ADVERTISEMENT

ಕೊಪ್ಪಳ: ಬೆಳಿಗ್ಗೆ ಪ್ರತಿಭಟನೆ, ಸಂಜೆ ಬಂತು ನೀರು

ದೂರವಾಯಿತು ಕೊಪ್ಪಳದ ಬಜಾರಮಠ ಲೇ ಔಟ್‌ ಜನರ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 15:28 IST
Last Updated 13 ಮಾರ್ಚ್ 2025, 15:28 IST
ಕೊಪ್ಪಳದ ಬಜಾರಮಠ ಲೇ ಔಟ್‌ನಲ್ಲಿ ನೀರಿನ ಸಮಸ್ಯೆಯಿಂದಾಗಿ ಸ್ಥಳೀಯರು ಗುರುವಾರ ಪ್ರತಿಭಟಿಸಿದಾಗ ಪೊಲೀಸ್‌ ಇನ್‌ಸ್ಟೆಕ್ಟರ್‌ ಜಯಪ್ರಕಾಶ ಅವರನ್ನು ಮನವೊಲಿಸಿದರು
ಕೊಪ್ಪಳದ ಬಜಾರಮಠ ಲೇ ಔಟ್‌ನಲ್ಲಿ ನೀರಿನ ಸಮಸ್ಯೆಯಿಂದಾಗಿ ಸ್ಥಳೀಯರು ಗುರುವಾರ ಪ್ರತಿಭಟಿಸಿದಾಗ ಪೊಲೀಸ್‌ ಇನ್‌ಸ್ಟೆಕ್ಟರ್‌ ಜಯಪ್ರಕಾಶ ಅವರನ್ನು ಮನವೊಲಿಸಿದರು   

ಕೊಪ್ಪಳ: ಕಂದಾಯದ ಲೆಕ್ಕಕ್ಕೆ ಇಲ್ಲಿನ ಭಾಗ್ಯನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕುಷ್ಟಗಿ ರಸ್ತೆಯ ಕಾಳಿದಾಸ ನಗರ ಸಮೀಪದ ಬಜಾರಮಠ ಲೇ ಔಟ್‌ನಲ್ಲಿ 20ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ನೀರಿಗಾಗಿ ಪರದಾಡುವಂತಾಗಿತ್ತು.

ಈ ಬಡಾವಣೆ ಕಂದಾಯಕ್ಕೆ ಮಾತ್ರ ಭಾಗ್ಯನಗರ ವ್ಯಾಪ್ತಿಯಲ್ಲಿದೆ. ಮತದಾನದ ವಿಚಾರದಲ್ಲಿ ಕೊಪ್ಪಳ ನಗರಸಭೆಯ 28ನೇ ವಾರ್ಡ್‌ ವ್ಯಾಪ್ತಿ ಹೊಂದಿದೆ. ಈ ಬಡಾವಣೆಯ ಜನ ಕುಡಿಯುವ ನೀರಿಗಾಗಿ ಅಕ್ಕಪಕ್ಕದ ಬಡಾವಣೆಗೆ ಹೋಗಬೇಕಾಗಿತ್ತು. ಬಳಕೆಗೆ ಟ್ಯಾಂಕರ್‌ ನೀರೇ ಆಧಾರವಾಗಿತ್ತು.

ಈ ಸಮಸ್ಯೆ ಪರಿಹರಿಸಿದ ಎಂದು ಬಡಾವಣೆ ನಿವಾಸಿಗಳು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಆದ್ದರಿಂದ ಗುರುವಾರ ಕೊಪ್ಪಳ–ಕುಷ್ಟಗಿ ರಸ್ತೆ ತಡೆದು ಪ್ರತಿಭಟಿಸಿದರು. ಜನ ಪ್ರತಿಭಟಿಸಿದ ಪರಿಣಾಮ ಸಂಜೆ ವೇಳೆಗೆ ನೀರು ಬಿಡಲಾಯಿತು. 

ADVERTISEMENT

‘ಬಜಾರಮಠ ಲೇ ಔಟ್‌ನಲ್ಲಿ ನಗರಸಭೆ ಅಳವಡಿಸಿದ ಕೊಳವೆ ಮಾರ್ಗಗಳು ಹಾದು ಹೋಗಿವೆ. ಮೊದಲು ನಗರಸಭೆಯವರೇ ನೀರು ಪೂರೈಕೆ ಮಾಡುತ್ತಿದ್ದರು. ಇತ್ತೀಚೆಗೆ ಫೋನ್‌ ಮಾಡಿದರೂ ನೀರು ಬಿಡುವವರು ಸ್ಪಂದಿಸುತ್ತಿಲ್ಲ. ಪ್ರತಿಭಟನೆ ಬಳಿಕ ನಮ್ಮ ಸಮಸ್ಯೆ ಪರಿಹಾರವಾಯಿತು’ ಎಂದು ಬಡಾವಣೆ ನಿವಾಸಿ ನಾಗರಾಜ ಮೇದಾರ ಬೇಸರ ವ್ಯಕ್ತಪಡಿಸಿದರು.

‘ಕಳೆದ ಒಂದು ತಿಂಗಳಿನಿಂದ ನೀರಿಲ್ಲ. ನಮ್ಮ ಬಡಾವಣೆಯಲ್ಲಿ ಬಹುತೇಕ ಕೂಲಿಕಾರರು ಇದ್ದೇವೆ. ಕೆಲಸಕ್ಕೆ ಹೋದರೆ ಮಕ್ಕಳು, ವೃದ್ಧರು ಹಳಿದಾಟಿ ನೀರು ತರಬೇಕಾದ ಅನಿವಾರ್ಯತೆಯಿದೆ. ಮುಂದೆಯೂ ನೀರಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಸಂಗಮ್ಮ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.