ADVERTISEMENT

ಕೊಪ್ಪಳ | ಕಾಂಗ್ರೆಸ್ ತಕ್ಕ ಪಾಠ: ಸಚಿವ ಈಶ್ವರಪ್ಪ

ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ: ನಮೋಶಿ ಪರ ಪ್ರಚಾರ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 2:50 IST
Last Updated 22 ಅಕ್ಟೋಬರ್ 2020, 2:50 IST
ಕೊಪ್ಪಳದ ಶಿವಶಾಂತವೀರ ಮಂಗಲ ಭವನದಲ್ಲಿ ಬುಧವಾರ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಅಂಗವಾಗಿ ನಡೆದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಹಾಗೂ ಪ್ರಮುಖರ ಸಭೆ ಉದ್ಘಾಟಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿದರು (ಎಡಚಿತ್ರ) ಸಭೆಯಲ್ಲಿ ಭಾಗವಹಿಸಿದ್ದ ಪದಾಧಿಕಾರಿಗಳು ಹಾಗೂ ಪ್ರಮುಖರು
ಕೊಪ್ಪಳದ ಶಿವಶಾಂತವೀರ ಮಂಗಲ ಭವನದಲ್ಲಿ ಬುಧವಾರ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಅಂಗವಾಗಿ ನಡೆದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಹಾಗೂ ಪ್ರಮುಖರ ಸಭೆ ಉದ್ಘಾಟಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿದರು (ಎಡಚಿತ್ರ) ಸಭೆಯಲ್ಲಿ ಭಾಗವಹಿಸಿದ್ದ ಪದಾಧಿಕಾರಿಗಳು ಹಾಗೂ ಪ್ರಮುಖರು   

ಕೊಪ್ಪಳ: ಈ ಚುನಾವಣೆ ನಂತರ ರಾಜ್ಯ ರಾಜಕಾರಣದ ದಿಕ್ಸೂಚಿ ಬದಲಾಗುತ್ತಿದೆ ಎಂದು ಮಾಜಿಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಬಿಜೆಪಿ ಅಭ್ಯರ್ಥಿಗಳು ಎಲ್ಲ ಸ್ಥಾನಗಳಲ್ಲಿ ಜಯಗಳಿಸಲಿದ್ದು, ಡಿಕೆಶಿ ಮತ್ತು ಸಿದ್ದರಾಮಯ್ಯನ ದಿಕ್ಸೂಚಿ ಖಂಡಿತಾ ಬದಲಾಗಲಿದೆ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದರು.

ಅವರು ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಬುಧವಾರ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಸಂಬಂಧ ಹಮ್ಮಿಕೊಂಡಿದ್ದ ಕಾರ್ಯಕರ್ತರ ಮತ್ತು ಪಕ್ಷದ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಅಧಿಕಾರ ಹೋದರೂ ಮತ್ತೆ ಮುಖ್ಯಮಂತ್ರಿ ಆಗುವ ಆಸೆ ಇಟ್ಟುಕೊಂಡಿದ್ದಾರೆ. ಸಿಎಂ ಇದ್ದಾಗಲೇ ಚಾಮುಂಡೇಶ್ವರಿಯಲ್ಲಿ ಸೋತರು. ಬಾದಾಮಿಯಲ್ಲಿ ತಿಣುಕಾಡಿ ಗೆದ್ದರು. ಈಗ ಮತ್ತೆ ಸಿಎಂ ಆಗುತ್ತೇನೆ ಎನ್ನುತ್ತಾರೆ. ಶಿರಾ ಮತ್ತು ಆರ್‌.ಆರ್‌ ನಗರ ಸೇರಿದಂತೆ ಎಲ್ಲ ವಿಧಾನ ಪರಿಷತ್ ಸ್ಥಾನಕ್ಕೆ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಮೂಲಕ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದೇವೆ ಎಂದರು.

