ADVERTISEMENT

ಅಮೆರಿಕದ ಜನಾಂಗೀಯ ಗಲಭೆಗೆ ಖಂಡನೆ

ಎಸ್‌ಯುಸಿಐನಿಂದ ಫಲಕಗಳನ್ನು ಹಿಡಿದು ಶಾಂತಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 16:06 IST
Last Updated 2 ಜೂನ್ 2020, 16:06 IST
ಕೊಪ್ಪಳದ ಶಾಸಕರ ಮಾದರಿ ಶಾಲೆಯ ಬಳಿಯ ಎಸ್‌ಯುಸಿಐ ಕಚೇರಿ ಎದುರು ಎಸ್‌ಯುಸಿಐನ ಸದಸ್ಯರು ಶಾಂತಿ ಪ್ರತಿಭಟನೆ ನಡೆಸಿದರು 
ಕೊಪ್ಪಳದ ಶಾಸಕರ ಮಾದರಿ ಶಾಲೆಯ ಬಳಿಯ ಎಸ್‌ಯುಸಿಐ ಕಚೇರಿ ಎದುರು ಎಸ್‌ಯುಸಿಐನ ಸದಸ್ಯರು ಶಾಂತಿ ಪ್ರತಿಭಟನೆ ನಡೆಸಿದರು    

ಕೊಪ್ಪಳ: ಅಮೆರಿಕದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷವನ್ನು ಖಂಡಿಸಿ ಎಸ್‌.ಯು.ಸಿ.ಐ ನ ಸದಸ್ಯರು ಮಂಗಳವಾರ ಫಲಕಗಳನ್ನು ಹಡಿದು ಶಾಂತಿ ಪ್ರತಿಭಟನೆ ನಡೆಸಿದರು.

ಅಮೆರಿಕದಲ್ಲಿ ನಡೆಯುತ್ತಿರುವ ಜನಾಂಗೀಯ ದ್ವೇಷದ ವಿರುದ್ಧ, ಅಧ್ಯಕ್ಷ ಟ್ರಂಪ್ ಆಡಳಿತದ ನಡೆಯನ್ನು ಖಂಡಿಸಿ ನಗರದ ಶಾಸಕರ ಮಾದರಿ ಶಾಲೆಯ ಬಳಿಯ ಸಂಘಟನೆಯ ಕಚೇರಿ ಎದುರು ಮಂಗಳವಾರ ಅವರು ಪ್ರತಿಭಟನೆ ನಡೆಸಿದರು.

‘ಅಮೇರಿಕದ ಜನರೊಂದಿಗೆ ನಾವಿದ್ದೇವೆ, ಸಾಮ್ರಾಜ್ಯ ವಾದಕ್ಕೆ ಧಿಕ್ಕಾರ, ಟ್ರಂಪ್ ಆಡಳಿತಕ್ಕೆ ಧಿಕ್ಕಾರ ಎಂಬ ಫಲಕಗಳು ಹಿಡಿದು ಸದಸ್ಯರು ಪ್ರತಿಭಟನೆ ನಡೆಸಿದರು.

ADVERTISEMENT

ಸಂಘಟನೆಯ ಶರಣು ಗಡ್ಡಿ ಮಾತನಾಡಿ, ವಿಶ್ವದ ಮಹಾನ್ ಪ್ರಜಾಪ್ರಭುತ್ವ ಎಂದು ಕರೆಯಲ್ಪಡುವ ಅಮೆರಿಕವು ಇಂದು ಲಕ್ಷಾಂತರ ಜನರ ಹೋರಾಟಕ್ಕೆ ಸಾಕ್ಷಿಯಾಗಿದೆ. ಎಲ್ಲಾ ರಾಜ್ಯಗಳಲ್ಲಿ ಸಾಮಾನ್ಯ ಜನರು ಕಳೆದ ಎರಡು ದಿನಗಳಿಂದ ಬೀದಿಗಿಳಿದು ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಬೇಕೆಂದು ಘೋಷಣೆ ಎತ್ತುತ್ತಿದ್ದಾರೆ. ಪ್ರತಿಷ್ಠಿತ ನಗರಗಳಲ್ಲಿ ಚಳವಳಿ ನಡೆಸುತ್ತಿದ್ದಾರೆ. ಸಣ್ಣ ಕಳ್ಳತನದ ಆರೋಪದ ಮೇಲೆ ಬಂಧಿಸಲ್ಪಟ್ಟ ಆಫ್ರಿಕಾ ಮೂಲಕ ಅಮೆರಿಕದ ಪ್ರಜೆ ಜಾರ್ಜ್ ಫ್ಲಾಯ್ಡ್ ಅವರನ್ನು ಪೊಲೀಸರು ಅವನ ಕುತ್ತಿಗೆ ಮೇಲೆ ಮಂಡಿ ಊರಿ, ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದು ಖಂಡನೀಯ. ಅವನು ಕಪ್ಪು ಜನಾಂಗಕ್ಕೆ ಸೇರಿದ್ದಾನೆಂಬ ಒಂದೇ ಕಾರಣಕ್ಕೆ ಅವನನ್ನು ಅಮಾನುಷವಾಗಿ ಕೊಲೆ ಮಾಡಲಾಗಿದೆ ಎಂದು ದೂರಿದರು.

ಕರಿಯರನ್ನು ಕೊಲೆ ಮಾಡಿದವರನ್ನು ಬಹಿರಂಗವಾಗಿ ಸನ್ಮಾನಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಮೇಶ ವಂಕಲಕುಂಟಿ, ಮಂಜುಳಾ, ಶಾಂತ, ಕನಕರಾಯ, ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.