
ಕಾರಟಗಿ (ಕೊಪ್ಪಳ ಜಿಲ್ಲೆ): ತುಂಗಭದ್ರಾ ಜಲಾಶಯದ ಸೆರಗಿನ ನೀರಾವರಿ ಪ್ರದೇಶದಲ್ಲಿ ಭತ್ತ ಬೆಳೆಯುವ ಕ್ಷೇತ್ರ ಈಗ ಪರ್ಯಾಯ ಬೆಳೆಯ ಪಯಣದಲ್ಲಿದೆ. ಹಚ್ಚ ಹಸಿರು ಜಾಗೆಯಲ್ಲಿ ಈಗ ತೊಗರಿ, ಒಣ ಕಡಲೆ ಎದ್ದು ಕಾಣುತ್ತಿದೆ.
ಜಲಾಶಯದ ವ್ಯಾಪ್ತಿಯ ಪ್ರದೇಶಗಳಲ್ಲಿ ಭತ್ತದ ಬೆಳೆಯ ಹಚ್ಚ ಹಸಿರಿನ ದೃಶ್ಯ ಸಾಮಾನ್ಯ. ಆ ಹಸಿರಿನ ಜಾಗೆಯಲ್ಲಿ ಈಗ ಒಳ್ಳೆಯ ಬೆಲೆಯ ಕಾರಣದಿಂದ ಮೆಕ್ಕೆಜೋಳದ ಜಾಗೆವನ್ನು ‘ತೊಗರಿ’ ಆಕ್ರಮಿಸಿ, ಹಿಂಗಾರು ಹಂಗಾಮಿನಲ್ಲಿಯೇ ತೊಗರಿ ಬೆಳೆ ಎಲ್ಲೆಡೆ ರಾಜಾಜಿಸುತ್ತಿದೆ. ಜಲಾಶಯಕ್ಕೆ ಹೊಸದಾಗಿ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿರುವ ಕಾರಣ ಎರಡನೇ ಬೆಳೆಗೆ ಕಾಲುವೆಗಳಿಗೆ ನೀರು ಹರಿಸಿಲ್ಲ. ಇದರಿಂದ ನಿರಾಶನಾಗದೆ ರೈತ ಪರ್ಯಾಯ ಬೆಳೆಯ ಮೊರೆ ಹೋಗಿದ್ದಾನೆ. ತಾಲ್ಲೂಕಿನ 920 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದೆ.
ನೀರಿನ ಅಭಾವ ಎದುರಿಸುತ್ತಿರುವ ವಿವಿಧ ಗ್ರಾಮಗಳ ರೈತರಿಗೆ ತೊಗರಿ ಉತ್ತಮ ಆದಾಯದ ಮೂಲವಾಗಿದೆ. ವಿಳಂಬವಾಗಿ ಬಿತ್ತಿದವರು ಇಳುವರಿ ಕಡಿಮೆ ಪಡೆಯುವ ಜೊತೆಗೆ ಇನ್ನೂ 15 ದಿನ ಕಾಯಬೇಕಿದೆ. ತೊಗರಿಯ ಸಮೃದ್ದವಾದ ಬೆಳೆಯು ತಾಲ್ಲೂಕಿನ ವಿವಿಧ ಗ್ರಾಮಗಲ್ಲಿ ಸಂಚರಿಸಿದರೆ, ಮೈದಾಳಿ ನಿಂತಿರುವ ತೊಗರಿಯ ಘಮಲು ಕೆಲ ಸಮಯ ನಿಂತು ನೋಡಿದ ಮೇಲೆಯೇ ಮುಂದೆ ಸಾಗುವಂತೆ ಮಾಡುತ್ತಿದೆ.
