ADVERTISEMENT

ಶ್ರಮಮೇವ ಜಯತೆ ಆಶಯ ಸಾಕಾರಗೊಳ್ಳಲಿ: ಡಿ.ಬಿ.ಗಡೇದ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:35 IST
Last Updated 3 ಜನವರಿ 2026, 6:35 IST
ಕುಷ್ಟಗಿ ಸರ್ಕಾರಿ ಜ್ಯೂನಿಯರ್‌ ಕಾಲೇಜಿನ ಎನ್‌ಎಸ್‌ಎಸ್‌ ಶಿಬಿರದಲ್ಲಿ ನಿವೃತ್ತ ಉಪನಿರ್ದೇಶಕ ಡಿ.ಬಿ.ಗಡೇದ ಮಾತನಾಡಿದರು. ಪ್ರಾಚಾರ್ಯೆ ಮಾಲಾಬಾಯಿ, ಕೆ.ಎಸ್‌.ರಡ್ಡಿ ಇತರರು ಇದ್ದರು
ಕುಷ್ಟಗಿ ಸರ್ಕಾರಿ ಜ್ಯೂನಿಯರ್‌ ಕಾಲೇಜಿನ ಎನ್‌ಎಸ್‌ಎಸ್‌ ಶಿಬಿರದಲ್ಲಿ ನಿವೃತ್ತ ಉಪನಿರ್ದೇಶಕ ಡಿ.ಬಿ.ಗಡೇದ ಮಾತನಾಡಿದರು. ಪ್ರಾಚಾರ್ಯೆ ಮಾಲಾಬಾಯಿ, ಕೆ.ಎಸ್‌.ರಡ್ಡಿ ಇತರರು ಇದ್ದರು   

ಕುಷ್ಟಗಿ: ‘ಸತ್ಯಮೇವ ಜಯತೆ ಮಾದರಿಯಲ್ಲಿಯೇ ಶ್ರಮಮೇವ ಜಯತೆ ಎಂಬುದು ಎನ್‌ಎಸ್‌ಎಸ್‌ ಪರಿಕಲ್ಪನೆಯಾಗಿದೆ. ಈ ಆಶಯದೊಂದಿಗೆ ಮಹಾತ್ಮಗಾಂಧಿ ಅವರು ಕಂಡಿದ್ದ ರಾಮರಾಜ್ಯದ ಕನಸು ನನಸಾಗಬೇಕಿದೆ’ ಎಂದು ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಡಿ.ಬಿ.ಗಡೇದ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಜ್ಯೂನಿಯರ್‌ ಕಾಲೇಜಿನ ವತಿಯಿಂದ ಪಟ್ಟಣದ ಕುರುಬನಾಳ ರಸ್ತೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಒಂದು ವಾರದಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಬದುಕಿನಲ್ಲಿ ಕ್ರಿಯಾಶೀಲತೆ ವೃದ್ಧಿಸಿಕೊಳ್ಳುವುದಕ್ಕೆ, ಶ್ರಮದ ಮಹತ್ವ ಅರಿಯಲು ಹಾಗೂ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವುದಕ್ಕೆ ಎನ್‌ಎಸ್‌ಎಸ್‌ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ವ್ಯಕ್ತಿ, ಸಮಾಜ ಮತ್ತು ರಾಷ್ಟ್ರದ ಈ ಸಾಮಾಜಿಕ ಮೌಲ್ಯಗಳು ನಮ್ಮ ಸಂವಿಧಾನದ ಆಶಯವೂ ಆಗಿದೆ’ ಎಂದರು.

ADVERTISEMENT

ವೈದ್ಯ ಡಾ.ಕೆ.ಎಸ್‌.ರಡ್ಡಿ ಮಾತನಾಡಿ, ‘ನಮ್ಮ ದೇಶದ ಆಸ್ತಿಯಾಗಿರುವ ಮಕ್ಕಳು ಮನೆ, ಮನಸ್ಸುಗಳ ಜೊತೆಗೆ ದೇಶವನ್ನೂ ಸ್ವಚ್ಛಗೊಳಿಸುವ ಚಿಂತನೆ ಹೊಂದಿರಬೇಕು’ ಎಂದರು.‌

ಕಾಲೇಜಿನ ಪ್ರಾಚಾರ್ಯೆ ಮಾಲಾಬಾಯಿ ಮಾತನಾಡಿ, ‘ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಿಸಲು, ಆದರ್ಶ ಗುಣಗಳನ್ನು ಬೆಳೆಸಲು ಎನ್‌ಎಸ್‌ಎಸ್‌ ಸಹಕಾರಿಯಾಗಬಲ್ಲದು. ರಾಷ್ಟ್ರಕ್ಕೆ ಬೇಕಿರುವ ಸೇವಾ ಭಾವನೆಯೂ ಅದರಲ್ಲಿ ಅಡಗಿದ್ದು ಎಲ್ಲವನ್ನೂ ನೀಡಿದ ದೇಶಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ಪ್ರತಿಯೊಬ್ಬರೂ ಪ್ರಶ್ನಿಸಿಕೊಳ್ಳಬೇಕು’ ಎಂದರು.

