ಕನಕಗಿರಿ: ಇಲ್ಲಿನ ರಾಜಬೀದಿಯ ಡಾಂಬರೀಕರಣ ಕಾಮಗಾರಿ ನಡೆಯುವಾಗ ಈ ಹಿಂದೆ ಗ್ರಾಮ ಪಂಚಾಯಿತಿ ಅವಧಿಯಲ್ಲಿ ಕುಡಿಯುವ ನೀರಿಗಾಗಿ ಹಾಕಿದ್ದ ಬೀಡ್ ಪೈಪ್ (ಕಬ್ಬಿಣದ ಪೈಪ್) ಗಳನ್ನು ಕಳೆದ ವರ್ಷ ಮಾರಾಟ ಮಾಡಿದ ವಿಷಯದಲ್ಲಿ ಈ ಹಿಂದಿನ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗ್ಡೆ, ನೀರಿನ ಸಹಾಯಕ ವಿಜಯಕುಮಾರ ಗಡಾದ ಅವರು ಶಾಮೀಲಾಗಿದ್ದಾರೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಾಯ ಮತ್ತೆ ಕೇಳಿಬಂತು.
ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷೆ ಹುಸೇನಬೀ ಚಳ್ಳಮರದ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಶರಣೆಗೌಡ ಪೊಲೀಸ್‌ಪಾಟೀಲ, ಸಂಗಪ್ಪ ಸಜ್ಜನ, ಅನಿಲಕುಮಾರ ಬಿಜ್ಜಳ, ರಾಜಾಸಾಬ ನಂದಾಪುರ, ಸಿದ್ಧಾರ್ಥ ಕಲ್ಲಬಾಗಿಲಮಠ ಅವರು ಪೈಪ್ ಮಾರಾಟದ ವಿಷಯವನ್ನು ಎತ್ತಿದರು. ಇದಕ್ಕೆ ಎಲ್ಲಾ ಸದಸ್ಯರು ಧ್ವನಿಗೂಡಿಸಿ ಪೈಪ್ ಮಾರಾಟದಿಂದ ಪಂಚಾಯಿತಿಗೆ ಅಂದಾಜು ₹4 ಲಕ್ಷ ರೂಪಾಯಿ ನಷ್ಟವಾಗಿದೆ. ಈ ಹಿಂದಿನ ಸಭೆಯಲ್ಲಿ ಗಡಾದ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರೆ ಆಗಿನ ಅಧಿಕಾರಿ ಹೆಗ್ಡೆ ಮೌನ ವಹಿಸಿದರು ಎಂದು ಸದಸ್ಯರು ಕಿಡಿ ಕಾರಿದರು.
ಪ್ರತಿ ಸಾಮಾನ್ಯ ಸಭೆ ನಡೆಯುವಾಗ ಗಡಾದ ಅವರು ಆರೋಗ್ಯದ ನೆಪದಲ್ಲಿ ಗೈರಾಗುತ್ತಾರೆ. ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಅವರಿಗೆ ಸಲ್ಲಿಸಿದರು.
ಸದಸ್ಯ ಶೇಷಪ್ಪ ಪೂಜಾರ ಮಾತನಾಡಿ, ‘ಮುರಂ ಹಾಕಲಾಗಿದೆ ಎಂದು ಖೊಟ್ಟಿ ದಾಖಲೆ ಸಲ್ಲಿಸಿ ₹50 ಸಾವಿರ ಬಿಲ್ ಎತ್ತುವಳಿ ಮಾಡಲಾಗಿದೆ. ಇದರಲ್ಲಿ ಅಧಿಕಾರಿ ಹೆಗ್ಡೆ ಹಾಗೂ ಎಂಜಿನಿಯರ್ ಮಂಜುನಾಥ ಭಾಗಿಯಾಗಿದ್ದಾರೆ’ ಎಂದು ಆರೋಪಿಸಿ ದಾಖಲೆಗಳನ್ನು ಮೊಬೈಲ್ ಮೂಲಕ ಪ್ರದರ್ಶಿಸಿದರು.
