ADVERTISEMENT

ಗೂಡಿನಂತಿರುವ ಬೋದೂರ ಪಂಚಾಯಿತಿ ಕಚೇರಿ!

ಬಾಡಿಗೆ ಮನೆಯಲ್ಲಿ ಬೋದೂರ ಗ್ರಾಮ ಪಂಚಾಯಿತಿ ಕಚೇರಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 4:38 IST
Last Updated 5 ಜೂನ್ 2020, 4:38 IST
ಯಲಬುರ್ಗಾ ತಾಲ್ಲೂಕು ಬೋದೂರ ಗ್ರಾಮ ಪಂಚಾಯಿತಿ ಕಚೇರಿ
ಯಲಬುರ್ಗಾ ತಾಲ್ಲೂಕು ಬೋದೂರ ಗ್ರಾಮ ಪಂಚಾಯಿತಿ ಕಚೇರಿ   

ಯಲಬುರ್ಗಾ: ತಾಲ್ಲೂಕಿನ ಬೋದೂರ ಗ್ರಾಮದಲ್ಲಿ ಹೊಸ ಪಂಚಾಯಿತಿ ರಚನೆಯಾಗಿ 5 ವರ್ಷಗಳು ಕಳೆದರೂ ಇನ್ನೂವರೆಗೂ ಸ್ವಂತ ಕಟ್ಟಡಹೊಂದಿಲ್ಲ. ಮನೆಯೊಂದರಲ್ಲಿಯೇ ಕಚೇರಿ ತೆರೆದು ಕಾರ್ಯನಿರ್ವಹಿಸುತ್ತಿದೆ. ಇದರಿಂದ ಅಧಿಕಾರಿಗಳಿಗೂ ಹಾಗೂ ಸಾರ್ವಜನಿಕರಿಗೂ ತೀವ್ರ ತೊಂದರೆಯಾಗುತ್ತಿದೆ.

ಆಡಳಿತ ವಿಕೇಂದ್ರೀಕರಣದ ಮೂಲಕ ತ್ವರಿತ ಹಾಗೂ ಪರಿಣಾಮ ಸೇವೆ ಕಲ್ಪಿಸಿಕೊಟ್ಟು ಗ್ರಾಮೀಣಾಭಿವೃದ್ಧಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಚನೆಯಾದ ಪಂಚಾಯಿತಿಗಳು ಮೂಲ ಉದ್ದೇಶ ಈಡೇರಿಸುವಲ್ಲಿ ವಿಫಲವಾಗುತ್ತಿವೆ.

ತಾಲ್ಲೂಕು ಕೇಂದ್ರದಿಂದ ಸುಮಾರು 40ಕಿ.ಮೀ ದೂರದಲ್ಲಿರುವ ಬೋದೂರು, ಚಿಕ್ಕಮನ್ನಾಪುರ, ಗುಳೆ, ಶಿಡ್ಲಭಾವಿ ಹಾಗೂ ಗುಂಟಮಡು ಗ್ರಾಮಗಳನ್ನೊಳಗೊಂಡ ನೂತನ ಪಂಚಾಯಿತಿ ರಚನೆಯಾಗಿದೆ.

ADVERTISEMENT

ಗಡಿಭಾಗದ ಈ ಗ್ರಾಮಗಳಿಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಭೇಟಿ ನೀಡುವುದೇ ಅಪರೂಪವಾಗುತ್ತಿರುವುದರಿಂದ ಈ ಪಂಚಾಯಿತಿ ಕಚೇರಿ ಸ್ವಂತ ಕಟ್ಟಡ ಕಾಣದೆ ಗೂಡಿನಂತಿರುವ ಬಾಡಿಗೆ ಮನೆಯಲ್ಲಿ ಕಾರ್ಯನಿರ್ವಹಿಸುವುದು ಸಿಬ್ಬಂದಿಗೆ ಅನಿವಾರ್ಯವಾಗಿದೆ ಎನ್ನುತ್ತಾರೆ ಸ್ಥಳೀಯರು.

‘ಪಂಚಾಯಿತಿ ಕಾರ್ಯಾಲಯ ಕಟ್ಟಡಕ್ಕೆ ನಿವೇಶನ ನೀಡುವುದಾಗಿ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ್ದರು. ಅಲ್ಲದೇ ಅಧಿಕಾರಿಗಳು ಹಾಗೂ ಆಗಿನ ಜನಪ್ರತಿನಿಧಿಗಳು ಕೂಡಾ ಕಟ್ಟಡಕ್ಕೆ ಹಣ ಮಂಜೂರಾಗಿದೆ ಎಂದು ಹೇಳಿದ್ದರು. ಆದರೆ 5ವರ್ಷ ಕಳೆದರೂ ಯಾವುದೇ ಪಂಚಾಯಿತಿ ಕಟ್ಟಡ ನಿರ್ಮಾಣವಾಗಿಲ್ಲ. ಬರೀ ಭರವಸೆಗಳ ಮಾತುಗಳು ಕೇಳಿ ಬರುತ್ತಿವೆ‘ ಎಂದು ಸ್ಥಳೀಯ ಬಸವರಾಜ ತಾಳಕೇರಿ, ಯಮನೂರಪ್ಪ ಮೇಗಳಮನಿ, ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಪ್ರಾರಂಭದಲ್ಲಿ ಯುವಕ ಮಂಡಳ, ಸಮುದಾಯ ಭವನದಲ್ಲಿ ಶುರುವಾದ ಪಂಚಾಯಿತಿಯು ಈಗ ಬಾಡಿಗೆ ಮನೆಯಲ್ಲಿ ಕಾರ್ಯಾಲಯ ತೆರೆಯಲಾಗಿದೆ. ತೀರಾ ಇಕ್ಕಟ್ಟಿನ ಜಾಗದಲ್ಲಿಯೇ ಕಾರ್ಯ ನಿರ್ವಹಿಸಲಾಗುತ್ತಿದೆ. ಸ್ವಂತ ಕಟ್ಟಡವಾಗುವವರೆಗೂ ಇದೇ ಪರಿಸ್ಥಿತಿಯಲ್ಲಿಯೇ ಕಾಲ ಕಳೆಯಬೇಕಾಗುತ್ತದೆ.

‘ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಬೋದೂರ ಗ್ರಾಮದ ಕೃಷ್ಣಪ್ಪ ಎಂಬವರು 20ಗುಂಟೆ ಜಮೀನು ದಾನ ನೀಡಲು ಮುಂದೆ ಬಂದಿದ್ದಾರೆ. ಮುಂದಿನ ಪ್ರಕ್ರಿಯೆಗಳನ್ನು ಕೈಗೊಂಡು ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಬೇಕಾಗಿದೆ‘ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋಣೆಪ್ಪ ಜಿರ್ಲಿ ಹೇಳುತ್ತಾರೆ.

ಸ್ಥಳೀಯ ಜನಪ್ರತಿನಿಧಿಗಳು ಬೋದೂರ ಪಂಚಾಯಿತಿ ಅಭಿವೃದ್ಧಿ ಬಗ್ಗೆ ಕಾಳಜಿ ತೋರಬೇಕು. ಅಗತ್ಯ ಸೌಲಭ್ಯ ಕಲ್ಪಿಸಿ ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂಬುದು ಶಿಡ್ಲಭಾವಿ, ಗುಳೆ ಹಾಗೂ ಇನ್ನಿತರ ಗ್ರಾಮಸ್ಥರ ಒತ್ತಾಸೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.