ADVERTISEMENT

ಕಲುಷಿತ ನೀರು: ಮತ್ತೆ ನಾಲ್ಕು ಹೊಸ ಪ್ರಕರಣ

ಗ್ರಾಮಕ್ಕೆ ಆರೋಗ್ಯ ಇಲಾಖೆ ಕಣ್ಗಾವಲು ಸಮಿತಿ ಭೇಟಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 15:38 IST
Last Updated 9 ಜೂನ್ 2023, 15:38 IST
ಕುಷ್ಟಗಿ ತಾಲ್ಲೂಕು ಬಿಜಕಲ್‌ ಗ್ರಾಮಕ್ಕೆ ಆರೋಗ್ಯ ಇಲಖೆ ಕಣ್ಗಾವಲು ಸಮಿತಿ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಮಾಹಿತಿ ಪಡೆದರು
ಕುಷ್ಟಗಿ ತಾಲ್ಲೂಕು ಬಿಜಕಲ್‌ ಗ್ರಾಮಕ್ಕೆ ಆರೋಗ್ಯ ಇಲಖೆ ಕಣ್ಗಾವಲು ಸಮಿತಿ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಮಾಹಿತಿ ಪಡೆದರು   

ಕುಷ್ಟಗಿ: ಕಲುಷಿತ ನೀರು ಕುಡಿದು ಬಾಲಕಿಯೊಬ್ಬರು ಮೃತಪಟ್ಟ ತಾಲ್ಲೂಕಿನ ಬಿಜಕಲ್‌ ಗ್ರಾಮಕ್ಕೆ ಶುಕ್ರವಾರ ಆರೋಗ್ಯ ಇಲಾಖೆಯ ರಾಜ್ಯ ಕಣ್ಗಾವಲು ಸಮಿತಿ  ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಇಲಾಖೆ ಸೂಚನೆಯಂತೆ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳನ್ನು ಒಳಗೊಂಡ ತಂಡ ಅಲ್ಲಿಯ ಪರಿಸ್ಥಿತಿಯನ್ನು ಅವಲೋಕಿಸಿತು. ಗ್ರಾಮದ ಸಮಸ್ಯಾತ್ಮಕ ಮನೆಗಳಿಗೆ ಭೇಟಿ ನೀಡಿ ತೊಂದರೆಗೆ ಒಳಗಾದ ಜನರಿಂದ ಮಾಹಿತಿ ಪಡೆಯಿತು.

ದೋಷಪೂರಿತ ಕುಡಿಯುವ ನೀರು ಸರಬರಾಜು ಆಗಿದ್ದು, ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಬಹಳಷ್ಟು ತೊಂದರೆ ಒಳಗಾಗಿದ್ದೇವೆ ಎಂದು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು. 

ADVERTISEMENT

ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಆಗಿರುವ ಆರೋಗ್ಯ ಸಮಸ್ಯೆ ಕುರಿತು ಶಿಕ್ಷಕರಿಂದ ಮಾಹಿತಿ ಪಡೆದರು. ನೀರು ಪೂರೈಸುವ ಜಲಮೂಲ, ಮೇಲ್ತೊಟ್ಟಿಗಳನ್ನು ಪರಿಶೀಲಿಸಿದರು. ಬಿಜಕಲ್ ಗ್ರಾಮದಲ್ಲಿ ಪರಿಶೀಲನೆ ನಡೆಸಿ ಸಂಗ್ರಹಿಸಿದ ಮಾಹಿತಿಯನ್ನು ಒಳಗೊಂಡ ವರದಿಯನ್ನುಸಮಿತಿ ಆರೋಗ್ಯ ಇಲಾಖೆಗೆ ಶೀಘ್ರದಲ್ಲಿ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.

ತಂಡದ ಪ್ರಮುಖರಾದ ಕಣ್ಗಾವಲು ಸಮಿತಿ ನೋಡಲ್‌ ಅಧಿಕಾರಿ ಡಾ.ಎಸ್‌.ಆರ್‌.ಶ್ರೀನಿವಾಸ, ಮೈಕ್ರೋ ಬಯಾಲಜಿಸ್ಟ್ ಪ್ರಮೀಳಾ, ಬಸವರಾಜ. ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರು, ಸಿಬ್ಬಂದಿ ಪ್ರಕಾಶ ಗುತ್ತಿಗೆದಾರ, ಸೋಮಶೇಖರ ಮೇಟಿ  ಇದ್ದರು.

ಪರಿಹಾರಕ್ಕೆ ಪ್ರಯತ್ನ: ಕುಷ್ಟಗಿ ತಾಲ್ಲೂಕಿನ ಬಿಜಕಲ್‌ ಗ್ರಾಮದಲ್ಲಿ ಮೃತಪಟ್ಟ ಬಾಲಕಿ ನಿರ್ಮಲಾ ಬೆಳಗಲ್ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿರುವುದಾಗಿ ಶಾಸಕ ದೊಡ್ಡನಗೌಡ ಪಾಟೀಲ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.