ADVERTISEMENT

ಕಾರಟಗಿ: ಭತ್ತಕ್ಕೆ ₹3,200 ಬೆಂಬಲ ಬೆಲೆ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 5:37 IST
Last Updated 14 ಅಕ್ಟೋಬರ್ 2025, 5:37 IST
ಕಾರಟಗಿಯಲ್ಲಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಪ ತಹಶೀಲ್ದಾರ್ ಜಗದೀಶಕುಮಾರಗೆ ಸೋಮವಾರ ಮನವಿ ಸಲ್ಲಿಸಿದರು
ಕಾರಟಗಿಯಲ್ಲಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಪ ತಹಶೀಲ್ದಾರ್ ಜಗದೀಶಕುಮಾರಗೆ ಸೋಮವಾರ ಮನವಿ ಸಲ್ಲಿಸಿದರು   

ಕಾರಟಗಿ: ಭತ್ತಕ್ಕೆ ಸ್ವಾಮಿನಾಥನ್ ಆಯೋಗದ ವರದಿಯಂತೆ ₹3,200 ಬೆಂಬಲ ಬೆಲೆ ನೀಡಬೇಕು. ತಕ್ಷಣವೇ ಖರೀದಿ ಕೇಂದ್ರ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕ ಆಗ್ರಹಿಸಿ, ಕಂದಾಯ, ಜೆಸ್ಕಾಂ, ಪುರಸಭೆ, ಪೊಲೀಸ್ ಅಧಿಕಾರಿಗಳಿಗೆ ಸೋಮವಾರ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.

ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಸಿದ ಸಂಘದ ಪದಾಧಿಕಾರಿಗಳು, ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸುತ್ತಿದ್ದೇವೆ. ಸೂಕ್ತ ಸ್ಪಂದನೆ ದೊರೆಯದಿದ್ದರೆ ಮುಂದೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು.

ರೈತ ಸಂಘದ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ,‘ರೈತರು ಬೆಳೆ ಬೆಳೆಯಲು ಮಾಡುವ ಖರ್ಚು ಏರಿಕೆ ಕ್ರಮದಲ್ಲಿದ್ದರೆ, ಭತ್ತದ ಬೆಲೆ ಅದಕ್ಕೆ ತಕ್ಕಂತೆ ಏರುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ADVERTISEMENT

ಸಂಘದ ತಾಲ್ಲೂಕು ಅಧ್ಯಕ್ಷ ನಾರಾಯಣ ಈಡಿಗೇರ,‘32/1-2ರ ನಾಲೆಯ ಪೈಪ್‌ನಲ್ಲಿ ತ್ಯಾಜ್ಯ ಸಂಗ್ರಹಗೊಂಡು ನೀರು ಹರಿಯುವಿಕೆ ಕ್ಷೀಣಿಸಿದ್ದು ತುರ್ತು ಕ್ರಮಕ್ಕೆ ಮುಂದಾಗಬೇಕು. ಕಂದಾಯ ಇಲಾಖೆ ನೀಡಿದ ಹಕ್ಕುಪತ್ರದ ಆಧಾರದ ಮೇಲೆ ಪುರಸಭೆ ಫಾರ್ಂ– 3 ನೀಡಬೇಕು. ತುಂಗಭದ್ರಾ ಜಲಾಶಯದ ಹೂಳು ತಗೆಯುವ ಜೊತೆಗೆ ನೂತನ ಗೇಟ್‌ ಅಳವಡಿಸಬೇಕು. ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಮುಂದಾಗಬೇಕು. ಅಧಿಕಾರಿಗಳು ತಕ್ಷಣವೇ ರೈತರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು’ ಎಂದರು.

ಉಪ ತಹಶೀಲ್ದಾರ್ ಜಗದೀಶಕುಮಾರ, ಪುರಸಭೆ ವ್ಯವಸ್ಥಾಪಕ ಪರಮೇಶ್ವರಪ್ಪ, ನೀರಾವರಿ ಇಲಾಖೆಯ ಎಂಜಿನೀಯರ್‌ ವೆಂಕಟೇಶ್ವರ, ಜೆಸ್ಕಾಂ ಇಲಾಖೆಯ ಪ್ರತಿನಿಧಿಗೆ ವಿವಿಧ ಬೇಡಿಕೆಗಳ ಮನವಿಯನ್ನು ಸಂಘದ ಪದಾಧಿಕಾರಿಗಳು ಸಲ್ಲಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ನಾಯಕ, ಪದಾಧಿಕಾರಿಗಳಾದ ರಮೇಶ ಭಂಗಿ, ನಾಗಭೂಷಣ, ಭಾಷಾಸಾಬ, ಸುರೇಶ ಮೇಟಿ, ಅಯ್ಯಪ್ಪ ಸುದ್ದಿ, ಭೀಮಣ್ಣ ಪನ್ನಾಪೂರ, ಸಣ್ಣ ರಾಮಣ್ಣ, ಶರಣಪ್ಪ ಕುರಿ, ಪರಶುರಾಮ್ ದಾರಿಮನಿ, ಪರಶುರಾಂ ಮಡಿವಾಳರ್‌ ಸೇರಿ ನೂರಾರು ರೈತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.