ಎನ್‌ಎಸ್‌ಎಸ್‌ ಜಿಲ್ಲಾ ನೋಡಲ್‌ ಅಧಿಕಾರಿ ನಾಗರಾಜ ಹೀರಾ, ಪತ್ರಕರ್ತ ನಾರಾಯಣರಾವ ಕುಲಕರ್ಣಿ ಇತರರು ಮಾತನಾಡಿದರು.

ಇನ್ನರ್‌ವ್ಹೀಲ್‌ ಕ್ಲಬ್‌ ಅಧ್ಯಕ್ಷೆ ಗಿರಿಜಾ ಮಾಲಿಪಾಟೀಲ, 3ನೇ ವಾರ್ಡಿನ ರಹವಾಸಿಗಳ ಸಂಘದ ಉಪಾಧ್ಯಕ್ಷ ಅಭಿನಂದನ ಗೋಗಿ, ಸಾರಿಗೆ ಸಂಸ್ಥೆಯ ನಿವೃತ್ತ ಸಿಬ್ಬಂದಿ ಈರಣ್ಣ ಚಟ್ಟೇರ, ಬಸವರಾಜ ಕೋಳೂರು, ಅಬಕಾರಿ ಇಲಾಖೆ ನಿವೃತ್ತ ಸಿಬ್ಬಂದಿ ಎಸ್‌.ಎನ್‌.ಘೋರ್ಪಡೆ ಇದ್ದರು.

ಏಳು ದಿನಗಳವರೆಗೆ ನಡೆದ ಶಿಬಿರದಲ್ಲಿ ಉದ್ಯಾನ, ಶಾಲಾ ಆವರಣದ ಸ್ವಚ್ಛತೆ ಸೇರಿದಂತೆ ವಿದ್ಯಾರ್ಥಿನಿಯರು ವಿವಿಧ ಚಟುವಟಿಕೆಗಳಲ್ಲಿ ಉಲ್ಲಸಿತರಾಗಿ ಪಾಲ್ಗೊಂಡಿದ್ದರು. ಈ ಅವಧಿಯಲ್ಲಿ ಶಿಬಿರಾರ್ಥಿ ವಿದ್ಯಾರ್ಥಿನಿಯರ ರಕ್ತ ಮಾದರಿ ತಪಾಸಣೆ ನಡೆಸಲಾಯಿತು.

ಹೆಚ್ಚುತ್ತಿದ್ದಾರೆ ಡ್ರಗ್ಸ್‌ ವ್ಯಸನಿಗಳು

ಪಟ್ಟಣದಲ್ಲಿ ಡ್ರಗ್ಸ್‌ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವೈದ್ಯ ಡಾ.ಕೆ.ಎಸ್‌.ರೆಡ್ಡಿ ಕಳವಳ ವ್ಯಕ್ತಪಡಿಸಿದರು. ಗಾಂಜಾ ಸಿಗರೇಟ್‌ ಸೇರಿದಂತೆ ವಿವಿಧ ರೀತಿಯ ಮಾದಕ ವಸ್ತುಗಳಿಗೆ ಬಾಲಕರು ಬಲಿಯಾಗುತ್ತಿರುವುದು ಕಂಡುಬಂದಿದೆ. ಅದರಿಂದ ವ್ಯಕ್ತಿ ಕುಟುಂಬ ಅಷ್ಟೇ ಅಲ್ಲ ಅದು ಸಮಾಜಕ್ಕೂ ಅನಾಹುತ ತಂದಿಡುತ್ತದೆ. ವ್ಯಸನಿ ಸಮಾಜಕ್ಕೆ ಅಪಾಯಕಾರಿ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ ಎಂದು ತಮ್ಮ ವೃತ್ತಿ ಬದುಕಿನಲ್ಲಿ ಕಂಡುಕೊಂಡ ಅನುಭವ ಹಂಚಿಕೊಂಡರು. ಕುಟುಂಬದಲ್ಲಿ ಮಕ್ಕಳಿಗೆ ಪ್ರೀತಿ ಹಂಚುವ ಮೂಲ ಅವರ ಮನಸ್ಸನ್ನು ಗೆಲ್ಲಬೇಕು ನಿತ್ಯ ಅವರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.