ADVERTISEMENT

ಕನಕಗಿರಿ: ಖಾಸಗಿಯವರ ಅಡ್ಡೆಯಾದ ಬಸ್ ನಿಲ್ದಾಣ

ಮೆಹಬೂಬ ಹುಸೇನ
Published 14 ಜುಲೈ 2025, 4:20 IST
Last Updated 14 ಜುಲೈ 2025, 4:20 IST
<div class="paragraphs"><p>ಕನಕಗಿರಿ ತಾಲ್ಲೂಕಿನ ನವಲಿ ಗ್ರಾಮದ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ತಂಗುದಾಣವಾಗಿ ಬದಲಾಗಿರುವುದು</p></div>

ಕನಕಗಿರಿ ತಾಲ್ಲೂಕಿನ ನವಲಿ ಗ್ರಾಮದ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ತಂಗುದಾಣವಾಗಿ ಬದಲಾಗಿರುವುದು

   

ಕನಕಗಿರಿ: ತಾಲ್ಲೂಕಿನ ಹೋಬಳಿ ಕೇಂದ್ರವಾಗಿರುವ ನವಲಿ ಗ್ರಾಮದ ಬಸ್ ನಿಲ್ದಾಣಕ್ಕೆ ಈವರೆಗೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಖಾಸಗಿ ವಾಹನಗಳ ತಂಗುದಾಣವಾಗಿದೆ. ಮೂಲಸೌಲಭ್ಯಗಳಿಲ್ಲದೆ ಬಸ್‌ ನಿಲ್ದಾಣ ಸೊರಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮಕೈಗೊಳ್ಳಬೇಕಿದೆ.

ನವಲಿ ಬಸ್‌ ನಿಲ್ದಾಣದಿಂದ ಕಾರಟಗಿ, ಗಂಗಾವತಿ, ಕುಷ್ಟಗಿ, ಕೊಪ್ಪಳ, ತಾವರಗೇರಾ ಪಟ್ಟಣಗಳಿಗೆ ನಿತ್ಯ ಬಸ್‌ಗಳು ಸಂಚರಿಸುತ್ತವೆ. ನಿರ್ವಹಣೆಯಿಲ್ಲದ ಕಾರಣ ಯಾವ ಬಸ್‌ಗಳೂ ಸಹ ನಿಲ್ದಾಣದಲ್ಲಿ ನಿಲುಗಡೆ ಆಗುತ್ತಿಲ್ಲ. ಕನಕಗಿರಿ-ಗಂಗಾವತಿಯ ರಸ್ತೆಯಲ್ಲಿ ಬಸ್‌ ನಿಲ್ಲಿಸಲಾಗುತ್ತಿದ್ದು, ಪ್ರಯಾಣಿಕರು ಮಳೆ, ಬೇಸಿಗೆಯಲ್ಲಿ ಸಮಸ್ಯೆ ಎದುರಿಸುವಂತಾಗಿದೆ.

ADVERTISEMENT

ಉದ್ಘಾಟನೆ ಭಾಗ್ಯ ಇಲ್ಲ: ಐದು ವರ್ಷಗಳ ಹಿಂದೆ ಮಾಜಿ ಶಾಸಕ ಬಸವರಾಜ ದಢೇಸೂಗೂರು ಅವರು ಬಸ್ ನಿಲ್ದಾಣದ ಕಾಮಗಾರಿಗೆ ₹ 60 ಲಕ್ಷ ಅನುದಾನ ಮಂಜೂರು ಮಾಡಿಸಿ, ಕಾಮಗಾರಿ ಪೂರ್ಣಗೊಳಿಸಿದ್ದರು. ಆದರೆ ಅನುದಾನದ ಕೊರತೆಯಿಂದಾಗಿ ನಿಲ್ದಾಣದ ಕಾಮಗಾರಿ ಅರೆಬರೆಯಾಗಿತ್ತು.

ಸದ್ಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಸನಗಳ ವ್ಯವಸ್ಥೆ, ಎರಡು ಚಿಕ್ಕ ಮಳಿಗೆ, ಸಾರಿಗೆ ನಿಯಂತ್ರಕರ ಕೊಠಡಿ ನಿರ್ಮಾಣವಾಗಿದೆ. ಆದರೆ ಮೂಲಸೌಲಭ್ಯಗಳು ಸೇರಿದಂತೆ ಇತರೆ ಕೆಲಸಗಳು ಸಾಕಷ್ಟು ಉಳಿದುಕೊಂಡಿವೆ. ಜತೆಗೆ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಸ್‌ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ.

