
ಕುಷ್ಟಗಿ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಉದ್ಯಾನ, ಸಾರ್ವಜನಿಕ ಬಳಕಗೆ ಮೀಸಲಿಟ್ಟಿರುವ ಪ್ರದೇಶವನ್ನು ಕೆಲ ಪಟ್ಟಭದ್ರ ವ್ಯಕ್ತಿಗಳು ಗುಳುಂ ಮಾಡುವುದು, ಅಕ್ರಮವಾಗಿ ಸ್ವಂತ ಆಸ್ತಿಯಂತೆ ಅಭಿವೃದ್ಧಿ ಕೆಲಸಗಳನ್ನು ನಡೆಸುತ್ತಿರುವು ಮತ್ತು ಅಭಿವೃದ್ಧಿ ಕಾಣದ ಉದ್ಯಾನಗಳು ಸೊರಗುತ್ತಿರುವುದು ಕಂಡುಬಂದಿದೆ.
ಪಟ್ಟಣದಲ್ಲಿ ಅನೇಕ ಬಡಾವಣೆಗಳಲ್ಲಿ ಅಳಿದುಳಿದ ಉದ್ಯಾನ ಜಾಗಕ್ಕೆ ರಕ್ಷಣೆ ಇಲ್ಲ, ಕೆಲವಕ್ಕೆ ಮಾತ್ರ ತಂತಿ ಬೇಲಿ ಅಳವಡಿಸಲಾಗಿದೆ, ಇನ್ನೂ ಬಹಳಷ್ಟು ಉದ್ಯಾನ ಜಾಗಗಳಿದ್ದು ಒತ್ತುವರಿ ತೆರವಿಗೆ ಕ್ರಮಕೈಗೊಂಡಿಲ್ಲ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಆಸ್ತಿಗಳು ಕಣ್ಮರೆಯಾಗುತ್ತಿದ್ದರೂ ಪುರಸಭೆ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಕೊಪ್ಪಳ ಮುಖ್ಯರಸ್ತೆಯ ಪಕ್ಕದಲ್ಲಿರುವ ಅಮರೇಶ್ವರ ಶೆಟ್ಟರ ಬಡಾವಣೆಯಲ್ಲಿ ಉದ್ಯಾನ ಮತ್ತು ಸಾರ್ವಜನಿಕ ಬಳಕಗೆ ಮೀಸಲಾಗಿಟ್ಟ ಪ್ರದೇಶದಲ್ಲಿನ ಬಹಳಷ್ಟು ಜಾಗ ಈಗಾಗಲೇ ಗುಳುಂ ಆಗಿದೆ. ಆದರೆ ಉಳಿದಿರುವ ಜಾಗವನ್ನಾದರೂ ರಕ್ಷಿಸಿ, ಭವಿಷ್ಯದ ಪೀಳಿಗೆಗೆ ಒಂದಷ್ಟು ಉದ್ಯಾನ ಜಾಗವನ್ನಾದರೂ ಉಳಿಸಿ ಎಂದು ಅನೇಕ ವರ್ಷಗಳಿಂದಲೂ ಸಾರ್ವಜನಿಕರು, ಸಂಘ ಸಂಸ್ಥೆಗಳು ಒತ್ತಡ ಹೇರುತ್ತ ಬಂದರೂ ಅಧಿಕಾರಿಗಳು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವ ದೂರು ಕೇಳಿಬಂದಿದೆ.
ಉದ್ಯಾನ ಜಾಗದಲ್ಲಿಯೇ ಶಾಲೆಯೊಂದು ನಿರ್ಮಾಣಗೊಂಡಿದ್ದು ಶಾಲೆಯವರೂ ಜಾಗ ಒತ್ತುವರಿ ಮುಂದುವರೆಸಲು ಶೆಡ್ ಹಾಕಿಕೊಂಡಿದ್ದಾರೆ. ಕೆಲ ವ್ಯಾಪಾರಿಗಳು ತಮ್ಮ ಸಾಮಗ್ರಿಗಳನ್ನು ಉದ್ಯಾನ ಜಾಗದಲ್ಲಿ ಇಟ್ಟುಕೊಂಡಿದ್ದಾರೆ. ಅನೇಕ ವ್ಯಕ್ತಿಗಳು ಕೊಪ್ಪಳ ಮುಖ್ಯರಸ್ತೆಗೆ ಅಕ್ರಮ ಸಂಪರ್ಕ ಪಡೆಯಲು ಚರಂಡಿ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಹಾಕಿಕೊಂಡಿದ್ದು ಉದ್ಯಾನ ಮಧ್ಯದಲ್ಲಿಯೇ ದಾರಿ ಉಳಿಸಿಕೊಳ್ಳುವ ಸಂಚು ರೂಪಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸರ್ಕಾರದ ಆಸ್ತಿಗೆ ಕಾವಲರುಗಾರರಾಗ ಬೇಕಿದ್ದ ಪುರಸಭೆಯ ಬಹುತೇಕ ಪ್ರತಿನಿಧಿಗಳು ಉದ್ಯಾನ, ಸಿ.ಎ ನಿವೇಶನಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ನಡೆಯುತ್ತಿಲ್ಲ. ಇನ್ನೂ ಕೆಲ ಪ್ರಭಾವಿ ಸದಸ್ಯರು ಸರ್ಕಾರದ ಜಾಗ ಲಪಟಾಯಸುವವರಿಗೆ ಬೆಂಗಾವಲಾಗಿ ನಿಂತಿದ್ದರು ಎಂದೆ ಸಾರ್ವಜನಿಕರಾದ ವೀರಭದ್ರಗೌಡ ಪಾಟೀಲ, ಪ್ರಕಾಶ ಹಂಚಿನಾಳ ಇತರರು ಅಸಮಾಧಾನ ಹೊರಹಾಕಿದರು.
