ADVERTISEMENT

ಸಾವಯವ ಕೃಷಿಯೇ ರೈತರಿಗೆ ಆಧಾರ

ಕೃಷಿಯಲ್ಲಿಯ ಇಂದಿನ ಸವಾಲು ಗೋಷ್ಠಿಯಲ್ಲಿ ಪ್ರಗತಿಪರ ಕೃಷಿಕ ಮಹಿಳೆ ರಾಜೇಶ್ವರಿ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 19:45 IST
Last Updated 12 ಜುಲೈ 2019, 19:45 IST
ಕುಕನೂರ ತಾಲ್ಲೂಕಿನ ಬನ್ನಿಕೊಪ್ಪದಲ್ಲಿ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ನಡೆದ ಕೃಷಿ ಗೋಷ್ಠಿಯಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ರಾಜೇಶ್ವರಿ ಪಾಟೀಲ, ಸುರೇಶಗೌಡ ಪಾಟೀಲ, ಪ್ರೊ.ಟಿ.ವಿ.ಮಾಗಳದ ಇದ್ದರು
ಕುಕನೂರ ತಾಲ್ಲೂಕಿನ ಬನ್ನಿಕೊಪ್ಪದಲ್ಲಿ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ನಡೆದ ಕೃಷಿ ಗೋಷ್ಠಿಯಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ರಾಜೇಶ್ವರಿ ಪಾಟೀಲ, ಸುರೇಶಗೌಡ ಪಾಟೀಲ, ಪ್ರೊ.ಟಿ.ವಿ.ಮಾಗಳದ ಇದ್ದರು   

ಸ್ವಾತಂತ್ರ್ಯ ಯೋಧ ಶಂಕ್ರಪ್ಪ ಸಿದ್ದಪ್ಪ ಯರಾಶಿ ವೇದಿಕೆ (ಬನ್ನಿಕೊಪ್ಪ), ಕುಕನೂರ: ಕೃಷಿ ಕ್ಷೇತ್ರ ಇಂದು ವಿವಿಧ ಸವಾಲುಗಳನ್ನು ಎದುರಿಸುತ್ತಿದ್ದು, ಹವಾಮಾನ ವೈಪರೀತ್ಯ ಕೃಷಿ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತಿದೆ ಎಂದು ಹಾವೇರಿ ಜಿಲ್ಲೆಯ ಹಂದಿಗನೂರಿನ ಪ್ರಗತಿಪರ ಕೃಷಿ ಸಾಧಕಿ ರಾಜೇಶ್ವರಿ ವಿ. ಪಾಟೀಲ ಹೇಳಿದರು.

ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಶುಕ್ರವಾರ 11ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಮ್ಮಿಕೊಂಡ 'ಕೃಷಿಯಲ್ಲಿ ಇಂದಿನ ಸವಾಲುಗಳು' ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಬ್ಬನಿಯ ಆಧಾರದ ಮೇಲೆ ಬೆಳೆಯುವಂತಹ ಬೆಳೆಗಳ ಉತ್ಪನ್ನಗಳು ಮನುಷ್ಯನ ಆರೋಗ್ಯ ಮತ್ತು ಆಯುಷ್ಯವನ್ನು ವೃದ್ಧಿಸುತ್ತವೆ. ಇಂದು ನಾವುಗಳು ಬಳಕೆ ಮಾಡುತ್ತಿರುವ ಬಹುತೇಕ ಬೆಳೆಗಳು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆ ಮಾಡಿರುವುದ್ದಾಗಿದೆ. ಎಲ್ಲ ಆಹಾರ ಪದಾರ್ಥಗಳು ವಿಷಯುಕ್ತ ಆಗುತ್ತಿವೆ. ಆದ್ದರಿಂದ ಜನರು ಸಾವಯವ ಕೃಷಿಯ ಸಿರಿಧಾನ್ಯಗಳನ್ನು ಹೆಚ್ಚು ಬಳಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಸಂಪನ್ಮೂಲ ವಿಷಯ ತಜ್ಞ ಪಾಟೀಲ ಸುರೇಶಗೌಡ ಮಾತನಾಡಿ, ಸಿರಿಧಾನ್ಯ ತಿಂದು, ಕಷಾಯ ಕುಡಿದು ಕ್ಯಾನ್ಸರ್‌ನಿಂದ ದೂರವಿದ್ದವರಿದ್ದಾರೆ, ಸಿರಿಧಾನ್ಯಗಳು ಆಧುನಿಕ ರೋಗಗಳಿಗೆ ರಾಮಬಾಣ'.ಜನರು ಆಧುನಿಕ ಜೀವನಶೈಲಿಯಿಂದ ರೋಗ ಪೀಡಿತರಾಗಿ ವೈದ್ಯರ ಸುತ್ತ ಸುತ್ತುತ್ತಿದ್ದಾರೆ. ಉತ್ತಮ ಸಾವಯವ ಆಹಾರ ಬಳಸಿದರೆ ನಾವು ಅನ್ನ ನೀಡುವ ರೈತನ ಸುತ್ತ ಸುತ್ತುವಂತಾಗಬೇಕು. ಬೆಂಬಲ ಬೆಲೆ ಘೋಷಿಸುವ ಮೂಲಕ ಸರ್ಕಾರ ರೈತರ ಮಾರುಕಟ್ಟೆ ಬೆಲೆಯನ್ನು ಹಿಡಿದಿಡುವ ಪ್ರಯತ್ನ ಮಾಡುತ್ತದೆ. ಆಹಾರದ ಹೆಸರಿನಲ್ಲಿ ರಸಗೊಬ್ಬರ ಕಂಪನಿಗಳು ಮಾರುಕಟ್ಟೆ ಕಂಡುಕೊಂಡಿವೆ. ಇಂದು ಬೇಸಾಯ ಕೈಗಾರಿಕೀರಣವಾಗಿರುವುದರಿಂದ ರೋಗಗಳ ಸಂಖ್ಯೆ ಹೆಚ್ಚಾಗಿದೆ' ಎಂದು ವಿಶ್ಲೇಷಿಸಿದರು.

ನವಣೆ ನುಚ್ಚು ತಿನ್ನಿ:'ನವಣೆ ನುಚ್ಚು, ಕುಸುಬಿ ಹಾಲು ಸೇವಿಸುತ್ತಿದ್ದ ನಾವು ಉಪ್ಪಿಟ್ಟು ಎಂಬ ಖಾದ್ಯಕ್ಕೆ ಜೋತು ಬಿದ್ದಿದ್ದೇವೆ. ಉಪ್ಪಿಟ್ಟಿನ ಪ್ರೀತಿಯಿಂದಾಗಿ ಆಸ್ಪ್ರೇಲಿಯಾಕ್ಕೆ ದುಡ್ಡು ಸುರಿಯುತ್ತಿದ್ದೇವೆ. ಮಕ್ಕಳ ರಕ್ತ ತಿಳಿಯಾಗಿದ್ದರೆ ಚೂಟಿಯಾಗಿರುತ್ತಾರೆ. ಚಾಕೊಲೇಟ್‌, ಕೇಕ್‌ ಸೇವನೆಯಿಂದ ಬುದ್ಧಿಮಾಂದ್ಯತೆ ಕಾಡುತ್ತಿದೆ. ಬೆಳಿಗ್ಗೆ ಎದ್ದ ಕೂಡಲೇ ಟೀ, ಕಾಫಿ ಸೇವಿಸುವ ಬದಲು ಕಷಾಯ ಸೇವಿಸಿದರೆ ಅನಾರೋಗ್ಯ ಕಾಡುವುದೇ ಇಲ್ಲ. ವಾರಕ್ಕೊಮ್ಮೆ ಎಳ್ಳುಂಡೆ ತಿಂದರೆ ಮೂಳೆ ನೋವು ಬರುವುದಿಲ್ಲ. ಸ್ಟ್ರಾಬೆರಿ, ಕಿವಿ ಹಣ್ಣಿನ ಬದಲು ಸೀಬೆ ಹಣ್ಣಿನ ಸೇವನೆಯಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂದರು.