ಅನುದಾನಕ್ಕೆ ತಕ್ಕಂತೆ ಕಾಮಗಾರಿ ಮಾಡಲಾಗಿದೆ. ಇನ್ನಷ್ಟು ಸೌಲಭ್ಯ ಒದಗಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಜನಪ್ರತಿನಿಧಿಗಳು ಬಸ್‌ ನಿಲ್ದಾಣಕ್ಕೆ ಉದ್ಘಾಟನೆ ಭಾಗ್ಯ ನೀಡಿಲ್ಲ. ಹೀಗಾಗಿ ಜನರು ಮೂಲ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಮಲ್ಲಪ್ಪ, ನಾಗಪ್ಪ ದೂರುತ್ತಾರೆ.

ಬಸ್ ನಿಲ್ದಾಣದ ಜಾಗದಲ್ಲಿ ಕಿಡಿಗೇಡಿಗಳು ಕಿಡಕಿಗೆ ಅಳವಡಿಸಿದ ಗ್ಲಾಸ್‌ ಗಳನ್ನು ಒಡೆದಿದ್ದಾರೆ. ಸಚಿವರಾದ ಶಿವರಾಜ ತಂಗಡಗಿ ಅವರು ಆದಷ್ಟು ಬೇಗ ಅನುದಾನ ಬಿಡುಗಡೆಗೊಳಿಸಿ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸಾರಿಗೆ ವಾಹನಗಳ ತಂಗುದಾಣ: ಈ ಬಸ್‌ ನಿಲ್ದಾಣವು ಖಾಸಗಿ ವಾಹನಗಳಿಗೆ ತಂಗುದಾಣವಾಗಿದೆ. ಖಾಸಗಿ ವಾಹನಗಳ ಮಾಲೀಕರು, ನಿಲ್ದಾಣದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಾರೆ.

ಆರಂಭದಲ್ಲಿ ಸಾರಿಗೆ‌ ನಿಯಂತ್ರಕರೊಬ್ಬರನ್ನು ನೇಮಕ ಮಾಡಲಾಗಿತ್ತು. ಸಾರಿಗೆ ನಿಗಮದವರು ಅವರನ್ನು ಹಿಂದಕ್ಕೆ ಪಡೆದಿದ್ದರಿಂದ ಬಸ್ ನಿಲ್ದಾಣ‌ವು ಖಾಸಗಿ ವಾಹನಗಳ ತಂಗುದಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಗುಟ್ಕಾ‌ ತಿಂದು ಉಗುಳುವುದು, ಮದ್ಯ ಸೇವಿಸಿ, ಖಾಲಿ ಬಾಟಲಿ ಬಿಸಾಕಿ ರುವುದು, ಬೀಡಿ, ಸಿಗರೇಟ್ ಪ್ಯಾಕೆಟ್‌, ಪ್ಲಾಸ್ಟಿಕ್‌ ತ್ಯಾಜ್ಯಗಳು ಎಲ್ಲೆಂದರಲ್ಲಿ ಬಿದ್ದಿವೆ. ಪ್ರಯಾಣಿಕರ ಅನುಕೂಲಕ್ಕೆ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ವ್ಯವಸ್ಥೆ, ವಿದ್ಯುತ್ ಸಂಪರ್ಕ ಇಲ್ಲವಾಗಿದೆ. ಬೆಳಕಿನ ವ್ಯವಸ್ಥೆಯಿಲ್ಲದ ಹಿನ್ನೆಲೆಯಲ್ಲಿ ರಾತ್ರಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಬಸ್ ನಿಲ್ದಾಣದ ರಸ್ತೆಯನ್ನು ಡಾಂಬರೀಕರಣಗೊಳಿಸಿಲ್ಲ. ಮಳೆ ಬಂದರೆ ನೀರು ಸಂಗ್ರಹಗೊಳ್ಳುತ್ತದೆ. ಶೌಚಾಲಯ ಗಬ್ಬೆದ್ದು ನಾರುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ ಎಂದು ಸಮೀಪದ ನಿವಾಸಿಗಳು ದೂರಿದ್ದಾರೆ.

ಬಸ್‌ ನಿಲ್ದಾಣಕ್ಕೆ ಶಾಶ್ವತ ಹಾಗೂ ಉತ್ತಮ ಶೌಚಾಲಯ, ಚಾವಣಿ, ರಸ್ತೆ ನಿರ್ಮಾಣಕ್ಕೆ ₹ 2.20 ಕೋಟಿಯ ಕ್ರಿಯಾಯೋಜನೆ‌ ರೂಪಿಸಿ ಅನುಮೋದನೆಗೆ ಕಳುಹಿಸಲಾಗಿದೆ. ಹಣ ಬಿಡುಗಡೆಗೊಂಡ ನಂತರ ಕೆಲಸ ಆರಂಭಿಸಲಾಗುವುದು
ವೆಂಕಟೇಶ, ಎಇಇ ಕಲ್ಯಾಣ‌ ಕರ್ನಾಟಕ ಸಾರಿಗೆ ನಿಗಮ ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.