ಸಾಂದರ್ಭಿಕ ಚಿತ್ರ
ಕುಷ್ಟಗಿ: ತಾಲ್ಲೂಕಿನ ಚಿಕ್ಕಮುಕರ್ತಿಹಾಳವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸುವ ಸಂದರ್ಭದಲ್ಲಿ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡದೆ ರೈತರ ಹೆಸರಿನಲ್ಲಿ ಸಹಿಗಳನ್ನು ನಕಲು ಮಾಡಿದ್ದಾರೆ. ಅಲ್ಲದೆ ಸಂಬಂಧಿಸಿದ ರೈತರು ಅಕ್ಷರಸ್ಥರಾಗಿದ್ದರೂ ಹೆಬ್ಬೆರಳಿನ ಸಹಿ ಒತ್ತಿ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಲಾಗಿದೆ.
ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳ ಸಹಿತ ಈ ಕುರಿತು ಮಾಹಿತಿ ನೀಡಿದ ವಕೀಲ ಸುರೇಶ ಗುಡದೂರು, ಇತರೆ ವಕೀಲರು ಮತ್ತು ರೈತರು, ‘ರೈತರ ಜಮೀನುಗಳಲ್ಲಿ ಬೇರೆ ಬಡವರು, ಕೃಷಿಕಾರ್ಮಿಕರು ಸಣ್ಣ ಮನೆಗಳನ್ನು ಕಟ್ಟಿಕೊಂಡಿದ್ದನ್ನೇ ನೆಪವಾಗಿಸಿಕೊಂಡು ಆಯಾ ರೈತರ ಜಮೀನುಗಳಲ್ಲಿ ಒಂದಷ್ಟು ಗುಂಟೆ ಜಾಗವನ್ನು ಕಡಿಮೆ ಮಾಡಿ ಪಹಣಿಯಲ್ಲಿ ರಾಜ್ಯಪಾಲರ ಹೆಸರು ಬರುವಂತೆ ಮಾಡಿದ್ದಾರೆ. ಇದರಿಂದ ಜಮೀನಿನ ಮಾಲೀಕರಿಗೆ ಬಹಳಷ್ಟು ಅನ್ಯಾಯವಾಗಿದೆ. ಅಲ್ಲದೆ ಮನೆ ಕಟ್ಟಿಕೊಂಡಿರುವವರಿಗೆ ನಿವೇಶನ ಹಕ್ಕುಪತ್ರ ನೀಡುವಲ್ಲಿಯೂ ಅಕ್ರಮ ನಡೆದಿದ್ದು ಅಂಥ ಜನರಿಂದ ಸಾವಿರಾರು ರೂಪಾಯಿ ಹಣ ಪಡೆದಿದ್ದಾರೆ’ ಎಂದು ದೂರಿದರು.
‘ಕಂದಾಯ ಗ್ರಾಮವನ್ನಾಗಿ ಘೋಷಿಸುವ ಸಂದರ್ಭದಲ್ಲಿ ರೈತರ ಜಮೀನುಗಳ ಭೂ-ಸ್ವಾಧೀನ ಪ್ರಕ್ರಿಯೆ ನಡೆಸಿಲ್ಲ. ನಿಯಮಗಳ ಪ್ರಕಾರ ಜಮೀನು ಕಳೆದುಕೊಂಡವರಿಗೆ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪರಿಹಾರ ನೀಡಬೇಕಿದ್ದರೂ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ಸರ್ವೆ ನಡೆಸಿದ ಸಂದರ್ಭದಲ್ಲಿ ರೈತರ ಬದಲು ಕಂದಾಯ ಅಧಿಕಾರಿ, ಗ್ರಾಮ ಆಡಳಿತಾಧಿಕಾರಿ ತಾವೇ ಸಹಿ ನಕಲು ಮಾಡಿರುವುದು ಸ್ಪಷ್ಟವಾಗಿದೆ. ಈ ವಿಷಯ ಗೊತ್ತಿದ್ದರೂ ತರಾತುರಿಯಲ್ಲಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿರುವ ತಹಶೀಲ್ದಾರ್, ಉಪ ತಹಶೀಲ್ದಾರ್ ಇತರರು ನಕಲಿ ಸಹಿಗಳೇ ನಿಜ ಎಂದೂ ದೃಢೀಕರಿಸಿದ್ದಾರೆ. ಆದರೆ ಅಕ್ರಮವನ್ನು ಆಕ್ಷೇಪಿಸಿದ್ದಕ್ಕೆ ಸರ್ವೆ ಕೆಲಸದ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದೀರಿ ಎಂದು ಪ್ರಕರಣ ದಾಖಲಿಸಿ ರೌಡಿಶೀಟರ್‌ದಲ್ಲಿ ಸೇರಿಸುತ್ತೇವೆ ಎಂದು ತಹಶೀಲ್ದಾರರು ರೈತರನ್ನು ಬೆದರಿಸಿದ್ದಾರೆ’ ಎಂದು ವಿವರಿಸಿದರು.