'ಪ್ಲಾಸ್ಟಿಕ್‌ ಬಳಸುವುದನ್ನು ಬಿಟ್ಟು ಮಡಕೆಯಲ್ಲಿ ನೀರು ಕುಡಿಯುವುದನ್ನು ಕಲಿಯಬೇಕಿದೆ. ಕೇವಲ ಒಂದು ತಾಮ್ರದ ಪಟ್ಟಿಯಿಂದ ನೀರು ಶುದ್ಧೀಕರಿಸಬಹುದಾಗಿದೆ. ತರಕಾರಿಯಲ್ಲಿರುವ ಕೀಟನಾಶಕದ ಅಂಶ ಹೋಗಲಾಡಿಸಲು ಹುಣಸೆ ಹಣ್ಣಿನಲ್ಲಿ ತೊಳೆಯಬೇಕು, ನಂತರ ತಾಮ್ರದ ಪಟ್ಟಿಯಿಟ್ಟ ನೀರಿನಲ್ಲಿ ತೊಳೆಯುವುದರಿಂದ ಶುದ್ಧವಾದ ತರಕಾರಿ ಬಳಸಬಹುದು'ಎಂದು ಸಲಹೆ ನೀಡಿದರು.

ಬದಲಾವಣೆ ನೋಡಿ:'ನಿತ್ಯ ಬೆಳಗ್ಗೆ ಧ್ಯಾನ, ವಾಕಿಂಗ್‌ ಮಾಡಿ ಸರಿಯಾಗಿ ನಿದ್ರೆ ಮಾಡಿದರೆ ರೋಗಗಳು ಬರುವುದಿಲ್ಲ. ನಾರಿನಂಶವಿರುವ ಸಿರಿಧಾನ್ಯಗಳ ಬಳಕೆಯಿಂದ ಮಲಬದ್ಧತೆ ಪರಿಹಾರವಾಗುತ್ತದೆ. ಸಿರಿಧಾನ್ಯ ಬಳಕೆಗೆ ಸರ್ಕಾರ ಪ್ರೋತ್ಸಾಹಿಸುತ್ತಿದೆ. ಸಿರಿಧಾನ್ಯಗಳು ಮಾನವ ಕುಲಕ್ಕೆ ಅಮೃತವಾಗಿವೆ, ನಾವು ಈ ಧಾನ್ಯಗಳನ್ನು ಮರೆತಿರುವುದಕ್ಕೆ ಅಂಧಕಾರದಲ್ಲಿ ಕಳೆದು ಹೋಗಿದ್ದೇವೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಟಿ.ವಿ ಮಾಗಳದ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಅಂಗಡಿ, ಪತ್ರಕರ್ತ ಬಸವರಾಜ ಬಿನ್ನಾಳ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಯಂಕಣ್ಣ ದೊಡ್ಡಯರಾಶಿ, ಮಲ್ಲಿಕಾರ್ಜುನ ಗಡಗಿ, ಶಾಂತಾ ಯರಾಶಿ, ಮಹೇಶ ಮೈನಳ್ಳಿ, ಸಂಗಮೇಶ ಡಂಬಳ, ದೇವಪ್ಪ ಕಟ್ಟಿಮನಿ, ರುದ್ರಪ್ಪ ಬಂಡಾರಿ, ನಿಂಬವ್ವ ಕೋಳಿಹಾಳ, ಹಂಪಿ ಹನುಮಂತಯ್ಯ, ಜಗದೀಶ ತೆಗ್ಗನಮನಿ, ಮಲ್ಲಿಕಾರ್ಜುನಗೌಡ ಶರಣಗೌಡ, ವೀರಮ್ಮ ಹನುಮಂತಪ್ಪ, ಸುವರ್ಣಮ್ಮ ಹುಯಿಲಗೋಳ, ಮಲ್ಲನಗೌಡ ಹೊಸಮನಿ, ಎ. ಪ್ರಭಾವತಿ, ಬಸವರಾಜ ವಲ್ಮಕೊಂಡಿ ಇದ್ದರು.

