ADVERTISEMENT

ಕಳಪೆ ಬಿತ್ತನೆ ಬೀಜ, ಗೊಬ್ಬರ ಮಾರಿದರೆ ಕ್ರಮ: ಬಿಸಿ ಪಾಟೀಲ್ ‌ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 13:53 IST
Last Updated 19 ಜೂನ್ 2020, 13:53 IST
ಬಿ.ಸಿ.ಪಾಟೀಲ್‌, ಕೃಷಿ ಸಚಿವ 
ಬಿ.ಸಿ.ಪಾಟೀಲ್‌, ಕೃಷಿ ಸಚಿವ    

ಕೊಪ್ಪಳ: ‘ಕಳಪೆ ಬಿತ್ತನೆ ಬೀಜ ಹಾಗೂ ಗೊಬ್ಬರ ತಯಾರಿಕೆ ಮತ್ತು ಮಾರಾಟ ಮಾಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು‘ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ‌ಎಚ್ಚರಿಕೆ ನೀಡಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೀದರ್‌, ಹಾವೇರಿ, ರಾಯಚೂರು ಸೇರಿದಂತೆ ಇದುವರೆಗೂ ರಾಜ್ಯದಲ್ಲಿ ಸುಮಾರು ₹ 15 ಕೋಟಿ ಮೌಲ್ಯದ ಕಳಪೆ ಬಿತ್ತನೆ ಬೀಜಗಳನ್ನು ವಶಪ‍ಡಿಸಿಕೊಳ್ಳಲಾಗಿದೆ. ಇಂತಹ ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ಸೀಡ್ಸ್‌ ಕಾಯ್ದೆ ಅಡಿ ಎಫ್‌ಐಆರ್‌ ದಾಖಲಿಸಲಾಗುವುದು. ಇದರಲ್ಲಿ ಭಾಗಿಯಾಗಿದ್ದ ಕೆಲವರನ್ನು ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ‘ ಎಂದರು.

‘ಕಳಪೆ ಬಿತ್ತನೆ ಬೀಜ ಮಾರಾಟದ ದೊಡ್ಡ ಜಾಲವಿದೆ. ಪತ್ತೆ ಹಚ್ಚಲು ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಕಳಪೆ ಬಿತ್ತನೆ ಬೀಜ, ಗೊಬ್ಬರ ಮತ್ತು ಕೀಟನಾಶಕ ಕಳಪೆ ಔಷಧವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ‘ ಎಂದು ಹೇಳಿದರು.

ADVERTISEMENT

‘ಕಡಲೆ ಮತ್ತು ತೊಗರಿಯನ್ನು ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸಿದೆ. ರೈತರಿಗೆ ಸ್ವಲ್ಪ ಹಣ ನೀಡಲಾಗಿದೆ. ಬಾಕಿ ಹಣವನ್ನು ಶೀಘ್ರದಲ್ಲಿ ಜಮಾ ಮಾಡಲಾಗುವುದು‘ ಎಂದರು.

‘ಬೆಂಬಲ ಬೆಲೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಪ್ರತಿ ಕ್ವಿಂಟಾಲ್‌ಗೆ ₹ 5,800 ರಂತೆ ಹಣ ಬಿಡುಗಡೆ ಆಗಿದೆ. ರಾಜ್ಯ ಸರ್ಕಾರದಿಂದ ಕ್ವಿಂಟಲ್‌ಗೆ ₹ 300 ಬಿಡುಗಡೆ ಮಾಡಬೇಕಿದೆ. ಇದಕ್ಕಾಗಿ ಸಹಕಾರಿ ಇಲಾಖೆಯಿಂದ ₹ 9 ಕೋಟಿ ಬಿಡುಗಡೆ ಆಗಬೇಕಿದೆ. ಈ ಬಗ್ಗೆ ಸಂಬಂಧಿಸಿದ ಸಚಿವರ ಗಮನಕ್ಕೆ ತರಲಾಗಿದ್ದು, ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸಲಾಗುವುದು‘ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.