ADVERTISEMENT

ಕೊಪ್ಪಳ | 'ನವಲಿ ಸಮಾನಾಂತರ; ಹೋರಾಟಕ್ಕೆ ನಿರ್ಧಾರ'

ಎರಡನೇ ಬೆಳೆಗೆ ನೀರಿಲ್ಲ; ಬಿ.ವೈ. ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 4:45 IST
Last Updated 16 ನವೆಂಬರ್ 2025, 4:45 IST
ಬೆಂಗಳೂರಿನಲ್ಲಿ ಶನಿವಾರ ಬಿ.ವೈ. ವಿಜಯೇಂದ್ರ ಅಧ್ಯಕ್ಷತೆಯಲ್ಲಿ ತುಂಗಭದ್ರಾ ಜಲಾಶಯದಿಂದ ನೀರು ಪಡೆಯುವ ಕುರಿತು ಸಭೆ ನಡೆಯಿತು
ಬೆಂಗಳೂರಿನಲ್ಲಿ ಶನಿವಾರ ಬಿ.ವೈ. ವಿಜಯೇಂದ್ರ ಅಧ್ಯಕ್ಷತೆಯಲ್ಲಿ ತುಂಗಭದ್ರಾ ಜಲಾಶಯದಿಂದ ನೀರು ಪಡೆಯುವ ಕುರಿತು ಸಭೆ ನಡೆಯಿತು   

ಕೊಪ್ಪಳ: ತುಂಗಭದ್ರಾ ಜಲಾಶಯದ ನೀರು ಸಂಗ್ರಹಕ್ಕೆ ಕನಕಗಿರಿ ಸಮೀಪದ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲು ಯೋಜನೆ ರೂಪಿಸಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ, ಜನವರಿಯಲ್ಲಿ ಈ ಕುರಿತು ದೊಡ್ಡಮಟ್ಟದಲ್ಲಿ ಹೋರಾಟ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಕ್ಷದ ಪ್ರಮುಖರಿಗೆ ಸೂಚಿಸಿದರು.

ಜಲಾಶಯದಿಂದ ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ರೈತರಿಗೆ ಎರಡನೇ ಬೆಳೆಗೆ ನೀರು ಹರಿಸುವುದಿಲ್ಲ ಎಂದು ಶುಕ್ರವಾರ ನಡೆದ ಐಸಿಸಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಈ ನಾಲ್ಕೂ ಜಿಲ್ಲೆಗಳ ಬಿಜೆಪಿ ಪ್ರಮುಖರು ಶನಿವಾರ ಸಭೆ ನಡೆಸಿದರು. ಸಂಸದರಾದ ಗೋವಿಂದ ಎಂ. ಕಾರಜೋಳ, ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಆರ್‌. ಅಶೋಕ ಪಾಲ್ಗೊಂಡಿದ್ದರು.

‘ನವಲಿ ಸಮಾನಾಂತರ ಜಲಾಶಯ ನಿರ್ಮಾಣವಾಗಿದ್ದರೆ ಅಲ್ಲಿಯಾದರೂ ನೀರು ಉಳಿಸಿಕೊಳ್ಳಬಹುದಿತ್ತು. ಸಚಿವ ಶಿವರಾಜ ತಂಗಡಗಿ ಪರ್ಯಾಯ ಯೋಜನೆ ಬಗ್ಗೆ ಆಸಕ್ತಿಯೇ ತೋರಿಸುತ್ತಿಲ್ಲ’ ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ಮೂಲಗಳು ತಿಳಿಸಿವೆ. 

ADVERTISEMENT

‘ರಾಜ್ಯ ಸರ್ಕಾರ ಮೊದಲೇ ಎಚ್ಚರಿಕೆ ವಹಿಸಿದ್ದರೆ ಈಗ ಸಮಸ್ಯೆಯಾಗುತ್ತಿರಲಿಲ್ಲ. ನೀರು ಹರಿಸಲೇಬಾರದು ಎಂದು ಮೊದಲೇ ನಿರ್ಧಾರ ಮಾಡಿದಂತಿತ್ತು. ನಾಲ್ಕೂ ಜಿಲ್ಲೆಗಳಲ್ಲಿಯೂ ಬೇರೆ ಬೇರೆ ತೆರನಾದ ಸಮಸ್ಯೆಗಳಿದ್ದು, ಅವುಗಳನ್ನು ಆಧರಿಸಿ ಸ್ಥಳೀಯವಾಗಿ ಹೋರಾಟ ಮಾಡಬೇಕು ಎಂದು ಆಗ್ರಹಿಸಿದರು.

ನೀರಿಗಾಗಿ ಈಗಲೇ ಪಾದಯಾತ್ರೆ ಮಾಡೋಣ ಎಂದು ಕೆಲವರು ನೀಡಿದ ಸಲಹೆಗೆ ಪ್ರತಿಕ್ರಿಯಿಸಿದ ಸಂಸದ ಬಸವರಾಜ ಬೊಮ್ಮಾಯಿ ’ಒಂದಷ್ಟು ದಿನಗಳ ಕಾಲ ಪಾದಯಾತ್ರೆ ಮಾಡಿ ಬಳಿಕ ಸುಮ್ಮನಾದರೆ ಸರಿಯಾಗುವುದಿಲ್ಲ. ನಿರಂತರ ಹೋರಾಟ ರೂಪಿಸಬೇಕು. ಅಧಿವೇಶನದ ಬಳಿಕ ಈ ಕುರಿತು ನಿರ್ಧಾರ ಕೈಗೊಳ್ಳೋಣ. ನೀರಿನ ವಿಷಯದ ಜೊತೆಗೆ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಒದಗಿಸಬೇಕು ಎನ್ನುವ ಬೇಡಿಕೆ ಈಡೇರಿಕೆಗೆ ಹೋರಾಟ ರೂಪಿಸಬೇಕು ಎಂದು ನಿರ್ಧರಿಸಲಾಗಿದೆ.  

ಮಾಜಿ ಸಚಿವ ಬಿ. ಶ್ರೀರಾಮುಲು, ವಿಧಾನಸಭಾ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್‌. ನಡಹಳ್ಳಿ, ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ಕೇಳಲು ತೀರ್ಮಾನ ರಾಜ್ಯ ಸರ್ಕಾರ ಮೊದಲೇ ಎಚ್ಚರಿಕೆ ವಹಿಸಲಿಲ್ಲ: ಬಿಜೆಪಿ ಬೆಳಗಾವಿ ವಿಧಾನಸಭಾ ಅಧಿವೇಶನಕ್ಕೂ ಮೊದಲು ಮತ್ತೊಂದು ಸಭೆ ನಡೆಸಲು ನಿರ್ಧಾರ

ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ಬೆಳೆಗೆ ನೀರು ಬಿಡುಗಡೆ ಮಾಡಲು ಸಾಧ್ಯವಾಗದಿದ್ದರೆ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು. ಇಲ್ಲದಿದ್ದರೆ ಸ್ಥಳೀಯವಾಗಿ ಹೋರಾಟ ರೂಪಿಸಲಾಗುವುದು -ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.