ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಅಗತ್ಯ

ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 4:53 IST
Last Updated 15 ಜೂನ್ 2021, 4:53 IST
ಪ್ರಿಯದರ್ಶಿನಿ ಸಾಣೇಕೊಪ್ಪ
ಪ್ರಿಯದರ್ಶಿನಿ ಸಾಣೇಕೊಪ್ಪ   

ಕೊಪ್ಪಳ: ‘ಪದವಿ ಹಂತದಲ್ಲಿರುವಾಗಲೇ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಕಡೆ ಒಲವು ತೋರಬೇಕು. ಅಕಾಡೆಮಿಕ್ ಪರೀಕ್ಷೆಗೂ ಸ್ಪರ್ಧಾತ್ಮಕ ಪರೀಕ್ಷೆಗೂ ಬಹಳ ವ್ಯತ್ಯಾಸವಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಪೂರ್ವ ತಯಾರಿ ಅಗತ್ಯ’ ಎಂದು ಚಾಮರಾಜನಗರ ಜಿಲ್ಲೆ ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಹೇಳಿದರು.

ತಾಲ್ಲೂಕಿನ ಹೊಸಬಂಡಿ ಹರ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಮತ್ತು ಭರವಸಾ ಕೋಶದ ವತಿಯಿಂದ ಹಮ್ಮಿಕೊಂಡ ಸ್ಪರ್ಧಾತ್ಮಕ ಪರೀಕ್ಷೆ ಯಶಸ್ಸು ವಿಷಯಾಧಾರಿತ ಐದು ದಿನಗಳ ಉಚಿತ ಆನ್‌ಲೈನ್ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಾನಸಿಕ ಸಿದ್ಧತೆ, ಕಠಿಣ ಪರಿಶ್ರಮ ಹಾಗೂ ತಿಳಿದುಕೊಂಡಿದ್ದನ್ನು ಅಭಿವ್ಯಕ್ತಿಸುವ ರೀತಿ ನಿಮ್ಮನ್ನು ಯಶಸ್ಸಿನ ಶಿಖರದತ್ತ ಕೊಂಡೊಯ್ಯುತ್ತವೆ. ಯಶಸ್ಸು ಮತ್ತು ವಿಫಲತೆ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಿ. ಸ್ಪರ್ಧಾರ್ಥಿಗಳ ಅನುಪಾತ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗಿದೆ ಎಂದರು.

ADVERTISEMENT

ಮೊದಲ ಬಾರಿ ವಿಫಲರಾಗಬಹುದು. ಆಗ ಸ್ಪರ್ಧೆಯಿಂದ ದೂರ ಉಳಿಯದೇ ಕ್ರಮಬದ್ಧ ಅಧ್ಯಯನ ನಿಮ್ಮದಾಗಿದ್ದರೆ ಯಶಸ್ಸು ಕನಸಾಗಿ ಉಳಿಯಲಾರದು. ನನಸಾಗಿ ನಿಮಗೆ ತೃಪ್ತಿ ನೀಡುತ್ತದೆ.ಗುರಿ ಮುಟ್ಟಲು ನಿಖರ ಓದಿನ ದಾರಿಯಲ್ಲಿ ಸಾಗುತ್ತಿದ್ದೇವೆಯೇ ಎಂಬುದನ್ನು ದೃಢಪಡಿಸಿಕೊಳ್ಳುತ್ತ ಮುಂದೆ ಸಾಗಿ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ.ನಿಂಗಪ್ಪ ಕಂಬಳಿ ಮಾತನಾಡಿ,‘ವಿದ್ಯಾರ್ಥಿಗಳಿಗೆ ಸಾಧಕರ ಜೀವನವೇ ನಿಮಗೆ ಸ್ಫೂರ್ತಿ. ಪದವಿ ಹಂತ ಮುಗಿದ ನಂತರ ತಾವು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಯಶಸ್ಸಿಗೆ ಆಂತರಿಕ ಪ್ರೇರಣೆ ಪೂರ್ವ ತಯಾರಿ ಹಾಗೂ ಮಾರ್ಗದರ್ಶನ ಬೇಕಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಕಾಲೇಜು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾಗಿ ಉನ್ನತ ಹುದ್ದೆಗಳಲ್ಲಿರುವ ಸಾಧಕರಿಂದ ಮಾರ್ಗದರ್ಶನ ನೀಡಿಸುವ ಕೆಲಸ ಮಾಡುತ್ತಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಸ್ಪರ್ಧಾತ್ಮಕ ಯುಗದಲ್ಲಿ ನಿರಂತರ ಅಧ್ಯಯನಶೀಲತೆ, ಕಠಿಣ ಪರಿಶ್ರಮ ಮುಖ್ಯ. ವಿದ್ಯಾ‌ಥಿಗಳು ಗಮನ ಕೇಂದ್ರೀಕರಿಸಿ ಛಲವನ್ನು ಬೆಳೆಸಿಕೊಂಡು ಅಂದುಕೊಂಡಿದ್ದನ್ನು ಸಾಧಿಸುವ ಕೆಲಸ ಮಾಡಬೇಕು. ಆಗ ಕುಟುಂಬಕ್ಕೂ ಅನುಕೂಲವಾಗುತ್ತದೆ ಎಂದರು.

ನಂತರ ಕನ್ನಡ ಭಾಷೆ ಮತ್ತು ಸಾಹಿತ್ಯ ವಿಷಯದ ಕುರಿತು ಸಹಾಯಕ ಪ್ರಾಧ್ಯಾಪಕ ಶಂಕ್ರಯ್ಯ ಅಬ್ಬಿಗೇರಿಮಠಉಪನ್ಯಾಸ ನೀಡಿದರು.

ಐಕ್ಯೂಎಸಿ ಸಂಚಾಲಕ ಡಾ.ವೀರೇಂದ್ರ ಪಾಟೀಲ ಮಾತನಾಡಿದರು. ಗದ್ದೆಪ್ಪ ನಿರೂಪಿಸಿದರು. ಕೃಷ್ಣಮೂರ್ತಿ ಬೇಳೂರು ಸ್ವಾಗತಿಸಿದರು. ಅನ್ನಪೂರ್ಣ ಪಂಥರ ವಂದಿಸಿದರು. ಜಗದೀಶ್ ಹೊಸಳ್ಳಿ, ಗೋಪಾಲ.ಡಿ ಉದ್ಘಾಟಿಸಿದರು. ಸಂತೋಷ ಕಾಡಪ್ಪನವರ ರಾಮಣ್ಣ ಉಪ್ಪಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.