
ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾಮ ಸಮೀಪದ ತುಂಗಭದ್ರ ನದಿ ಮಧ್ಯದಲ್ಲಿನ ನವವೃಂದಾವನ ಗಡ್ಡೆಯಲ್ಲಿ ಗುರುವಾರ ಉತ್ತರಾಧಿಮಠದಿಂದ ಪದ್ಮನಾಭತೀರ್ಥರ ಉತ್ತರಾರಾಧನೆ ನೆರವೇರಿತು.
ಬೆಳಿಗ್ಗೆ ಉತ್ತರಾಧಿಮಠದ ಪೀಠಾಧಿಪತಿ ಸತ್ಯಾತ್ಮ ತೀರ್ಥ ಶ್ರೀ ಪಾದಂಗಳವರಿಂದ ಪದ್ಮನಾಭ ತೀರ್ಥರ ಬೃಂದಾವನಕ್ಕೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಸೀತಾ ಸಮೇತ ಶ್ರೀಮೂಲರಾಮದೇವರಿಗೆ ಸಂಸ್ಥಾನ ಪೂಜೆ ನೆರವೇರಿಸಿದರು.
ನಂತರ ಎಲ್ಲ ಬೃಂದಾವನಗಳಿಗೆ ಮಹಾಮಂಗಳಾರತಿ, ಭಕ್ತರಿಗೆ ಮುಧ್ರಾಧಾರಣೆ, ತೀರ್ಥಪ್ರಸಾದ, ಫಲಮಂತ್ರಾಕ್ಷತೆ ನೀಡಿದರು. ಭಕ್ತರಿಗೆ ತೀರ್ಥಪ್ರಸಾದ ನಡೆದವು. ಉತ್ತರಾರಾಧನೆಯಲ್ಲಿ ಪಂಡಿತರಿಂದ ಉಪನ್ಯಾಸ ಕಾರ್ಯಕ್ರಮ ನೆರವೇರಿದವು.
ಸತ್ಯಾತ್ಮ ತೀರ್ಥರು ಬುಧವಾರ ಮಧ್ಯಾಹ್ನವೇ ನವವೃಂದಾವನ ಗಡ್ಡಿಗೆ ಆಗಮಿಸಿ, ರಾಯರ ಮಠದ ಶ್ರೀಗಳೊಂದಿಗೆ ಉಭಯ ಮಠಗಳ ನಡುವಿನ ಗೊಂದಲ ನಿವಾರಣೆ ಕುರಿತು ಮಾತುಕತೆ ನಡೆಸಿ, ಸಂಜೆ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ನಡೆಸಿದರು.
ದಿವಾನರಾದ ಶಶಿ ಆಚಾರ್, ಆನಂದಾಚಾರ್ ಮಹಿಶಿ, ಮಠದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಸನ್ನಾಚಾರ್ಯ ಕಟ್ಟಿ, ಪಾಂಡುರಂಗಾಚಾರ್, ಆನಂದತೀರ್ಥಾಚಾರ್ ಜೋಶಿ, ರಾಮಾಚಾರ್ ಉಮರ್ಜಿ, ವರದಾಚಾರ್, ದ್ವಾರಕಾನಾಥಾ ಚಾರ್, ಶ್ರೀಕಾಂತಾಚಾರ್, ಆನಂದಮೂರ್ತಿ ಆಚಾರ್ ಹುಲಿಗಿ, ನಾರಾಯಣಾಚಾರ್ ಹುಲಿಗಿ, ಮಠದ ಪ್ರಮುಖರಾದ ಗುರಾಜ ಬೆಳ್ಳುಬ್ಬಿ, ಹನುಮೇಶಾಚಾರ್ ಜೋಶಿ, ವಾದಿರಾಜ ಕಲ್ಮಂಗಿ, ಉಪೇಂದ್ರಾಚಾರ್ ಕೇಸಕ್ಕಿ ವೆಂಕಟಗಿರಿ ಅನ್ವರಿ, ವೆಂಕಟೇಶ ಕೇಸಕ್ಕಿ, ಶಿರೀಶ್ ಕಲ್ಮಂಗಿ ಸೇರಿದಂತೆ ಮಠದ ಭಕ್ತರು ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.