ಸಾರ್ವಜನಿಕರ ಒತ್ತಡಕ್ಕೆ ಮಣಿದ ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ ಡಿಯುಡಿಸಿ ಎಂಜಿನಿಯರ್ ಶಿಲ್ಪಾ ಸಿಬ್ಬಂದಿ ಶಾಂತಪ್ಪ ಇತರರು ಬುಧವಾರ ಕೊಪ್ಪಳ ರಸ್ತೆಯಲ್ಲಿನ ಅಮರೇಶ್ವರ ಶೆಟ್ಟರ ಬಡಾವಣೆಯಲ್ಲಿನ ಉದ್ಯಾನ ಸಿಎ ಸೈಟ್ ಜಾಗ ಗುರುತಿಸಲು ಅಳತೆ ನಡೆಸಲು ಮುಂದಾಗಿದ್ದು ಕಂಡುಬಂದಿತು. ಈ ಕುರಿತು ವಿವರಿಸಿದ ಮುಖ್ಯಾಧಿಕಾರಿ ಉದ್ಯಾನ ಜಾಗದ ಅಳತೆ ನಡೆಸಲಾಗಿದ್ದು ಶೀಘ್ರದಲ್ಲಿ ಸುತ್ತಲೂ ತಂತಿಬೇಲಿ ಅಳವಡಿಸಲಾಗುತ್ತದೆ. ಅಲ್ಲದೆ ಶಾಲೆಯ ಶೆಡ್ ಮತ್ತು ಕೆಲ ವ್ಯಾಪಾರಿಗಳು ಇಟ್ಟುಕೊಂಡಿರುವ ಸಾಮಗ್ರಿಗಳನ್ನು ತಕ್ಷಣ ತೆರವುಗೊಳಿಸುವಂತೆ ತಾಕೀತು ಮಾಡಲಾಗಿದೆ ಎಂದರು. ಸ್ಥಳದಲ್ಲಿದ್ದ ಕೆಲವರು ಉದ್ಯಾನ ಜಾಗ ರಕ್ಷಣೆ ಅಭಿವೃದ್ಧಿಗೆ ನಾವೂ ಸಹಕರಿಸುತ್ತೇವೆ ಆದರೆ ಉದ್ಯಾನಕ್ಕೆ ಮೀಸಲಿರುವ ಜಾಗ ಸಂಪೂರ್ಣ ಬಳಕೆಯಾಗಬೇಕು ಮತ್ತು ಚರಂಡಿ ಮೇಲೆ ಹಾಕಿರುವ ಕಾಂಕ್ರೀಟ್ ಚಾವಣಿ (ಸ್ಲ್ಯಾಬ್)ಯನ್ನು ಎಲ್ಲವನ್ನೂ ತೆರವುಗೊಳಿಸಬೇಕು ಎಂದರು.
ಅಮರೇಶ್ವರ ಶಟ್ಟರ್ ಉದ್ಯಾನದಲ್ಲಿ ಖಾಸಗಿಯವರು ಅಕ್ರಮವಾಗಿ ನಡೆಸಿದ್ದ ಕೆಲಸ ನಿಲ್ಲಿಸಿದ್ದು ಉದ್ಯಾನ ಜಾಗದ ಒತ್ತುವರಿ ತೆರವುಗೊಳಿಸಿ ಸುತ್ತಲೂ ತಂತಿ ಬೇಲಿ ಅಳವಡಿಸುತ್ತೇವೆ.–ವೆಂಕಪ್ಪ ಬೀಳಗಿ ಪುರಸಭೆ ಮುಖ್ಯಾಧಿಕಾರಿ
ಉದ್ಯಾನ ಜಾಗ ಸಂರಕ್ಷಣೆ ವಿಷಯದಲ್ಲಿ ಅಧಿಕಾರಿಗಳು ಯಾಕಿಷ್ಟು ನಿಷ್ಕ್ರೀಯರಾಗಿದ್ದಾರೊ ಗೊತ್ತಿಲ್ಲ ಜಿಲ್ಲಾಡಳಿತವೂ ಈ ವಿಷಯದಲ್ಲಿ ಮೌನವಾಗಿರುವುದು ಅಚ್ಚರಿ ಮೂಡಿಸಿದೆ.–ವಜೀರ ಅಲಿ ಗೋನಾಳ ಅಧ್ಯಕ್ಷ ಭಗತ್‌ಸಿಂಗ್ ಸಂಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.