ADVERTISEMENT

ಕೊಪ್ಪಳ: ನೆಟ್ಟ ಸಸಿಗಳ ಸುತ್ತಲೂ ತ್ಯಾಜ್ಯದ ರಾಶಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 2:59 IST
Last Updated 13 ಜುಲೈ 2025, 2:59 IST
<div class="paragraphs"><p>ಕಾರಟಗಿಯ ನವಲಿ ರಸ್ತೆಯಲ್ಲಿ ನಾಟಿ ಮಾಡಿರುವ ಸಸಿಗಳ ಸುತ್ತ ತ್ಯಾಜ್ಯದ ರಾಶಿ</p></div>

ಕಾರಟಗಿಯ ನವಲಿ ರಸ್ತೆಯಲ್ಲಿ ನಾಟಿ ಮಾಡಿರುವ ಸಸಿಗಳ ಸುತ್ತ ತ್ಯಾಜ್ಯದ ರಾಶಿ

   

ಕಾರಟಗಿ: ಅಭಿವೃದ್ಧಿ ಹೆಸರಲ್ಲಿ ಮನುಷ್ಯನ ದುರಾಸೆಗೆ ಪರಿಸರ ಹಾಳಾಗುತ್ತಿದೆ. ಶುದ್ಧ ಗಾಳಿ, ನೀರು, ವಾತಾವರಣವೂ ಕಲುಷಿತಗೊಳ್ಳುತ್ತಿದೆ. ಸುತ್ತಲಿನ ವಾತಾವರಣವನ್ನು ಹಸಿರುಮಯ ಮಾಡಬೇಕೆನ್ನುವ ಕಾರಣಕ್ಕೆ ಅಲ್ಲಲ್ಲಿ ಸಸಿಗಳನ್ನು ನೆಡಲಾಗುತ್ತಿದೆಯಾದರೂ ಅವುಗಳ ನಿರ್ವಹಣೆ ಮತ್ತು ಪೋಷಣೆ ಮಾತ್ರ ಮಾಡುತ್ತಿಲ್ಲ. 

ಪರಿಸರ ದಿನ, ವನಮಹೋತ್ಸವಗಳ ನಿಮಿತ್ತ ಕಾರ್ಯಕ್ರಮ ರೂಪಿಸಿ ಸಸಿ ನೆಡುತ್ತಾರೆ. ಶಾಲಾ, ಕಾಲೇಜುಗಳಲ್ಲಿ ಸಸಿ ನೆಟ್ಟು, ಮನೆ ಮಕ್ಕಳಂತೆ ಫೋಷಿಸಿ, ಬೆಳೆಸಿರಿ ಎಂದು ಬೋಧನೆ ಮಾಡುತ್ತಾರೆ. ಆದರೆ ಸಸಿಗಳು ರಕ್ಷಣೆಯಿಲ್ಲದೆ ನಾಶವಾಗುತ್ತವೆ ಎಂಬುದು ಪರಿಸರ ಪ್ರೇಮಿಗಳ ಬೇಸರವಾಗಿದೆ.

ADVERTISEMENT

ಇಲ್ಲಿನ ಪುರಸಭೆಯು ಹಸಿರೀಕರಣಕ್ಕೆ ಮುಂದಾಗಿ ಪಟ್ಟಣದ ನವಲಿ ವೃತ್ತ ಹಾಗೂ ಅಲ್ಲಿಂದ ಬೇವಿನಾಳ ತಿರುವಿನವರೆಗೆ ರಸ್ತೆ ಎಡ–ಬಲಗಳಲ್ಲಿ ಸಸಿ ನೆಡಲಾಗಿತ್ತು. ಮಹಿಳಾ ಸ್ವಸಹಾಯ ಗುಂಪುಗಳು ಕೂಡ ಸಸಿ ನೆಡುವ ಅಭಿಯಾನ ನಡೆಸಿದವು. ಆದರೆ ಸಸಿ ನೆಡುವಾಗಿನ ಉತ್ಸಾಹ, ಅವುಗಳ ಪೋಷಣೆ, ರಕ್ಷಣೆಗೆ ಕಂಡು ಬರಲಿಲ್ಲ ಎನ್ನುವುದು ಪರಿಸರ ಪ್ರೇಮಿಗಳ ಬೇಸರಕ್ಕೆ ಕಾರಣ. 

ಪಟ್ಟಣದ ಎಲ್‌ವಿಟಿ ಸಮೂಹ ಸಂಸ್ಥೆಯು ಕೆಲವು ಕಿ.ಮೀಗಳವರೆಗೆ ಸಸಿಗಳಿಗೆ ನೀರುಣಿಸಿ ಪರಿಸರ ಪ್ರಜ್ಞೆ ಮೆರೆಯಿತು. ಮಳೆಗಾಲ ಆರಂಭವಾಗಿದ್ದರಿಂದ ನೀರುಣಿಸುವ ಅವಶ್ಯವಿಲ್ಲ ಎಂದು ಬಿಟ್ಟಿದ್ದೇವೆ. ಮತ್ತೆ ಬೇಸಿಗೆಯಲ್ಲಿ ಅಗತ್ಯಬಿದ್ದರೆ ನೀರುಣಿಸುತ್ತೇವೆ ಎಂದು ಎಲ್‌ವಿಟಿ ಸಮೂಹ ಸಂಸ್ಥೆ ಮುಖ್ಯಸ್ಥ ಕೆ.ನಾಗಪ್ಪ ಹೇಳಿದ್ದಾರೆ.

