ADVERTISEMENT

ವೃತ್ತಕ್ಕೆ ಅನುಮೋದನೆ ನೀಡಿ

ಗಂಗಾವತಿ: ಪೌರಾಯುಕ್ತರಿಗೆ ನಗರಸಭೆಯ ಬಿಜೆಪಿ ಸದಸ್ಯರ ಮನವಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 4:37 IST
Last Updated 21 ಡಿಸೆಂಬರ್ 2021, 4:37 IST
ಗಂಗಾವತಿಯಲ್ಲಿ ನಗರಸಭೆಯ ಬಿಜೆಪಿ ಸದಸ್ಯರು ಸೋಮವಾರ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು
ಗಂಗಾವತಿಯಲ್ಲಿ ನಗರಸಭೆಯ ಬಿಜೆಪಿ ಸದಸ್ಯರು ಸೋಮವಾರ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು   

ಗಂಗಾವತಿ: ನಗರದ ಎಂ.ಜಿ ರಸ್ತೆಯ ಪೂರ್ಣಿಮಾ ಚಿತ್ರಮಂದಿರ (ಕನಕದುರ್ಗಾ) ಕ್ರಾಸ್ ಹತ್ತಿರ, ವಿಜಯ ಬೇಕರಿ ಮುಂಭಾಗದ ರಸ್ತೆ ವಿಭಜಕದ ಬಳಿ ನಿರ್ಮಿಸಿರುವ ಬಿಪಿನ್ ರಾವತ್ ವೃತ್ತಕ್ಕೆ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ನಗರಸಭೆ ಸದಸ್ಯರು ಸೋಮವಾರ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರು ಈಚೆಗೆ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದು, ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಈ ದುರಂತದಲ್ಲಿ ಅವರ ಪತ್ನಿ ಮಧುಲಿಕ ಸೇರಿ 13 ಸೈನಿಕರು ಮರಣ ಹೊಂದಿದ್ದು, ಈ ಘಟನೆಗೆ ಇಡೀ ದೇಶವೇ ಕಂಬನಿ ಮಿಡಿದಿದೆ. ಅವರ ಸ್ಮರಣಾರ್ಥವಾಗಿ ಗಂಗಾವತಿ ಸಾರ್ವಜನಿಕ ಹಿತರಕ್ಷಣಾ ಸಮಿತಿ ಮೂಲಕ ಡಿ.13 ರಂದು ಬಿಪಿನ್ ರಾವತ್ ವೃತ್ತ ನಿರ್ಮಾಣ ಸಂಬಂಧ ಮನವಿ ಸಲ್ಲಿಸಲಾಗಿತ್ತು.

ಈ ವಿಷಯದ ಕುರಿತು ಆಕ್ಷೇಪಣೆಗಳು ಬಾರದ ಕಾರಣ ಡಿ.16 ರಂದು ವಿಜಯ ದಿವಸದ ಸುವರ್ಣ ಮಹೋತ್ಸವ ದಿನ ಶಾಸಕರ ಉಪಸ್ಥಿತಿಯಲ್ಲಿ ವೃತ್ತ ನಿರ್ಮಿಸಲಾಗಿದೆ. ಇದನ್ನು ಸಹಿಸದ ಕೆಲವರು, ವೃತ್ತ ನಿರ್ಮಾಣ ವಿರೋಧಿಸಿ, ಆಕ್ಷೇಪ ವ್ಯಕ್ತಪಡಿಸುವುದರ ಜತೆಗೆ ನಗರದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿದ್ದಾರೆ. ರಾವತ್ ವೃತ್ತವನ್ನು ಬೇರೆ ಕಡೆ ನಿರ್ಮಿಸುವಂತೆ ಮನವಿ ಮಾಡಲಾಗಿದೆ. ಇದು ಸೇನಾನಿಗೆ ತೋರಿದ ಅಗೌರವವಾಗಿದೆ ಎಂದು ಮನವಿಯಲ್ಲಿ ಸದಸ್ಯರು ತಿಳಿಸಿದ್ದಾರೆ.

ADVERTISEMENT

ಸೇನಾಪಡೆ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಗೌರವ ಸಲ್ಲಿಸುವುದು ಪ್ರತಿ ಭಾರತೀಯನ ಕರ್ತವ್ಯ. ನಗರದಲ್ಲಿ ವೃತ್ತಕ್ಕೆ ಬಿಪಿನ್‌ ರಾವತ್‌ ಹೆಸರು ನಾಮಕರಣ ಮಾಡಿ, ಅವರಿಗೆ ಶ್ರದ್ಧಾಂಜಲಿ ಅರ್ಪಿಸಿರುವುದು, ದೇಶದ ಹೆಮ್ಮೆಯ ಪುತ್ರನಿಗೆ ನೀಡಿದ ಗೌರವವಾಗಿದೆ. ಆದ್ದರಿಂದ ನಗರದಲ್ಲಿ ಗಲಭೆಗಳನ್ನು ಸೃಷ್ಟಿಸುವ, ಅಹಿತಕರ ಘಟನೆಗಳಿಗೆ ಆದ್ಯತೆ ನೀಡುವವರ ಮಾತುಗಳಿಗೆ ಕಿವಿಗೊಡದೆ ವೃತ್ತಕ್ಕೆ ಅನುಮೋದನೆ ನೀಡಬೇಕು ಎಂದು ಪೌರಾಯುಕ್ತರಿಗೆ ಮನವಿ ಮಾಡಿದರು.

ನಗರಸಭೆ ಪಕ್ಷೇತರ ಸದಸ್ಯ ಶರಬೋಜಿರಾವ್, ಬಿಜೆಪಿ ಸದಸ್ಯರಾದ ರಮೇಶ ಚೌಡ್ಕಿ, ಪರಶುರಾಮ ಮಡ್ಡೇರ್, ನವೀನ್ ಮಾಲಿ ಪಾಟೀಲ, ನೀಲಕಂಠಪ್ಪ ಕಟ್ಟಿಮನಿ, ವಾಸುದೇವ ನವಲಿ, ಬಿಜೆಪಿ ನಗರ ಅಧ್ಯಕ್ಷ ಕಾಶಿನಾಥ ಚಿತ್ರಗಾರ, ಮುಖಂಡ ರಾಚಪ್ಪ ಸಿದ್ಧಾಪುರ, ಅಮರೇಗೌಡ, ಶ್ರೀನಿವಾಸ ಧೂಳ ಹಾಗೂ ಅಭಿಷೇಕ ಶಿರಿಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.