‘ಕಂದಾಯ ಇಲಾಖೆಯಿಂದ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಪಡೆದಿರುವ ದಾಖಲೆಗಳ ಪ್ರಕಾರ ರೈತರಿಗೆ ಅನ್ಯಾಯವಾಗಿರುವುದು ಸ್ಪಷ್ಟವಾಗಿದೆ. ಅದರ ಅನ್ವಯ ರೈತರ ಸಹಿಗಳನ್ನು ಫೋರ್ಜರಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ತಾವರಗೇರಾ ಪೊಲೀಸ್ ಠಾಣೆಗೆ ಜ.11ರಂದು ದಾಖಲೆಗಳ ಸಹಿತ ದೂರು ಸಲ್ಲಿಸಲಾಗಿತ್ತು. ಅದೇ ರೀತಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗೆ ಜ.13 ರಂದು ದೂರು ಸಲ್ಲಿಸಿ ತನಿಖೆ ನಡೆಸಿ ರೈತರಿಗೆ ನ್ಯಾಯ ಒದಗಿಸಬೇಕು ಮತ್ತು ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಮನವಿ ಮಾಡಲಾಗಿತ್ತು’ ಎಂದರು.
ಕಂದಾಯ ಅಧಿಕಾರಿಗಳು ಸರ್ವೆಕಾರ್ಯ, ಪಂಚನಾಮೆ ನಡೆಸಿದ ಸಂದರ್ಭದಲ್ಲಿ ಸಹಿಗಳನ್ನು ತಾವೇ ಮಾಡಿರುವುದನ್ನು ವಕೀಲರು ದಾಖಲೆಗಳೊಂದಿಗೆ ತೋರಿಸಿದರು. ‘ಗಿರಿಯಪ್ಪ, ಗೋಲಗೇರಪ್ಪ ಎಂಬುವವರು ಅಕ್ಷರಸ್ಥರು, ಪೆನ್ನಿನಿಂದ ಸಹಿ ಮಾಡುತ್ತಾರೆ. ಆದರೆ ಕಂದಾಯ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಹೆಬ್ಬೆಟ್ಟಿನ ಸಹಿ ಇದೆ. ಅಷ್ಟೇ ಅಲ್ಲ ಒಬ್ಬನೇ ವ್ಯಕ್ತಿ ಹೆಬ್ಬೆಟ್ಟಿನಿಂದ ಮತ್ತು ಪೆನ್ನಿನಿಂದ ಬೇರೆ ಬೇರೆ ರೈತರ ಹೆಸರಿನಲ್ಲಿ ನಕಲಿ ಸಹಿ ಮಾಡಿದ್ದಾರೆ. 2025ರ ಜುಲೈದಲ್ಲಿ ತರಾತುರಿಯಲ್ಲಿ ಯಾರಿಗೂ ಮಾಹಿತಿ ನೀಡದೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದು ಸೆಪ್ಟಂಬರ್ ತಿಂಗಳಲ್ಲಿ ರೈತರ ಪಹಣಿಗಳಲ್ಲಿ ರಾಜ್ಯಪಾಲರ ಹೆಸರು ನಮೂದಾಗಿದೆ’ ಎಂದು ವಿವರಿಸಿದರು.
ರೈತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಅನಿವಾರ್ಯವಾಗಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್, ಕಂದಾಯ ನಿರೀಕ್ಷಕ, ಗ್ರಾಮ ಆಡಳಿತಾಧಿಕಾರಿ ಮತ್ತು ಪೊಲೀಸರ ವಿರುದ್ಧ ಹೈಕೋರ್ಟ್ ದಲ್ಲಿ ದಾವೆ ಹೂಡುವುದಾಗಿ ವಕೀಲ ಸುರೇಶ ಗುಡದೂರು ತಿಳಿಸಿದರು.
ವಕೀಲರಾದ ಪುಟ್ಟರಾಜ ದಂಡಿನ, ಬೆಟ್ಟಪ್ಪ, ಶರಣಪ್ಪ ಬಿಳೇಗುಡ್ಡ, ಯಮನೂರಪ್ಪ ಗರ್ಜನಾಳ, ರೈತರಾದ ಕಾಡಪ್ಪ, ಫಕೀರಪ್ಪ, ಗಿರಿಯಪ್ಪ, ಅಹ್ಮದ್‌ಸಾಬ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.