ಮುನಿರಾಬಾದ್ ಸಮೀಪ ವಿಜಯಾದ್ರಿ ಪರ್ವತ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಯಾತ್ರಿ ನಿವಾಸವನ್ನು ಭಾನುವಾರ ಲೋಕಾರ್ಪಣೆ ಗೊಳಿಸಲಾಯಿತು
ಮುನಿರಾಬಾದ್: ಸಮೀಪದ ಹೊಸಹಳ್ಳಿಯ ಕಾಸನಕಂಡಿ ರಸ್ತೆಯಲ್ಲಿರುವ ವಿಜಯಾದ್ರಿ ಪರ್ವತ (ತಿಮ್ಮಪ್ಪನ ಮಟ್ಟಿ) ವೀರಾಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ದೇವಸ್ಥಾನ ಆವರಣದಲ್ಲಿ ನವದೆಹಲಿಯ ರಮಾದೇವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ₹ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ವೀರಾಂಜನೇಯ ಯಾತ್ರಿ ನಿವಾಸ ಕಟ್ಟಡವನ್ನು ಟ್ರಸ್ಟ್ ಅಧ್ಯಕ್ಷ ಸುಭಾಷ್ ತ್ಯಾಗಿ ಮತ್ತು ರಮಾದೇವಿ ತ್ಯಾಗಿ, ಸಂಸದ ರಾಜಶೇಖರ ಹಿಟ್ನಾಳ ಉದ್ಘಾಟಿಸಿದರು.
ಸಾನ್ನಿಧ್ಯ ವಹಿಸಿದ್ದ ಆಶೀಸ್ ಭಾಯಿ ವ್ಯಾಸ ಮಾತನಾಡಿ, ‘ಕಿಷ್ಕಿಂದೆಯ ಈ ನೆಲ ಪವಿತ್ರ ಕ್ಷೇತ್ರವಾಗಿದ್ದು, ಶ್ರೀರಾಮಚಂದ್ರ ಇಲ್ಲಿ ಚಾತುರ್ಮಾಸ್ಯ ಆಚರಣೆ ಮಾಡಿ ಲಂಕೆಗೆ ತೆರಳಿದನು ಎಂದು ರಾಮಾಯಣದಲ್ಲಿ ಬರುತ್ತದೆ. ಅಧ್ಯಾತ್ಮ ಜಗತ್ತಿನ ಪವಿತ್ರ ಗುರುಪೂರ್ಣಿಮೆ ನಮ್ಮನ್ನು ಸಲುಹಿದ ಗುರುವಿನ ಸ್ಮರಣೆಯ ಏಕೈಕ ದಿನವಾಗಿದೆ ಎಂದರು.
ಸಂಸದ ರಾಜಶೇಖರ್ ಹಿಟ್ನಾಳ ಅವರು ಮಾತನಾಡಿ, ಅಜ್ಞಾತವಾಗಿದ್ದ ಈ ಆಂಜನೇಯ ಕ್ಷೇತ್ರವನ್ನು ವಿ.ಆರ್.ಪಾಟೀಲ್ ಮತ್ತು ಎಸ್.ಆರ್.ಪಾಟೀಲ್ ಉದ್ಯಮಿಗಳು ಮತ್ತು ಅವರ ತಂಡ ಸ್ವಂತ ಖರ್ಚಿನಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಇಲ್ಲಿ ಆಂಜನೇಯನ ಶಕ್ತಿ ಜಾಗೃತವಾಗಿದೆ ಎನ್ನುವುದಕ್ಕೆ ದೆಹಲಿ, ಗುಜರಾತ್, ಮತ್ತು ಉತ್ತರ ಪ್ರದೇಶದಿಂದ ಕೂಡ ಭಕ್ತರು ಆಗಮಿಸುವುದೇ ಸಾಕ್ಷಿ. ದೂರದಿಂದ ಬರುವ ಭಕ್ತರ ವಸತಿಗೆ ಯಾತ್ರಿ ನಿವಾಸ ಅನುಕೂಲವಾಗಿದೆ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ, ಟಿ.ಜನಾರ್ದನ, ದಿನೇಶ್ ಪಾಟೀಲ ಮಾತನಾಡಿದರು. ವಿದ್ಯಾದಾಸ್ ಬಾಬಾ, ಗಣ್ಯರಾದ ಬಾಲಚಂದ್ರನ್, ಈ. ಈರಣ್ಣ, ಖಾಜಾವಲಿ ಕಿನ್ನಾಳ, ವಿಜಯಕುಮಾರ್, ಈ.ಅನಿಲ್ ಕುಮಾರ ಇದ್ದರು. ಹನುಮಂತಪ್ಪ ನಾಯಕ್ ನಿರೂಪಿಸಿ ವಂದಿಸಿದರು. ದೇವಸ್ಥಾನದಲ್ಲಿ ವಿಶೇಷ ಪೂಜೆ, ಅನ್ನ ಸಂತರ್ಪಣೆ ನಡೆಯಿತು. ಹೊಸಪೇಟೆಯ ಉದ್ಯಮಿಗಳು, ಹೊಸಹಳ್ಳಿ, ಮುನಿರಾಬಾದ್, ಕಾಸನಕಂಡಿ ಭಕ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.