ADVERTISEMENT

ಬಿಜೆಪಿ ಶಿಸ್ತಿನ ಪಕ್ಷ. ವಿಜಯಪುರ ಶಾಸಕ ಯತ್ನಾಳ ಅಸಂಬದ್ಧ ಹೇಳಿಕೆ ನೀಡಬಾರದು. ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಬೇಕು. ಬೇಕಾಬಿಟ್ಟಿ ಹೇಳಿಕೆ ನೀಡಬಾರದು. ನಮ್ಮ ಶಾಸಕರು ತಪ್ಪು ಮಾಡಿದರೆ ನಾವು ಬುದ್ಧಿ ಹೇಳುತ್ತೇವೆ. ಆದರೆ ಕೆಜಿ ಹಳ್ಳಿಯಲ್ಲಿ ಶಾಸಕನ ಮನೆ ಧ್ವಂಸ ಮಾಡಿದರೂ ಕಾಂಗ್ರೆಸ್ ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಮತ್ತೆ ಸಮಾಜವಾದದ ಬಗ್ಗೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ,ಇಂಟಲಿಜೆನ್ಸ್ ರಿಪೋರ್ಟ್ ಹಾಗೂ ಮತದಾರರ ಮನೋಭಾವನೆ ನೋಡಿದಾಗ ನಾಲ್ಕು ವಿಧಾನ ಪರಿಷತ್ ಹಾಗೂ ಎರಡು ವಿಧಾನ ಸಭೆ ಉಪ ಚುನಾವಣೆಯಲ್ಲಿ ನಾವೇ ಗೆಲ್ಲಲಿದ್ದೇವೆ ಎಂದರು.

ಹಿಂದೆ ಜನತೆ ಮೇಲೆ ಹಣ ಮತ್ತು ಜಾತಿಯ ಪ್ರಭಾವ ಬೀರುತ್ತಿತ್ತು. ಈಗ ಜನ ಬುದ್ದಿವಂತರಾಗಿದ್ದಾರೆ. ದೇಶ ಒಂದೇ ಎನ್ನುವ ಹಿತವನ್ನು ಬಯಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿನೆರೆ ಅನಿರೀಕ್ಷಿತವಾಗಿ ಬಂದಿದೆ. ಬರದಿಂದ ತತ್ತರಿಸಿ ಮಳೆ ಬಂದರೆ ಸಾಕು ಎಂದೆನ್ನುತ್ತಿದ್ದ ಜನತೆಗೆ ಈಗ ಅತಿಯಾದ ಮಳೆಯಿಂದ ಸಂಕಷ್ಟ ಎದುರಿಸುವಂತೆ ಆಗಿದೆ. ಸರ್ಕಾರದಿಂದ ಸಮೀಕ್ಷೆ ನಡೆಸಿ ಎಲ್ಲ ಸಹಾಯ ನೀಡುವುದಾಗಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ,ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಅವರು ಸಿಎಂ ವಿರುದ್ದ ಹೇಳಿಕೆ‌ ಕೊಟ್ಟಿದ್ದು ತಪ್ಪು, ಅದು ಅಶಿಸ್ತು ಆಗಲಿದೆ.ಮುಂದಿನ ಮೂರು ವರ್ಷಗಳ ನಂತರ ಮತ್ತೆ ಚುನಾವಣೆ ಆಗುತ್ತೆ. ಹೈಕಮಾಂಡ್ ಆಗ ಸಿಎಂ ಯಾರು ಎಂದು ನಿರ್ಧಾರ ಮಾಡಲಿದೆ
ಎಂದರು.

‘ಯತ್ನಾಳ ಅವರು ಶಾಸಕರಾಗಿ, ಸಿಎಂ ವಿರುದ್ದ ಹಾಗೂ ವರಿಷ್ಠರ ವಿರುದ್ದ ಮಾತನಾಡುವುದು ಸರಿಯಲ್ಲ. ಇಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕಕ್ಕೆ ಸಿಎಂ ಸ್ಥಾನ ಎನ್ನುವ ಮಾತಿಲ್ಲ. ಸದ್ಯ ಸಿಎಂ ಹುದ್ದೆ ಖಾಲಿ ಇಲ್ಲ. ಯತ್ನಾಳ ಭಾಷಣ ಮಾಡಿದ್ದಾರೆ, ಅಂತ ನಾನು ಮಾತನಾಡಲು ಆಗಲ್ಲ. ಅದು ಅಶಿಸ್ತು ಆಗುತ್ತದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.