ADVERTISEMENT

ಯಲಬುರ್ಗಾ: ಅಧಿಕಾರಿ–ಅಂಗಡಿ ಮಾಲೀಕರ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 5:57 IST
Last Updated 31 ಜುಲೈ 2025, 5:57 IST
ಯಲಬುರ್ಗಾ ಪಟ್ಟಣದ ಅಪ್ಪು ಸರ್ಕಲ್ ಹತ್ತಿರದಲ್ಲಿರುವ ವಿವಿಧ ಅಂಗಡಿಗಳ ಮಾಲೀಕರು ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ ನಡುವೆ ಮಾತಿನ ಚಕಮಕಿ ನಡೆಯಿತು
ಯಲಬುರ್ಗಾ ಪಟ್ಟಣದ ಅಪ್ಪು ಸರ್ಕಲ್ ಹತ್ತಿರದಲ್ಲಿರುವ ವಿವಿಧ ಅಂಗಡಿಗಳ ಮಾಲೀಕರು ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ ನಡುವೆ ಮಾತಿನ ಚಕಮಕಿ ನಡೆಯಿತು   

ಯಲಬುರ್ಗಾ: ಪಟ್ಟಣದ ಪ್ರಮುಖ ರಸ್ತೆಗೆ ಹೊಂದಿಕೊಂಡಿದ್ದ ಡಬ್ಬಾ ಅಂಗಡಿ ಹಾಗೂ ಶೆಡ್‍ಗಳನ್ನು ತೆರವುಗೊಳಿಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮುಂದಾಗಿದ್ದು, ಈ ವೇಳೆ ಅಂಗಡಿ ಮಾಲೀಕರು ಮತ್ತು ಪಂಚಾಯಿತಿ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.

‘ಪ್ರಮುಖ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಶೆಡ್ ಮತ್ತು ಡಬ್ಬಿ ಅಂಗಡಿಗಳನ್ನು ಸ್ಥಾಪಿಸಿಕೊಂಡಿದ್ದು, ಇದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಅಲ್ಲದೆ ಪಾದಚಾರಿಗಳಿಗೂ ಸಂಚಾರಕ್ಕೆ ಕಷ್ಟವಾಗುತ್ತಿದೆ. ಅಪಘಾತಗಳು ನಡೆಯುತ್ತಿರುವುದರಿಂದ ರಸ್ತೆಗೆ ಹೊಂದಿರುವ ಅಕ್ರಮ ಅಂಗಡಿಗಳನ್ನು ಕಡ್ಡಾಯವಾಗಿ ತೆರವುಗಳಿಸಬೇಕು. ಮಾಲೀಕರು ಸಹಕರಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಅದನ್ನು ಪಾಲಿಸಬೇಕಾಗಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ ಹೇಳಿದರು.

ಈ ವೇಳೆ ವಿವಿಧ ಅಂಗಡಿ ಮಾಲೀಕರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಏಕಾಏಕಿ ತೆರವುಗೊಳಿಸುವುದು ಹೇಗೆ ಸಾಧ್ಯ. ಅಲ್ಲದೆ ಸುಮಾರು ವರ್ಷಗಳಿಂದಲೂ ಇದೇ ಸ್ಥಳದಲ್ಲಿ ರಸ್ತೆಯಿಂದ ಸ್ವಲ್ಪ ದೂರದಲ್ಲಿಯೇ ಅಂಗಡಿಗಳನ್ನು ಇಡಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಪ್ರತಿಕ್ರಿಯಿಸಿದರು.

ADVERTISEMENT

‘ಪ.ಪಂ ಅನುದಾನದಲ್ಲಿ ನಿರ್ಮಾಣಗೊಂಡಿರುವ ಚರಂಡಿಗಳ ಮೇಲೆ ಶೆಡ್ ಅಥವಾ ಅಂಗಡಿಗಳು ಅತಿಕ್ರಮಣ ಎಂದೇ ಭಾವಿಸಲಾಗುತ್ತದೆ. ಅಂತಹ ಅಂಗಡಿಗಳ ವಿರುದ್ಧ ಯಾವುದೇ ನೋಟಿಸ್ ಜಾರಿ ಮಾಡುವ ಅವಶ್ಯಕತೆ ಇಲ್ಲ. ಅಷ್ಟಕ್ಕೂ ಮೌಖಿಕವಾಗಿ ಧ್ವನಿವರ್ಧಕದ ಮೂಲಕ ಸಾರ್ವಜನಿಕವಾಗಿ ಮಾಹಿತಿಯನ್ನು ನಿರಂತರವಾಗಿ ನೀಡಲಾಗುತ್ತಿದೆ’ ಎಂದು ಮುಖ್ಯಾಧಿಕಾರಿ ಹೇಳಿದರು.

