ಗಂಗಾವತಿ (ಕೊಪ್ಪಳ ಜಿಲ್ಲೆ): ಬಸ್ ಟಿಕೆಟ್ ದರ ಹೆಚ್ಚಳದಿಂದ ಕೋಪಗೊಂಡ ಪ್ರಯಾಣಿಕನೊಬ್ಬ ಕೆಕೆಆರ್‌ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಘಟನೆ ತಾಲ್ಲೂಕಿನ ವಿರುಪಾಪುರಗಡ್ಡೆಯ (ಸೇತುವೆ) ಬಳಿ ಸೋಮವಾರ ನಡೆದಿದೆ.
ಹನುಮಪ್ಪ ಹಲ್ಲೆಗೆ ಒಳಗಾದ ಬಸ್ ನಿರ್ವಾಹಕ. ವಿಜಯನಗರ ಜಿಲ್ಲೆಯ ಸೀತರಾಮ ತಾಂಡಾದ ನಿವಾಸಿ ಶ್ರೀಧರ ಲಂಬಾಣಿ ಹಲ್ಲೆ ಮಾಡಿದ ಪ್ರಯಾಣಿಕ.
ಗಂಗಾವತಿ ಡಿಪೊಗೆ ಸೇರಿದ ಹುಲಗಿಯಿಂದ ಗಂಗಾವತಿ ಹೊರಟಿದ್ದ ಕೆಕೆಆರ್‌ಟಿಸಿ ಬಸ್ ಅನ್ನು ಶ್ರೀಧರ ಲಂಬಾಣಿ ಹುಲಗಿಯಲ್ಲಿ ಹತ್ತಿದ್ದಾನೆ. ₹30 ನೀಡಿ ಹನುಮನಹಳ್ಳಿಗೆ ಹೋಗಲು ಟಿಕೆಟ್ ಪಡೆದಿದ್ದಾನೆ. ಹನುಮನಹಳ್ಳಿಗೆ ಮುನ್ನವೇ ವಿರುಪಾಪುರಗಡ್ಡೆ ಬಳಿ ಇಳಿದುಕೊಂಡ ಪ್ರಯಾಣಿ, ಚಿಲ್ಲರೆ ನೀಡುವಂತೆ ನಿರ್ವಾಹಕರನ್ನು ಕೇಳಿದ್ದಾನೆ.
ಹುಲಗಿಯಿಂದ ಹನುಮನಹಳ್ಳಿ ಗ್ರಾಮಕ್ಕೆ ಟಿಕೆಟ್ ದರ ₹30 ಎಂದು ಹೇಳಿದ ನಿರ್ವಾಹಕನ ಅಂಗಿ ಹಿಡಿದು ಕೆಳಗಿಳಿಸಿದ ಪ್ರಯಾಣಿಕ, ‘ಯಾರನ್ನು ಕೇಳಿ ಬಸ್ ಪ್ರಯಾಣ ದರ ಹೆಚ್ಚಿಸಲಾಗಿದೆ’ ಎಂದು ಕಪಾಳಮೋಕ್ಷ ಮಾಡಿದ್ದಾನೆ. ಅಲ್ಲದೇ ಕಲ್ಲು ಎತ್ತಿಕೊಂಡು ಹಣೆಗೆ ಹೊಡೆದು ಹಲ್ಲೆ ಮಾಡಿದ್ದಾನೆ. ಜಗಳ ಬಿಡಿಸಲು ಬಂದ ಚಾಲಕ ಹುಸೇನ್ ಅವರಿಗೂ ಬೆದರಿಕೆ ಹಾಕಿದ್ದಾನೆ. ಬಳಿಕ ಸಹ ಪ್ರಯಾಣಿಕರು ಜಗಳ ಬಿಡಿಸಿ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಗಂಗಾವತಿಗೆ ತೆರಳಿದ ನಂತರ ನಿರ್ವಾಹಕರು ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.