ಪುರಸಭೆಯು ನೆಟ್ಟ ಸಸಿಗಳ ರಕ್ಷಣೆಯ ಹೊಣೆ ಹೊರಬೇಕು. ಜತೆಗೆ ಸಾರ್ವಜನಿಕರೂ ಪರಿಸರ ಕಾಳಜಿ ತೋರಿದರೆ ಸಸಿಗಳು ಮರಗಳಾಗುತ್ತವೆ.  ವಿದ್ಯಾರ್ಥಿಗಳೂ ಕೂಡ ಸಸಿಗಳನ್ನು ಮನೆಯ ಸದಸ್ಯರಂತೆ ಬೆಳೆಸಬೇಕು ಎಂದು ಶಿಕ್ಷಕರೊಬ್ಬರು ಕಿವಿಮಾತು ಹೇಳಿದರು. ಸಸಿಗಳನ್ನು ಬೆಳೆದ ಸುತ್ತಲೂ ತ್ಯಾಜ್ಯ ಎಸೆಯಲಾಗುತ್ತಿದೆ. ದಾರಿ ಹೋಕರು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಾಕಷ್ಟು ಪ್ರಮಾಣದಲ್ಲಿ ಹಾಕುತ್ತಿರುವ ಕಾರಣ ಸಸಿಗಳು ದೊಡ್ಡವಾಗುವ ಮೊದಲೇ ನಶಿಸಿ ಹೋಗುತ್ತಿವೆ.

‘ಪುರಸಭೆ ವತಿಯಿಂದ ಈಗಾಗಲೇ ನೆಡಲಾಗಿರುವ ಸಸಿಗಳ ರಕ್ಷಣೆಯಾಗಬೇಕಿದೆ. ಸರಿಯಾದ ನಿರ್ವಹಣೆ ಇಲ್ಲದೆ ನೆಟ್ಟಿರುವ ಸಸಿಗಳ ನೆತ್ತಿಯ ಮೇಲೆ ವಿದ್ಯುತ್‌ ತಂತಿಗಳು ಹಾದು ಹೋಗಿವೆ. ಮುಂದಿನ ದಿನಗಳಲ್ಲಿ ಜೆಸ್ಕಾಂನವರು ಸಮೃದ್ಧವಾಗಿ ಬೆಳೆದಿರುವ ಮರಗಳಿಗೆ ಕತ್ತರಿ ಹಾಕುತ್ತಾರೆ. ಆಗ ಅಷ್ಟು ವರ್ಷಗಳ ಶ್ರಮ ಹಾಳಾಗುತ್ತದೆ. ಸಸಿಗಳಿಗೆ ಬಿದಿರಿನ ಆಧಾರ ಒದಗಿಸುವ ಅಗತ್ಯವಿದೆ. ಪುರಸಭೆಯವರು ಸಸಿಗಳ ರಕ್ಷಣೆ ಮಾಡಬೇಕು’ ಎಂದು ರಾಮನಗರದ ಕೆಂಚಪ್ಪ ಅಂಗಡಿ ಹೇಳುತ್ತಾರೆ. 

‘ಸಾರ್ವಜನಿಕರೂ ಕೈಜೋಡಿಸಲಿ’
ಸಸಿಗಳನ್ನು ನೆಟ್ಟು ಕೆಲವೆಡೆ ರಸ್ತೆಗೆ ಬಾಗಿದ, ಮುರಿದ, ತುಂಡರಿಸಿದ ಬಗ್ಗೆ ಮಾಹಿತಿ ಬಂದಿದೆ. ಈಗಾಗಲೇ ನೂತನ ಮುಖ್ಯಾಧಿಕಾರಿ ಬಳಿ ಚರ್ಚಿಸಲಾಗಿದೆ. ಶೀಘ್ರದಲ್ಲೇ ಸಸಿಗಳ ಬೆಳವಣಿಗೆಗೆ ಬೇಕಾದ ಅಗತ್ಯ ಕ್ರಮ ಹಾಗೂ ಬಿದಿರಿನ ಕಂಬ ಹಾಕಿ ರಕ್ಷಣೆಗೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರೂ ಸಸಿಗಳ ಪೋಷಣೆಗೆ ಮುಂದಾಗಬೇಕು. ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು ಮನವಿ ಮಾಡಿದ್ದಾರೆ.
ಪರಿಸರ ನಮಗೆ ಎಲ್ಲವನ್ನೂ ನೀಡಿದೆ. ಅದರ ರಕ್ಷಣೆಯಲ್ಲಿ ನಮ್ಮ ಉಳಿವಿದೆ. ಸಸಿಗಳನ್ನು ರಕ್ಷಿಸಿ, ನೀರುಣಿಸಿ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ನಾವು ಹಾಗೂ ಹೊಸ ಪೀಳಿಗೆಯವರೂ ತೊಂದರೆ ಅನುಭವಿಸಬೇಕಾಗುತ್ತದೆ.
– ಕೆ.ನಾಗಪ್ಪ, ಪರಿಸರ ಪ್ರೇಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.