ರಸ್ತೆ ಸುರಕ್ಷತಾ ಕಾಯ್ದೆ ಪಾಲನೆ ದೃಷ್ಟಿಯಿಂದ ಅನಧಿಕೃತ ಅಂಗಡಿ ತೆರವುಗೊಳಿಸುವ ವಿಷಯದಲ್ಲಿ ರಾಜೀಯಾಗುವುದಿಲ್ಲ. ಮೇಲಧಿಕಾರಿಗಳ ಆದೇಶದಂತೆ ಕ್ರಮಕೈಗೊಳ್ಳಬೇಕಾಗಿದೆ. ಸೂಕ್ತ ದಾಖಲೆಗಳೊಂದಿಗೆ ತೆರವು ಕಾರ್ಯಾಚರಣೆಗೆ ಮುಂದಾಗಿದ್ದೇವೆ ಎಂದು ನಾಗೇಶ ತಿಳಿಸಿದರು.

ಪಟ್ಟಣದ ಟಿಪ್ಪು ಸುಲ್ತಾನ ವೃತ್ತದಿಂದ ಕನಕದಾಸ ವೃತ್ತ, ಅಪ್ಪು (ಕನ್ನಡ ಕ್ರಿಯಾ ಸಮಿತಿ) ಸರ್ಕಲ್ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಮುಧೋಳ ರಸ್ತೆಯ ಸಿದ್ಧರಾಮೇಶ್ವರ ಕಾಲೊನಿ, ಬುದ್ಧ ಬಸವ ಅಂಬೇಡ್ಕರ್ ಭವನದವರೆಗೆ ಅನಧಿಕೃತ ಅಂಗಡಿಗಳನ್ನು ಗುರುತಿಸಲಾಗಿದೆ. ತೆರವು ಕಾರ್ಯಚರಣೆಗೆ ಅಡ್ಡಿಪಡಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಅಂಗಡಿ ಹಾಗೂ ಶೆಡ್ ತಮ್ಮ ಆಸ್ತಿಯಲ್ಲಿದ್ದರೆ ಮೂರು ದಿನಗಳ ಒಳಗಾಗಿ ಅಗತ್ಯ ದಾಖಲಾತಿಗಳನ್ನು ಕಚೇರಿಗೆ ಸಲ್ಲಿಸಿ ವ್ಯವಹಾರ ಮುಂದುವರೆಸಬಹುದಾಗಿದೆ ಎಂದು ವಿವರಿಸಿದರು.

ಕಾಲಾವಕಾಶಕ್ಕೆ ಆಗ್ರಹ

‘ದಿಢೀರನೇ ಅಂಗಡಿ ತೆರವುಗೊಳಿಸುವುದರಿಂದ ಮಾಲೀಕರಿಗೆ ಕಷ್ಟವಾಗುತ್ತದೆ. ಈ ರೀತಿಯ ಅವೈಜ್ಞಾನಿಕ ತೆರವು ಕಾರ್ಯಾಚರಣೆಯನ್ನು ಕೈಬಿಟ್ಟು ವೈಜ್ಞಾನಿವಾಗಿ ನಡೆಸಬೇಕು. ಯಾವುದೇ ತಾರತಮ್ಯ ಮಾಡದೇ ಕ್ರಮಕ್ಕೆ ಮುಂದಾಗಬೇಕು. ಇನ್ನಷ್ಟು ದಿನ ಕಾಲಾವಕಾಶವನ್ನು ಕೊಡಬೇಕು’ ಎಂದು ರಸ್ತೆ ಬದಿಯ ವ್ಯಾಪಾರಿಗಳು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.