ಕಾಮಗಾರಿ ಮಾಡಲಾಗಿದೆ. ಅದು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ’ ಎಂದು ಹೇಳಿದರು.

ನರೇಗಾ ಯೋಜನೆಯ ತಾಲ್ಲೂಕು ಎಂಜಿನಿಯರ್ ರವಿರಾಜ ಹುಲಿ ಮಾಹಿತಿ ನೀಡಿ,‘ಹರಿಯುವ ನೀರನ್ನು ಜಮೀನಿನಲ್ಲಿ ತಡೆದು ನಿಲ್ಲಿಸಿದರೆ, ಕೊಳವೆಬಾವಿಗೆ ನೀರು ಬರುತ್ತದೆ ಜತೆಗೆ ಇದು ಅಂತರ್ಜಲ ಹೆಚ್ಚಳಕ್ಕೆ ಪೂರಕವಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.