ಮುನಿರಾಬಾದ್: ತುಂಗಭದ್ರಾ ಜಲಾಶಯ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದ ಭತ್ತದ ಕಟಾವು ಭರದಿಂದ ಸಾಗಿದ್ದು, ಭತ್ತ ಕಟಾವು ಯಂತ್ರಗಳಿಗೆ ಬೇಡಿಕೆ ಹೆಚ್ಚಾಗಿದೆ. ಗದ್ದೆಗಳಲ್ಲಿ ಬೆಳೆದು ನಿಂತ ಭತ್ತದ ಪೈರು ಕಟಾವು ನಡೆಯುತ್ತಿದ್ದು, ಮತ್ತೊಂದು ಕಡೆ ಎರಡನೇ ಬೆಳೆಗೆ ಭತ್ತದ ಸಸಿಗಳನ್ನು ಬೆಳೆಸಲಾಗುತ್ತಿದೆ.
ಭತ್ತ ಕಟಾವು ಯಂತ್ರಕ್ಕೆ ಬೇಡಿಕೆ:
ಕಟಾವಿಗೆ ಯಂತ್ರವನ್ನೇ ಅವಲಂಬಿಸಿರುವ ರೈತರು ತಮಿಳುನಾಡು ಮೂಲದಿಂದ ಬರುವ ಯಂತ್ರಗಳಿಗೆ ಕಾಯುತ್ತಿದ್ದಾರೆ. ಕಳೆದ ವರ್ಷ ಗಂಟೆಗೆ ₹2,400 ಇದ್ದ ಕಟಾವು ದರ ಈ ವರ್ಷ ₹ 2,800ಕ್ಕೆ ಏರಿಕೆಯಾಗಿದೆ. ಯಂತ್ರಗಳು ಕೂಡ ಕಡಿಮೆ ಪ್ರಮಾಣದಲ್ಲಿ ಲಭ್ಯ ಇವೆ.
ಭತ್ತದ ದರ ಕುಸಿತ:
ಕಳೆದ ವರ್ಷ ₹2,200 ರಿಂದ ₹2,400(75 ಕಿಲೋ ಗ್ರಾಮ್ ತೂಕದ ಚೀಲಕ್ಕೆ) ಇದ್ದ ದರ, ಈ ಬಾರಿ ₹1,700 ರಿಂದ ₹1,900 ಮಾರುಕಟ್ಟೆ ದರ ಇದ್ದು, ಭತ್ತದ ಕಟಾವಿಗೆ ರೈತ ನಿರಾಸಕ್ತಿ ತೋರಿಸುತ್ತಿದ್ದಾರೆ ಎಂದು ಅಗಳಕೇರಾ ಗ್ರಾಮದ ಶರಣಬಸವೇಶ್ವರ ರೈತ ಶಕ್ತಿ ಗುಂಪಿನ ಶರಣಬಸಪ್ಪ ಆನೆಗುಂದಿ ಹೇಳುತ್ತಾರೆ.
ಈ ಭಾಗದಲ್ಲಿ ಸಾಮಾನ್ಯವಾಗಿ ಆರ್‌ಎನ್ಆರ್, ಸೋನಾ, 1632 ತಳಿಯು ಜನಪ್ರಿಯವಾಗಿದ್ದು ಹೆಚ್ಚು ಸಂಖ್ಯೆಯಲ್ಲಿ ರೈತರು ಇದೇ ತಳಿಯ ಭತ್ತವನ್ನು ಬೆಳೆಯುತ್ತಿದ್ದಾರೆ. ಈ ವರ್ಷ ಉತ್ತಮ ಮಳೆಯಾಗಿ ಜಲಾಶಯ ತುಂಬಿದ್ದು, ಎರಡನೇ ಬೆಳೆಗೆ ನಿರಾತಂಕವಾಗಿ ರೈತರು ತಯಾರಿ ನಡೆಸಿದ್ದಾರೆ. 25-30 ದಿನದ ಸಸಿಗಳನ್ನು ಡಿಸೆಂಬರ್ ತಿಂಗಳಾಂತ್ಯಕ್ಕೆ ನಾಟಿ ಮಾಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.