ADVERTISEMENT

ಕೊಪ್ಪಳ | ಹನುಮ ಮಾಲಾ ಕಾರ್ಯಕ್ರಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಚನೆ

ನಾಳೆಯಿಂದ ಎರಡು ದಿನ ಹನುಮಮಾಲಾ ಕಾರ್ಯಕ್ರಮ; ಜಿಲ್ಲಾಧಿಕಾರಿ ಅಂತಿಮ ಹಂತದ ಸಭೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 8:42 IST
Last Updated 3 ಡಿಸೆಂಬರ್ 2022, 8:42 IST
ಕೊಪ್ಪಳದಲ್ಲಿ ಶುಕ್ರವಾರ ನಡೆದ ವಿಡಿಯೊ ಸಂವಾದ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಮಾತನಾಡಿದರು
ಕೊಪ್ಪಳದಲ್ಲಿ ಶುಕ್ರವಾರ ನಡೆದ ವಿಡಿಯೊ ಸಂವಾದ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಮಾತನಾಡಿದರು   

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಡಿ. 4 ಹಾಗೂ 5ರಂದು ನಡೆಯಲಿರುವ ಹನುಮಮಾಲಾ ಕಾರ್ಯಕ್ರಮದಲ್ಲಿ ಜನದಟ್ಟಣೆ ಸಮಗ್ರವಾಗಿ ನಿರ್ವಹಣೆ ಮಾಡಬೇಕು, ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ವಿಡಿಯೊ ಸಂವಾದ ಮೂಲಕ ಅಂತಿಮ ಹಂತದ ಸಿದ್ಧತೆ ಕುರಿತು ಸಭೆ ನಡೆಸಿದ ಅವರು ‘ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರು ಸೇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ಜನಸಂದಣಿ ನಿಯಂತ್ರಿಸಬೇಕು. ಅಧಿಕಾರಿ ಮತ್ತು ಸಿಬ್ಬಂದಿ ಸಮನ್ವಯತೆಯಿಂದ ಕೆಲಸ ಮಾಡಬೇಕು. ಸಂಘ, ಸಂಸ್ಥೆಗಳ ಸಹಕಾರ ಪಡೆಯಬೇಕು’ ಎಂದರು.

‘ಅಧಿಕಾರಿಗಳು ಮತ್ತು ಸಿಬ್ಬಂದಿ ಭಕ್ತರೊಂದಿಗೆ ಶಾಂತಿ, ಸಹನೆಯಿಂದ ವರ್ತಿಸಬೇಕು. ಇದಕ್ಕಾಗಿ ಗಂಗಾವತಿ, ಆನೆಗೊಂದಿ ಮತ್ತು ಸುತ್ತಲಿನ ಸ್ಥಳದಲ್ಲಿ ಶಾಂತಿಸಭೆ ನಡೆಸಿ ಸಾರ್ವಜನಿಕ ಸಹಕಾರ ಪಡೆಯಬೇಕು’ ಎಂದು ಗಂಗಾವತಿ ಹಾಗೂ ಕೊಪ್ಪಳ ತಹಶೀಲ್ದಾರ್‌ಗಳಿಗೆ ಸೂಚಿಸಿದರು.

ADVERTISEMENT

‘ಹನುಮಮಾಲಾ ವಿಸರ್ಜನೆಗೆ ಬರುವ ಭಕ್ತರಿಗೆ 60 ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಸಹಾಯವಾಣಿ, ಪೌರ ಕಾರ್ಮಿಕರ ನಿಯೋಜನೆ ಮಾಡಬೇಕು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಾತನಾಡಿ ‘ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ
ಗಂಗಾವತಿ ನಗರ ಮತ್ತು ಬೆಟ್ಟದ ಸುತ್ತಲಿನ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ವ್ಯವಸ್ಥೆ ಮಾಡಲಾಗಿದೆ. ಭಕ್ತರು ಬೆಟ್ಟಕ್ಕೆ ಬರುವ ದಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿನ ವ್ಯವಸ್ಥೆ ಮತ್ತು ಅಗ್ನಿಶಾಮಕ ಅಧಿಕಾರಿಗಳು ಎರಡು ದಿನ ಸ್ಥಳದಲ್ಲಿಯೇ ಜಾಗರೂಕತೆಯಿಂದ ಇರಬೇಕು’ ಎಂದು ಹೇಳಿದರು.

ಸಹಾಯಕ ಆಯುಕ್ತ ಹಾಗೂ ಕಾರ್ಯಕ್ರಮದ ನೋಡಲ್‌ ಅಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜ್ಜೇನಕೊಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಲ್ಲೂಕು ಆಡಳಿತದಿಂದ ಸಿದ್ಧತೆ

ಗಂಗಾವತಿ: ಅಂಜನಾದ್ರಿ ಬೆಟ್ಟದಲ್ಲಿ ನಡೆಯಲಿರುವ ಹನುಮ ಮಾಲಾ ವಿಸರ್ಜನೆಗೆ ಮೂರು ದಿನಗಳ ಮುಂಚೆಯೇ ತಾಲ್ಲೂಕು ಆಡಳಿತ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ.

ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ಹನುಮಮಾಲಾ ವಿಸರ್ಜನೆಗೆ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಬಂದಿದ್ದು, ಈ ಬಾರಿ ಒಂದೂವರೆ ಲಕ್ಷಕ್ಕೂ ಹೆಚ್ಚು ಮಾಲಾಧಾರಿಗಳು ಬರುವ ನೀರಿಕ್ಷೆಯನ್ನು ಜಿಲ್ಲಾಡಳಿತ ಇಟ್ಟುಕೊಂಡಿದ್ದು, ಅಗತ್ಯ ಸೌಕರ್ಯಗಳನ್ನು ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.