ಭೂಮಿ ಸವಕಳಿ ತಡೆಗೆ ಬದು ನಿರ್ಮಾಣ ಅಗತ್ಯ

ಕೃಷಿಭೂಮಿಯಲ್ಲಿ ಸಾಮಾನ್ಯ ಇಳಿಜಾರು ಅಥವಾ ಹೆಚ್ಚು ಇಳಿಜಾರುಗಳಿದ್ದಲ್ಲಿ ಬಿದ್ದ ಮಳೆನೀರು ರಭಸವಾಗಿ ಹರಿದು ಮಣ್ಣಿನ ಸವಕಳಿಯನ್ನು ಹೆಚ್ಚಿಸುತ್ತದೆ. ಇಂತಹ ಭೂಮಿಗಳಲ್ಲಿ ಬದುಗಳು ಹೆಚ್ಚು ಸಹಕಾರಿಯಾಗಿ ಕಂಡು ಬರುತ್ತವೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಜಲತಜ್ಞ ಚನ್ನಬಸಪ್ಪ ಕೊಂಬಳಿ ಅಭಿಪ್ರಾಯಪಟ್ಟರು.

ಕೃಷಿಭೂಮಿ ತನ್ನ ಇಳಿಜಾರುವಿನಲ್ಲಿ ಶೇ 5ಕ್ಕಿಂತ ಕಡಿಮೆ ಇದ್ದು, ಇಂತಹ ಭೂಮಿಯ ಇಳಿಜಾರಿಗೆ ಅಡ್ಡಲಾಗಿ ಸಮ ಪಾತಾಳಿ ಬದುಗಳನ್ನು ಹಾಗೂ ಹೆಚ್ಚು ಇಳಿಜಾರು ಇರುವ ಕೃಷಿ ಭೂಮಿಗೆ ಬೆಂಚು ಬದುಗಳನ್ನು ನಿರ್ಮಿಸಿ ಹರಿದು ಹೋಗುವ ಮಳೆ ನೀರನ್ನು ಭೂಮಿಯಲ್ಲಿಯೇ ಸಂರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಇದಲ್ಲದೇ ಹನಿ ನೀರಾವರಿ ಪದ್ಧತಿಯಿಂದ ಬೆಳೆಗಳಿಗೆ ನೀರುಣಿಸುವ ಮೂಲಕ ಜಲ ಸಂರಕ್ಷಣೆ ಸಾಧಿಸಬಹುದು ಎಂದರು.

ಬಹುದೊಡ್ಡ ಹಳ್ಳಿಗಳಲ್ಲಿ ಮಳೆನೀರು ಹರಿದು ಮುಂದೆ ಸಾಗುತ್ತಿರುತ್ತದೆ. ಇದಕ್ಕೆ ಕಡಿವಾಣದಂತೆ ಹಳ್ಳಿಗಳ ತಗ್ಗು ಪ್ರದೇಶಗಳಲ್ಲಿ ಅಡ್ಡಲಾಗಿ ನಿಂತು ಮುಂದೆ ಸಾಗುತ್ತಿರುತ್ತದೆ. ಇಂತಹ ವಿಧಾನಗಳು ಇಂಗು ತೊಟ್ಟಿಯಂತೆ ಕಾರ್ಯ ನಿರ್ವಹಿಸಿ ಜಲ ಸಂವರ್ಧನೆಗೆ ನಾಂದಿಯಾಗಬಲ್ಲದು, ಜೊತೆಗೆ ದನ ಕರುಗಳಿಗೆ ಕುಡಿಯುವ ನೀರಿನ ಬವಣೆಯನ್ನು ತಪ್ಪಿಸಿದಂತಾಗುತ್ತದೆ ಎಂದರು.

**

ಕಾಡು, ಮರ ಬೆಳೆಸುವ ಮೂಲಕ ನಾಡು ಕಟ್ಟಬೇಕಿದೆ. ರಸಗೊಬ್ಬರ ಹೆಚ್ಚಾಗಿ ಬಳಸುವ ರಾಜ್ಯಗಳಲ್ಲಿ ಕ್ಯಾನ್ಸರ್‌ ಪ್ರಮಾಣ ಶೇ.40ರಷ್ಟು ಹೆಚ್ಚಾಗಿದೆ. ಅತಿಯಾಗಿ ರಸಗೊಬ್ಬರ ಬಳಸುವ ಪಂಜಾಬ್‌ ರಾಜ್ಯ ಇದಕ್ಕೆ ಉತ್ತಮ ಉದಾಹರಣೆ
- ಸುರೇಶಗೌಡ ಪಾಟೀಲ, ಸಾವಯವ ಕೃಷಿ ತಜ್ಞ, ಹುಲಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.