ADVERTISEMENT

ಆಲಮಟ್ಟಿ-ಕುಷ್ಟಗಿಗೆ ನೂತನ ರೈಲು ಮಾರ್ಗ; ಮೇ ವೇಳೆಗೆ ವಿಸ್ತೃತ ಯೋಜನಾ ವರದಿ ಸಿದ್ಧ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 4:36 IST
Last Updated 18 ಡಿಸೆಂಬರ್ 2025, 4:36 IST
ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ ಅವರು ಸಚಿವ ಪ್ರಹ್ಲಾದ ಜೋಷಿ ಅವರಿಗೆ ಬರೆದಿರುವ ಪತ್ರ
ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ ಅವರು ಸಚಿವ ಪ್ರಹ್ಲಾದ ಜೋಷಿ ಅವರಿಗೆ ಬರೆದಿರುವ ಪತ್ರ   

ಕುಷ್ಟಗಿ: ಆಲಮಟ್ಟಿಯಿಂದ ಕುಷ್ಟಗಿವರೆಗೆ ಸಂಪರ್ಕ ಕಲ್ಪಿಸುವ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿಸಿದ್ದು ಈ ಭಾಗದಲ್ಲಿ ಮತ್ತಷ್ಟು ರೈಲ್ವೆ ಯೋಜನೆಗಳ ಅನುಷ್ಠಾನದ ಆಶಾಭಾವನೆ ಗರಿಗೆದರಿದೆ.

ಈ ಮಾರ್ಗದ ಬೇಡಿಕೆ ಕುರಿತು ಕೇಂದ್ರದ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಅವರ ಮನವಿಗೆ ಸ್ಪಂದಿಸಿ ಡಿ.17 ರಂದು ಪತ್ರ ಬರೆದಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಆಲಮಟ್ಟಿಯಿಂದ ಕುಷ್ಟಗಿವರೆಗೆ ಸಂಪರ್ಕ ಕಲ್ಪಿಸುವ ಹೊಸ ಮಾರ್ಗಕ್ಕೆ ಸಂಬಂಧಿಸಿದ ಸಮೀಕ್ಷೆ ಕಾರ್ಯ ಮುಗಿದಿದೆ ಮತ್ತು ವಿಸ್ತೃತ ಯೋಜನಾ ವರದಿ (ಡಿಪಿಆರ್) ಮುಂದಿನ ವರ್ಷದ ಮೇ ಒಳಗೆ ಸಿದ್ಧಗೊಳ್ಳಲಿದೆ’ ಎಂದು ವಿವರಿಸಿದ್ದಾರೆ.

ಈ ಕುರಿತು ಸಂತಸ ಹಂಚಿಕೊಂಡಿರುವ ಶಾಸಕ ದೊಡ್ಡನಗೌಡ ಪಾಟೀಲ, ‘ನೂತನ ರೈಲ್ವೆ ಮಾರ್ಗ ಅನುಷ್ಠಾನಗೊಂಡರೆ ಈ ಭಾಗದ ಜನರಿಗೆ ಬಹುದಿನಗಳ ಕನಸು ನನಸಾಗುವ ಕಾಲ ಕೂಡಿ ಬಂದಿದೆ ಎನ್ನುವುದಕ್ಕೆ ಬಹಳಷ್ಟು ಸಂತೋಷವಾಗುತ್ತದೆ. ಅಷ್ಟೇ ಅಲ್ಲದೆ ಸಂಚಾರ, ವಾಣಿಜ್ಯೋದ್ಯಮಕ್ಕೆ ಹೆಚ್ಚಿನ ಅನುಕೂಲ ದೊರೆಯಲಿದೆ. ಉತ್ತರ ಭಾಗದ ರೈಲ್ವೆ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದು ಉತ್ತಮ ಬೆಳವಣಿಗೆ’ ಎಂದಿದ್ದಾರೆ.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಇಲ್ಲಿಯ ರೈಲ್ವೆ ಹೋರಾಟ ಸಮಿತಿ ಪ್ರಮುಖ ವೀರೇಶ ಬಂಗಾರಶೆಟ್ಟರ, ರೈಲ್ವೆ ಸಚಿವರ ನಿರ್ಧಾರವನ್ನು ಸ್ವಾಗತಿಸಿದ್ದು ‘ಆಲಮಟ್ಟಿ-ಕುಷ್ಟಗಿ ಮಧ್ಯೆ ರೈಲ್ವೆ ಸಂಪರ್ಕ ಏರ್ಪಡುವುದರಿಂದ ಕುಷ್ಟಗಿ ಸೇರಿದಂತೆ ವಿಜಯಪುರ, ಬಾಗಲಕೋಟೆ, ಇಳಕಲ್‌ ಭಾಗದವರಿಗೆ ಹೆಚ್ಚಿನ ಪ್ರಯೋಜನಗಳು ದೊರೆಯಲಿವೆ. ಬೆಂಗಳೂರಿಗೆ ಹೋಗುವುದಕ್ಕೆ ಸದ್ಯ ಗದಗ ಮಾರ್ಗವಾಗಿ ಸುತ್ತು ಬಳಸಿ ಬರಬೇಕಿದ್ದು ಹೊಸ ಮಾರ್ಗದಿಂದ ಸಮಯ, ಹಣ, ಶ್ರಮ ಉಳಿತಾಯವಾಗುತ್ತದೆ. ಅಷ್ಟೇ ಅಲ್ಲದೆ ಈ ಭಾಗದ ಆರ್ಥಿಕ ಚಟುವಟಿಕೆಗಳಿಗೂ ಹೆಚ್ಚಿನ ಉತ್ತೇಜನ ದೊರೆಯಲಿದೆ’ ಎಂದು ತಿಳಿಸಿದರು.

ಈಗಾಗಲೇ ತಳಕಲ್‌ನಿಂದ ಕುಷ್ಟಗಿವರೆಗೆ ಗದಗ-ವಾಡಿ ರೈಲು ಮಾರ್ಗ ಪೂರ್ಣಗೊಂಡಿದ್ದು ಸದ್ಯ ಹುಬ್ಬಳ್ಳಿವರೆಗೆ ನಿತ್ಯ ರೈಲು ಸಂಚರಿಸುತ್ತಿದೆ. ಬೆಂಗಳೂರಿಗೆ ಸಂಚರಿಸಲು ಮತ್ತೊಂದು ರೈಲು ಓಡಿಸುವಂತೆ ಈ ಭಾಗದ ಜನರು, ಚುನಾಯಿತ ಪ್ರತಿನಿಧಿಗಳು ರೇಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದು ಆ ಬೇಡಿಕೆಯೂ ಶೀಘ್ರದಲ್ಲಿ ಈಡೇರುವ ಸಾಧ್ಯತೆ ಇದೆ. ಇದರಿಂದ ಈ ಭಾಗ ಪ್ರಮುಖ ರೈಲ್ವೆ ಜಾಲದಲ್ಲಿ ಸೇರ್ಪಡೆಗೊಳ್ಳಲಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.