
ಮಂಜುನಾಥ್ ಎಸ್.ಅಂಗಡಿ
ಕುಕನೂರು: ಪಟ್ಟಣ ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶದ ವಿವಿಧ ರಸ್ತೆಗಳಲ್ಲಿ ವಾಹನ ಸಂಚಾರದಿಂದ ಹೊರಸೂಸುವ ಹೊಗೆ ಹಾಗೂ ದೂಳಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಕಲ್ಲು ಗಣಿಗಾರಿಕೆ, ರಸ್ತೆ ಮೇಲೆಯೇ ಧಾನ್ಯ ಒಕ್ಕಣೆ ಮಾಡುವುದರಿಂದ ಹೊರಡುವ ದೂಳು, ಬೀಡಿ–ಸಿಗರೇಟಿನ ಹೊಗೆ ವಾತಾವರಣ ಕಲುಷಿತಗೊಳಿಸಿದೆ. ರಸ್ತೆಗೆ ಹೊಂದಿಕೊಂಡಂತಿರುವ ಮನೆಗಳವರ ಸ್ಥಿತಿ ಹೇಳತೀರದು. ಆರೋಗ್ಯ ಇಲಾಖೆ ಪ್ರಕಾರ ತಾಲ್ಲೂಕಿನಲ್ಲಿ ದೂಳು, ಹೊಗೆ ಹಾಗೂ ಇನ್ನಿತರ ಕಾರಣಗಳಿಂದ ಶ್ವಾಸಕೋಶಕ್ಕೆ ಸಂಬಂಧಿಸಿದಂತೆ 1,056 ಪ್ರಕರಣಗಳು, ಆಸ್ತಮಾಕ್ಕೆ 805 ರೋಗಿಗಳು ಚಿಕಿತ್ಸೆಗೆ ದಾಖಲಾಗಿದ್ದಾರೆ.
ಆರೋಗ್ಯ ಕೇಂದ್ರಗಳಲ್ಲಿ ಆಸ್ತಮಾ ರೋಗಿಗಳು, 50 ಜನರು ಉಸಿರಾಟದ ತೊಂದರೆಗೆ ತುತ್ತಾಗಿದ್ದಾರೆ. ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿಯೂ ದೂಳಿನ ನರಕ ದರ್ಶನವಾಗುತ್ತಿದೆ. ಪಟ್ಟಣದಲ್ಲಿ ಕಲ್ಲು ಗಣಿಗಾರಿಕೆ, ಮರಳು, ಕ್ರಷರ್‌ಗಳ ದೂಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮರಳು, ಗರಸು ಕ್ರಷರ್ ಪುಡಿ, ಕಲ್ಲು ಸಾಗಿಸುವ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಅವುಗಳಿಂದ ಬರುವ ದೂಳಿನ ಕಿರಿಕಿರಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಗುದ್ನೆಪ್ಪನ ಮಠದಿಂದ ಪಟ್ಟಣದ ಕಡೆ ಬರುವ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ವೇಗವಾಗಿ ಹಾಗೂ ದೂಳನ್ನು ಹರಡುತ್ತ ರಸ್ತೆಯ ಮೇಲೆ ಬರುವ ದೃಶ್ಯ ಸಾಮಾನ್ಯವಾಗಿದೆ. ರಸ್ತೆಯಲ್ಲಿ ಎದುರಿಗೆ ಬರುವ ವಿದ್ಯಾರ್ಥಿಗಳನ್ನು ಲೆಕ್ಕಿಸದೆ ವೇಗವಾಗಿ ದೂಳನ್ನು ಹರಡುತ್ತಾ ವಾಹನಗಳು ಸಾಗುತ್ತವೆ. ಪಟ್ಟಣದ ಮೂಲಕವೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ನಿರಂತರವಾಗಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆಯ ಬದಿ ಅಗೆಯುತ್ತಿದ್ದು, ಇದರಿಂದ ಪಟ್ಟಣದಲ್ಲಿ ವಿಪರೀತ ದೂಳಾಗಿದೆ.
‘ಜನರ ಆರೋಗ್ಯದ ಮೇಲೆ ದೂಳು ಅತ್ಯಂತ ಕೆಟ್ಟ ಪರಿಣಾಮ ಬೀರುತ್ತಿದೆ. ಇತ್ತೀಚೆಗೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇರುವುದನ್ನು ಗಮನಿಸುತ್ತಿದ್ದೇನೆ’ ಎಂದು ವೈದ್ಯ ಜಂಬುನಾಥ ಅಂಗಡಿ ಹೇಳಿದರು.
ಆಹಾರ ಸೇರುವ ದೂಳು: ವಾಹನಗಳ ಓಡಾಟದಿಂದ ದೂಳು, ಕ್ರಷರ್‌ಗಳು ಹೊರಬಿಡುವ ಹೊಗೆ, ಬೂದಿ ಆಹಾರವನ್ನೂ ಸೇರುತ್ತಿದೆ. ಅನೇಕರು ಅಲರ್ಜಿ, ಆಸ್ತಮಾ, ಶ್ವಾಸಕೋಶ ಹಾಗೂ ಚರ್ಮ ರೋಗಗಳಿಗೆ ಬಲಿಯಾಗುತ್ತಿದ್ದಾರೆ.
ರಸ್ತೆಯ ದೂಳು ಮುಖ ಕಣ್ಣುಗಳ ಮೇಲೆ ಆವರಿಸಿ ತೊಂದರೆ ಸೃಷ್ಟಿಸುತ್ತದೆ. ಇದರಿಂದ ಹಲವು ಸೋಂಕುಗಳೂ ಕಾಣಿಸಿಕೊಳ್ಳುತ್ತವೆ. ಕಣ್ಣಿಗೆ ಬೀಳುವ ದೂಳನ್ನು ಕಣ್ಣೀರು ಸ್ವಚ್ಛಗೊಳಿಸಬಹುದಾದರೂ ವಿಪರೀತ ದೂಳು ಆವರಿಸಿದರೆ ಅದೂ ಕಷ್ಟ. ಜನ ಎಚ್ಚರ ವಹಿಸಬೇಕು ವೈದ್ಯಾಧಿಕಾರಿಡಾ.ಶರಣಯ್ಯ ಹಿರೇಮಠ
ಯುವ ಜನಾಂಗದಲ್ಲಿ ಡಸ್ಟ್ ಅಲರ್ಜಿ ಎಂಬ ಕಾಯಿಲೆ ಸಾಮಾನ್ಯವಾಗುತ್ತಿದೆ. ವಯಸ್ಸಾಗುತ್ತಿದ್ದಂತೆಯೇ ಇದು ಉಲ್ಬಣಗೊಂಡು ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದಿ ದಮ್ಮು ಅಸ್ತಮಾ ಆ ಬಳಿಕ ಕ್ಷಯಕ್ಕೆ (ಟಿ.ಬಿ) ತಿರುಗಿದರೆ ವರ್ಷದುದ್ದಕ್ಕೂ ಚಿಕಿತ್ಸೆ ಪಡೆಯಬೇಕಾಗುತ್ತದೆಡಾ.ಮಮತಾ ಇಲಕಲ್ ವೈದ್ಯೆ
ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ರಸ್ತೆಯನ್ನು ಅಗೆದು ಬಿಡಲಾದ ಕಾಮಗಾರಿಯನ್ನು ಸಂಬಂಧಪಟ್ಟ ಇಲಾಖೆಯವರಿಗೆ ತಿಳಿಸಿ ಕೆಲವೇ ದಿನಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡುತ್ತೇವೆನಾಗೇಶ್ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಕುಕನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.