ADVERTISEMENT

‘ಅಸ್ಪೃಶ್ಯತೆ ತಡೆಗೆ ರಾಜಕೀಯ ಇಚ್ಛಾಶಕ್ತಿ ಅಗತ್ಯ’

ಮಿಯಾಪುರಕ್ಕೆ ದಲಿತ ಸಂಘರ್ಷ ಸಮಿತಿ ಪ್ರಮುಖರ ಭೇಟಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 14:15 IST
Last Updated 23 ಸೆಪ್ಟೆಂಬರ್ 2021, 14:15 IST
ಕುಷ್ಟಗಿ ತಾಲ್ಲೂಕು ಮಿಯಾಪುರಕ್ಕೆ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಶರಣಪ್ಪ ಲೇಬಗಿರಿ, ಸಾಮಾಜಿಕ ಹೋರಾಟಗಾರ್ತಿ ಸಾವಿತ್ರಿ ಮುಜುಮದಾರ ಇತರರು ಭೇಟಿ ನೀಡಿದ್ದರು
ಕುಷ್ಟಗಿ ತಾಲ್ಲೂಕು ಮಿಯಾಪುರಕ್ಕೆ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಶರಣಪ್ಪ ಲೇಬಗಿರಿ, ಸಾಮಾಜಿಕ ಹೋರಾಟಗಾರ್ತಿ ಸಾವಿತ್ರಿ ಮುಜುಮದಾರ ಇತರರು ಭೇಟಿ ನೀಡಿದ್ದರು   

ಕುಷ್ಟಗಿ: ‘ಪರಿಶಿಷ್ಟ ಜಾತಿ ಸೇರಿದಂತೆ ಹಿಂದುಳಿದ ವರ್ಗದವರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಇಚ್ಛಾಶಕ್ತಿ ಪ್ರದರ್ಶಿಸುವ ಅಗತ್ಯವಿದೆ‘ ಎಂದು ದಲಿತ ಸಂಘರ್ಷ ಸಮಿತಿ ನಾಗವಾರ ಬಣದ ಪ್ರಮುಖರು ಒತ್ತಾಯಿಸಿದ್ದಾರೆ.

ಪರಿಶಿಷ್ಟ ಜಾತಿಗೆ ಸೇರಿದ ಮಗು ಇಲ್ಲಿನ ಮಾರುತೇಶ್ವರ ದೇವಸ್ಥಾನದ ಒಳಗೆ ಹೋಗಿದ್ದು, ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಾಲ್ಲೂಕಿನ ಮಿಯಾಪುರ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ಸಮಿತಿಯ ಮುಖಂಡರು ನೊಂದ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರನ್ನು ಭೇಟಿ ಮಾಡಿ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಗ್ರಾಮದ ಕೆಲವೇ ಜನರು ಮಗುವಿನ ಪಾಲಕರಿಗೆ ದಂಡ ವಿಧಿಸುವ ಮಟ್ಟಕ್ಕೆ ಹೋಗಿದ್ದು ದೌರ್ಜನ್ಯದ ಪರಮಾವಧಿ ಅಷ್ಟೇ ಅಲ್ಲ ಸಂವಿಧಾನದ ಜಾತ್ಯತೀತ ಆಶಯಗಳಿಗೆ ವಿರುದ್ಧವಾಗಿದೆ. ಇಂಥ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಅಲ್ಲಲ್ಲಿ ಕಂಡುಬಂದಿದ್ದು ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆ ಎಷ್ಟರ ಮಟ್ಟಿಗೆ ಜೀವಂತವಾಗಿದೆ ಎಂಬುದನ್ನು ಮಿಯಾಪುರ ಘಟನೆ ನಿರೂಪಿಸಿದೆ ಎಂದರು.

ADVERTISEMENT

ನೊಂದ ಕುಟುಂಬದವರನ್ನು ಸಮಾಧಾನಪಡಿಸಿ ಅವರಿಗೆ ನೈತಿಕ ಬೆಂಬಲ ನೀಡಿದ ಮುಖಂಡರು ನಂತರ ಗ್ರಾಮಸ್ಥರ ಬಳಿ ಚರ್ಚಿಸಿ ವಿವರ ಪಡೆದರು. ಕೆಟ್ಟ ಗಳಿಗೆಯಲ್ಲಿ ಈ ಘಟನೆ ನಡೆದಿದೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಇಂಥ ಸಮಸ್ಯೆ ಉದ್ಭವಿಸದಂತೆ ಅಗತ್ಯ ಜಾಗೃತಿ ವಹಿಸುತ್ತೇವೆ ಎಂದು ಗ್ರಾಮಸ್ಥರು ಸಮಿತಿ ಪ್ರಮುಖರಿಗೆ ತಿಳಿಸಿದರು.

ನಂತರ ಪೊಲೀಸ್‌ ಠಾಣೆಗೆ ತೆರಳಿದ ಸಂಘರ್ಷ ಸಮಿತಿ ಮುಖಂಡರು, ಗ್ರಾಮದಲ್ಲಿ ಶಾಂತಿ ನೆಲೆಸುವುದು, ಅಸ್ಪೃಶ್ಯತೆ ಆಚರಣೆ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪ್ರಮುಖರಾದ ಯಮನೂರಪ್ಪ ಕಲ್ಮಂಗಿ, ಆನಂದಪ್ಪ ಕರ್ಕಿಹಳ್ಳಿ, ಮರಿಸ್ವಾಮಿ ಹಿರೇನಂದಿಹಾಳ, ಈರಪ್ಪ ದೊಡ್ಡಮನಿ, ಮಂಜಪ್ಪ, ನಾಗರಾಜ ಕಲ್ಗುಡಿ ಇತರರು ಇದ್ದರು.

ಬಂದೋಬಸ್ತ್: ಈ ಮಧ್ಯೆ ಗ್ರಾಮದಲ್ಲಿ ಘಟನೆ ನಡೆದ ನಂತರ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಮೀಸಲು ಮತ್ತು ಇಲ್ಲಿಯ ಠಾಣೆಯ ಪೊಲೀಸರನ್ನು ಒಳಗೊಂಡಂತೆ ಸೂಕ್ತ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಗ್ರಾಮದಲ್ಲಿ ಈಗ ಕಾನೂನು ವ್ಯವಸ್ಥೆಗೆ ಭಂಗ ತರುವ ಯಾವುದೇ ಘಟನೆಗಳು ನಡೆದಿಲ್ಲ. ಶಾಂತಿ ಪರಿಸ್ಥಿತಿ ಇದೆ ಎಂದು ತಹಶೀಲ್ದಾರ್ ಎಂ.ಸಿದ್ದೇಶ್, ಸರ್ಕಲ್‌ ಇನ್‌ಸ್ಪೆಕ್ಟರ್ ಎಸ್‌.ಅರ್‌.ನಿಂಗಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.