ADVERTISEMENT

ಗಂಗಾವತಿ: ತಂಗುದಾಣ ಶಿಥಿಲ; ಪ್ರಯಾಣಿಕರ ಪರದಾಟ

ರಸ್ತೆಬದಿಯಲ್ಲೇ ಬಸ್ ಕಾಯುವ ಪರಿಸ್ಥಿತಿ; ನಿಲ್ದಾಣ ನಿರ್ಮಾಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 4:01 IST
Last Updated 24 ನವೆಂಬರ್ 2022, 4:01 IST
ಗಂಗಾವತಿ ತಾಲ್ಲೂಕಿನ ಸಾಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮನಹಳ್ಳಿ ಗ್ರಾಮದ ಬಸ್ ತಂಗುದಾಣದ ದುಸ್ಥಿತಿ
ಗಂಗಾವತಿ ತಾಲ್ಲೂಕಿನ ಸಾಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮನಹಳ್ಳಿ ಗ್ರಾಮದ ಬಸ್ ತಂಗುದಾಣದ ದುಸ್ಥಿತಿ   

ಗಂಗಾವತಿ: ತಾಲ್ಲೂಕಿನಲ್ಲಿ ಹಲವು ಬಸ್ ತಂಗುದಾಣಗಳು ಶಿಥಿಲವಾದ ಸ್ಥಿತಿಯಲ್ಲಿದ್ದು, ಪ್ರಯಾಣಿಕರು ಬಸ್‌ಗಾಗಿ ರಸ್ತೆಪಕ್ಕ, ಅಂಗಡಿ ಮುಂಗಟ್ಟು, ವೃತ್ತಗಳ ಬಳಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.

ಗ್ರಾಮೀಣ ಭಾಗದಲ್ಲಿ ಬಹುತೇಕ 40 ವರ್ಷಕ್ಕೂ ಹಳೆಯದಾದ ಬಸ್ ತಂಗುದಾಣಗಳಾಗಿದ್ದು, ಅವುಗಳ ಮೇಲ್ಛಾವಣಿ ಸಿಮೆಂಟ್ ಪದರು ಕಿತ್ತು ಹೋಗಿದೆ. ಕಬ್ಬಿಣದ ರಾಡ್ ಹೊರ ಬಿದ್ದು, ಕುಸಿಯುವ ಹಂತ ತಲು‍ಪಿವೆ.

ತಾಲ್ಲೂಕಿನಲ್ಲಿ 53ಕ್ಕೂ ಹೆಚ್ಚು ಬಸ್ ತಂಗುದಾಣಗಳಿದ್ದು, ಅದರಲ್ಲಿ ಶೇ 80ರಷ್ಟು ಶಿಥಿಲವಾದ ಸ್ಥಿತಿಯಲ್ಲಿವೆ. ಶಾಸಕರ ಅನುದಾನದಡಿ ಇತ್ತೀಚೆಗೆ ಅಂಜನಾದ್ರಿ ಬೆಟ್ಟ, ಕಡೆಬಾಗಿಲು, ಸಾಯಿನಗರ, ಮರಳಿ, ಶ್ರೀರಾಮನಗರ, ಆಗೋಲಿ ಸೇರಿ ವಿವಿಧೆಡೆ ನಿರ್ಮಿಸಿರುವ ಬಸ್‌ ಶೆಲ್ಟರ್‌ಗಳಲ್ಲಿ ಕುರ್ಚಿಗಳು ಮುರಿದು ಬಿದ್ದು, ಕೂಡಲು ಆಸನಗಳಿಲ್ಲದಂತಾಗಿವೆ.

ADVERTISEMENT

ಕೆಲ ತಂಗುದಾಣಗಳು ಕಸ ಹಾಕುವ ತಾಣವಾದರೆ, ಕೆಲವು ಕುಡಕರ, ನಿರಾಶ್ರಿತರ ಆಶ್ರಯ ತಾಣಗಳಾಗಿ ಮಾರ್ಪಟ್ಟಿವೆ. ನಿರ್ವಹಣೆ ಇಲ್ಲದ ಕಾರಣ ಕಸ, ಪ್ಲಾಸ್ಟಿಕ್ ಸಂಗ್ರಹವಾಗಿ ದುರ್ವಾಸನೆ ಬೀರುತ್ತಿವೆ.

ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ: ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸಮುದಾಯ ಭವನ, ತಂಗುದಾಣ, ಗ್ರಂಥಾಲಯ ಸೇರಿ ಇತರೆ ಸರ್ಕಾರಿ ಕಟ್ಟಡಗಳನ್ನು ಸಂಬಂಧಿಸಿದ ಪಂಚಾಯಿತಿಗಳು 15ನೇ ಹಣಕಾಸು ಯೋಜನೆಯಡಿ ನಿರ್ವಹಣೆ ಮಾಡಬೇಕಿದೆ. ಆದರೆ ಪಿಡಿಒ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ತಂಗುದಾಣಗಳು ಪಾಳುಬಿದ್ದಿವೆ.

ದುರಸ್ತಿಗೆ ಕಾದ ತಂಗುದಾಣ: ತಾಲ್ಲೂಕಿನ ಹನುಮನಹಳ್ಳಿ, ಬಸವನದುರ್ಗಾ, ಸಂಗಾಪುರ, ಚಿಕ್ಕಜಂತಕಲ್, ಹಣವಾಳ, ವೆಂಕಟಗಿರಿ, ಆಗೋಲಿ, ಚಿಕ್ಕಬೆಣಕಲ್, ಡಣಾಪುರ, ಶ್ರೀರಾ ಮನಗರ, ಹೊಸಕೇರಾ, ಕೇಸರಹಟ್ಟಿ, ಮಲ್ಲಾಪುರ ಸೇರಿ ಹಲವು ತಂಗುದಾಣಗಳು ದುರಸ್ತಿಗೆ ಕಾದಿವೆ.

ರಸ್ತೆಯಲ್ಲಿ ನಿಲ್ಲುವ ಪ್ರಯಾಣಿಕರು: ಹುಲಿಗಿ- ಗಂಗಾವತಿ, ಶ್ರೀರಾಮನಗರ-ಗಂಗಾವತಿ, ವೆಂಕಟಗಿರಿ-ಗಂಗಾವತಿ, ಗಂಗಾವತಿ -ಹುಲಿಗಿಗೆ ತೆರಳುವ ಪ್ರಯಾಣಿಕರು, ವಿದ್ಯಾರ್ಥಿಗಳು ತಂಗುದಾಣ ಶಿಥಿಲವಾದ ಕಾರಣ ಪರ್ಯಾಯ ಸ್ಥಳಗಳಿಲ್ಲದೇ ಬಿಸಿಲಿನಲ್ಲೆ ರಸ್ತೆಯಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ: ಹಲವು ವರ್ಷಗಳಿಂದ ಗಂಗಾವತಿ ತಾಲ್ಲೂಕಿನ ಗ್ರಾಮೀಣ ಭಾಗದ ಬಸ್ ತಂಗುದಾಣಗಳು ನಿರ್ವಹಣೆ ಕೊರತೆಯಿಂದ ಶಿಥಿಲವಾಗಿದ್ದು, ಶಾಸಕರು ಹಾಗೂ ಇತರೆ ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸಿರುವ ಪರಿಣಾಮ ಪ್ರಯಾಣಿಕರ ತೊಂದರೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.