‘ಕೊಪ್ಪಳದ ಗವಿಮಠದ ಜಾತ್ರೆಗೆ ಇಲ್ಲಿಂದ ಕಳಿಸಿದ್ದ ಕಸ ವಿಲೇವಾರಿ ವಾಹನವನ್ನು ಅಲ್ಲಿಯೇ ಬಿಟ್ಟು ಬರಲಾಗಿದೆ’ ಎಂದು ಸದಸ್ಯ ಸಂಗಪ್ಪ ಸಜ್ಜನ ದೂರಿದರು.
ಕಳೆದ ಎರಡು ವರ್ಷಗಳಿಂದ ಲಕ್ಷ್ಮೀದೇವಿ ಕೆರೆಯಿಂದ ನೀರು ಸರಬರಾಜು ಮಾಡುವ ಸಿಬ್ಬಂದಿಗೆ ವೇತನ ನೀಡಿಲ್ಲ. ವೇತನದ ಜತೆಗೆ ಅವರನ್ನು ಪೂರ್ಣ ಪ್ರಮಾಣದಲ್ಲಿ ಕೆಲಸಕ್ಕೆ ನಿಯೋಜನೆ ಮಾಡಲು ಸೂಚಿಸಲಾಯಿತು. ಹೊಸ ನಿಯಮದ ಪ್ರಕಾರ ಒಟ್ಟು ನಾಲ್ಕು ಸ್ಥಾಯಿ ಸಮಿತಿಯನ್ನು ಮುಂದಿನ ಸಭೆಯಲ್ಲಿ ರಚಿಸಲು ತೀರ್ಮಾನಿಸಲಾಯಿತು.
ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಕೆಯ ₹204 ಕೋಟಿ ಮೊತ್ತದ ಕಾಮಗಾರಿಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಉಪಾಧ್ಯಕ್ಷ ಕಂಠಿರಂಗ ನಾಯಕ, ಸದಸ್ಯ ಅನಿಲಕುಮಾರ ತಾಕೀತು ಮಾಡಿದರು.
ಕಬ್ಬಿಣದ ವಿದ್ಯುತ್ ಕಂಬ ಹಾಗೂ ತಂತಿ ಅಳವಡಿಕೆ, ಶಾಲಾ ಕೊಠಡಿಗಳು ಹಾಗೂ ಬಿಸಿಯೂಟ ಕೊಠಡಿಗಳ ದುರಸ್ತಿ, ಲೋಕೋಪಯೋಗಿ ಇಲಾಖೆಯ ಕಾಮಗಾರಿ ಕುರಿತು ನಡೆದ ಚರ್ಚೆಯಲ್ಲಿ ಸದಸ್ಯರಾದ ನೂರುಸಾಬ ಗಡ್ಡಿಗಾಲ, ಸುರೇಶ ಗುಗ್ಗಳಶೆಟ್ರ, ಹನುಮಂತಪ್ಪ ಬಸರಿಗಿಡದ, ರಾಕೇಶ ಕಂಪ್ಲಿ ಭಾಗವಹಿಸಿದ್ದರು.
ಹುಸೇನಬೀ ಸಂತ್ರಾಸ್ ಅವರು ತಮ್ಮ ವಾರ್ಡ್‌ಗೆ ಮೂಲಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಸದಸ್ಯರಾದ ತನುಶ್ರೀ ಟಿ.ಜೆ.ರಾಮಚಂದ್ರ, ಶೈನಾಜ್ ಬೇಗಂ, ನಂದಿನಿ ಓಣಿಮನಿ, ನಾಮನಿರ್ದೇಶಕ ಸದಸ್ಯರಾದ ಗಂಗಾಧರ ಚೌಡ್ಕಿ, ಶಾಂತಪ್ಪ ಬಸರಿಗಿಡ, ಹನುಮೇಶ ಹಡಪದ ಇದ್ದರು.
ಪಟ್ಟಣದ ಸರ್ವಾಂಗೀಣ ಪ್ರಗತಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ. ನವ ಗ್ರಾಮ ಯೋಜನೆಯ ನಿವೇಶನಗಳ ಹಂಚಿಕೆ ಹಾಗೂ ಆಶ್ರಯ ಮನೆಗಳ ಸಮಸ್ಯೆ ಪರಿಹಾರಕ್ಕೆ ಯತ್ನಿಸಲಾಗುವುದುಲಕ್ಷ್ಮಣ ಕಟ್ಟಿಮನಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.