ಉತ್ತರ ಕರ್ನಾಟಕ
ಪ್ರಾತಿನಿಧಿಕ ಚಿತ್ರ
ಕೊಪ್ಪಳ: ರಾಜ್ಯದಲ್ಲಿ ಕೈಗಾ ನಂತರ ಮತ್ತೊಂದು ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಕೊಪ್ಪಳವೂ ಸೇರಿದಂತೆ ಉತ್ತರ ಕರ್ನಾಟಕದ ನಾಲ್ಕೈದು ಜಿಲ್ಲೆಗಳಲ್ಲಿ ಒಂದೇ ಕಡೆ 1,200 ಎಕರೆ ಭೂಮಿ ಗುರುತಿಸುವ ಕಾರ್ಯ ನಡೆಯುತ್ತಿದೆ.
ಕೊಪ್ಪಳ ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳಲ್ಲಿಯೂ ಭೂಮಿ ಗುರುತಿಸುವ ಕೆಲಸ ನಡೆಯುತ್ತಿದ್ದು, ಅದರಲ್ಲಿ ತಾಲ್ಲೂಕಿನ ಅರಸನಕೇರಿ ಹಾಗೂ ಸುತ್ತಮುತ್ತಲ ಪ್ರದೇಶವೂ ಒಂದಾಗಿದೆ.
ಈ ಕುರಿತು ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಕೊಪ್ಪಳ ತಹಶೀಲ್ದಾರ್‌ಗೆ ಪತ್ರ ಬರೆದಿದ್ದು, ಅರಸನಕೇರಿ ಗ್ರಾಮದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಭೂಮಿ ಲಭ್ಯತೆ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಆದರೆ, ಈ ಗ್ರಾಮದಲ್ಲಿ ಪಟ್ಟಾ ಹಾಗೂ ಸರ್ಕಾರಿ ಸೇರಿ ಒಟ್ಟು 615 ಎಕರೆ ಜಮೀನು ಮಾತ್ರ ಲಭ್ಯವಿದೆ.
ಅರಸನಕೇರಿ ಸಮೀಪದ ಕರಡಿಗುಡ್ಡ, ಅದಕ್ಕೆ ಹೊಂದಿಕೊಂಡಿರುವ ಹಾಗೂ ಜನವಸತಿ ಪ್ರದೇಶದಿಂದ ಕನಿಷ್ಠ ಮೂರು ಕಿ.ಮೀ. ದೂರದಲ್ಲಿ ಜಮೀನು ಗುರುತಿಸಿ ಎಂದೂ ಹೇಳಿದ್ದಾರೆ. ಭೂಮಿ ಗುರುತಿಸುವ ಕಾರ್ಯ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಜಿಲ್ಲಾಡಳಿತ ಈ ಸ್ಥಳ ವೀಕ್ಷಣೆ ಮಾಡಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಅರಸನಕೇರಿ ಭಾಗದ ಮುಖಂಡರೂ ಆದ ವಿಧಾನಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಹಾಗೂ ರೈತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ‘ಕೊಪ್ಪಳ ತಾಲ್ಲೂಕಿನ ಇರಕಲ್ಲಗಡ ಹೋಬಳಿ ವ್ಯಾಪ್ತಿಯ ಅರಸನಕೇರಿ ಗ್ರಾಮದಲ್ಲಿ ಪರಮಾಣು ವಿದ್ಯುತ್ ಸ್ಥಾವರಕ್ಕೆ ಭೂಮಿ ಗುರುತಿಸುವುದಕ್ಕೆ ನಮ್ಮ ವಿರೋಧವಿದೆ. ಈ ಪ್ರದೇಶದಲ್ಲಿ ಸಾಕಷ್ಟು ಕರಡಿಗಳಿರುವ ಕಾರಣ ಕರಡಿ ಸಂರಕ್ಷಿತ ಧಾಮ ಎಂದು ಘೋಷಣೆ ಮಾಡಲಾಗುತ್ತಿದೆ. ಇಂಥ ಪ್ರದೇಶದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಏಕೆ ನಿರ್ಮಿಸಬೇಕು’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.