ಈಗ ಭತ್ತ ಕಟಾವು ಮಾಡುತ್ತಿರುವ, ಕಟಾವು ಮಾಡಿದ ರೈತರು, ಭೂಮಿ ಹಸಿಯಾಗಿರುವಾಗಲೇ ಹಿಂಗಾರು ಬೆಳೆಗೆ ಅಲಸಂದಿ, ಉದ್ದು, ಸಾಸಿವೆ ಸಹಿತ ಇತರ ಬೀಜಗಳನ್ನು ಹಾಕಿ, ಪರ್ಯಾಯ ಬೆಳೆಯತ್ತ ವಾಲುವ ಚಿಂತನೆಯಲ್ಲಿದ್ದಾರೆ. ರೈತರಿಗೆ ಇದು ಅನಿವಾರ್ಯವಾಗಿದೆ.
ತೊಗರಿಯ ಬೆಳೆ ಹುಬ್ಬೇರಿಸುವಂತೆ ಸಮೃದ್ದವಾಗಿ ಬೆಳೆದು, ಉತ್ತಮ ಇಳುವರಿ ನೀಡಿದೆ. ಕ್ವಿಂಟಲ್‌ಗೆ ₹10 ಸಾವಿರ ಇತ್ತಾದರೂ ಕಳೆದ ವರ್ಷದಿಂದ ಏಳೆಂಟು ಸಾವಿರಕ್ಕೆ ಇಳಿದಿದೆ. ಸರಾಸರಿ ಎಕರೆಗೆ 5ರಿಂದ 7ಕ್ವಿಂಟಲ್ ಬೆಳೆ ಬರುವ ಅಂದಾಜಿನಲ್ಲಿ ರೈತರಿದ್ದಾರೆ.
ತೊಗರಿ ಬೆಳೆಯು ಬೆಳೆಯುತ್ತಲೇ 50 ರಿಂದ 60ದಿನಗಳೊಳಗೆ ಕುಡಿ ಚಿವುಟುವುದು, ಕಲಬುರಗಿ ಕೃಷಿ ಸಂಶೋಧನಾ ಕೇಂದ್ರ ಸಂಶೋಧಿಸಿದ ʼಪಲ್ಸ್ ಮ್ಯಾಜಿಕ್ʼ ಲಘು ಪೋಷಕಾಂಶ ಸಿಂಪಡಿಸುವುದರಿಂದ ಸಮೃದ್ದ ಬೆಳೆಯ ಜೊತೆಗೆ ಉತ್ತಮ ಇಳುವರಿ ಬರುತ್ತಿದೆ. ಇದನ್ನು ಮನಗಂಡಿರುವ ರೈತರು ಈ ಕ್ರಮಗಳನ್ನು ತೊಗರಿ ಬೆಳೆಯಲ್ಲಿ ಪ್ರಯೋಗಿಸಿ ಉತ್ತಮ ಇಳುವರಿ ಪಡೆಯುವರು ಎನ್ನುತ್ತಾರೆ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ನಾಗರಾಜ್.
ಕುಡಿ ಚಿವುಟುವ ಕ್ರಿಯೆಗೆ ಯಂತ್ರವೂ ಬಂದಿದ್ದೂ, ಅನೇಕ ಗ್ರಾಮಗಳ ತೊಗರಿ ಬೆಳೆಯಲ್ಲಿ ಪ್ರಾತ್ಯಕ್ಷಿಕೆ ಮಾಡಿದ್ದೇವೆ. ರೈತರೂ ಅದನ್ನೂ ಅನುಸರಿಸುತ್ತಿದ್ದು, ಇಳುವರಿ ಅಧಿಕವಾಗಿದೆ ಎಂಬ ಅಂಶ ಮನವರಿಕೆಯಾಗಿದೆ ಎಂದವರು ಪ್ರತಿಕ್ರಿಯಿಸಿದರು.
ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಬದಲಿಸುವ ಮಹತ್ವದ ಕ್ರಮದಿಂದ ಭತ್ತದ ಜಾಗೆಯಲ್ಲಿ ಈ ಬಾರಿ ಪರ್ಯಾಯ ಬೆಳೆ ಬೆಳೆಯುವುದು ರೈತರಿಗೆ ಅನಿವಾರ್ಯವಾಗಿದೆ. ಅದಕ್ಕೆ ಹೊಂದಿಕೊಳ್ಳಲೇಬೇಕಿದೆ. ಭೂಮಿ ಬಿಸಿಲಿಗೆ ಮೈ ಒಡ್ಡುವ, ವಿಪರೀತ ಕ್ರಿಮಿನಾಶಕ, ಗೊಬ್ಬದ ಬಾಧೆಯಿಂದ ಭೂಮಿ ಮುಕ್ತವಾಗಲಿದೆ. ಭೂಮಿ ʼಬಂಜರುʼ ಶಾಪದಿಂದ ಮುಕ್ತವಾಗುವುದು ಎಂಬುದೇ ಉತ್ತಮ ಸಂದೇಶವಾಗಲಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.
ಕಾರಟಗಿ ತಾಲ್ಲೂಕಿನ 920 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ
ಕೊನೆಯ ಹಂತದಲ್ಲಿ ಬಂದ ಅಕಾಲಿಕ ಮಳೆ, ಮಂಜು ಇಳುವರಿ ಕುಂಠಿತ
ಕಡಿಮೆ ಖರ್ಚಿನಲ್ಲಿ ಅಧಿಕ ಲಾಭದ ಸಂತಸದಲ್ಲಿ ರೈತರು
ವಿಪರೀತ ಗೊಬ್ಬರ ಕ್ರಿಮಿನಾಶಕದಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ರೈತರು ಭತ್ತದ ಬೆಳೆಗೆ ಹೊಂದಿಕೊಳ್ಳದೇ ಅನೇಕ ಲಾಭದಾಯಕವಾದ ಬೆಳೆಯತ್ತ ವಾಲಬೇಕಿದೆ. ಇದರಿಂದ ಭೂಮಿಯ ಫಲವತ್ತತೆ ಉಳಿದು ಬಂಜರು ಆಗುವುದು ತಪ್ಪುವುದು. ಪರ್ಯಾಯ ಮಾರ್ಗದತ್ತ ರೈತ ಸಮುದಾಯ ವಾಲಿದರೆ ಭೂಮಿಗೆ ಭವಿಷ್ಯವಿದೆ.ನಾಗರಾಜ್ ರ್‍ಯಾವಳದ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಕಾರಟಗಿ.
ಕೊನೆಯ ಹಂತದಲ್ಲಿ ಬಂದ ಅಕಾಲಿಕ ಮಳೆಯಿಂದ ಇಳುವರಿ ಕೆಲವೆಡೆ ಕುಂಠಿತವಾಗಬಹುದು. ನಮ್ಮ ಭೂಮಿಯಲ್ಲಿ ಸಮೃದ್ದ ಬೆಳೆ ಇದ್ದು ಎಕರೆಗೆಗೆ 6-7 ಕ್ವಿಂಟಲ್ ತೊಗರಿ ಬೆಳೆ ಬರಲಿದೆ. ಮಿತ ನೀರಾವರಿ ಬೆಳೆಯಲ್ಲಿ ಖರ್ಚು ಕಡಿಮೆ ಲಾಭ ಅಧಿಕ. ಇದೇ ಮಾದರಿಯನ್ನು ರೈತರು ಅಳವಡಿಸಿಕೊಳ್ಳಬೇಕು.ಅಮರೇಶ ಮೈಲಾಪುರ ಶಿಕ್ಷಕ ಹಾಗೂ ಕೃಷಿ ಪ್ರಿಯ
ನಮ್ಮ 3 ಎಕರೆಯಲ್ಲಿ ತೊಗರಿ ಬೆಳೆಯನ್ನು ವಿಳಂಬವಾಗಿ ಬೆಳೆಯಲಾಯಿತು. ಮಂಜು ಹಾಗೂ ಮಳೆಯಿಂದ ಇಳುವರಿ ಕಡಿಮೆಯಾಗಬಹುದು. ದರ ಅಧಿಕವಾಗಿ ದೊರಯಬಹುದು ಎಂಬ ನಿರೀಕ್ಷೆ ನಮ್ಮದು.ಚನ್ನಬಸಯ್ಯಸ್ವಾಮಿ ಬೂದಗುಂಪಾ ಪ್ರಗತಿಪರ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.