ADVERTISEMENT

ಅಡ್ಡಾದಿಡ್ಡಿ ವಾಹನ ನಿಲುಗಡೆ: ಸಂಚಾರಕ್ಕೆ ಅಡ್ಡಿ

ಜೀವ ಕೈಲಿಡಿದು ನಡೆಯಬೇಕಾದ ಸ್ಥಿತಿ ಪ್ರಯಾಣಿಕರದ್ದು: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 13:15 IST
Last Updated 12 ಏಪ್ರಿಲ್ 2021, 13:15 IST
ಕುಷ್ಟಗಿ ಬಸ್‌ ನಿಲ್ದಾಣದ ಬಳಿ ಖಾಸಗಿ ವಾಹನಗಳು ಮುಖ್ಯರಸ್ತೆಯಲ್ಲೇ ಅಡ್ಡಾದಿಡ್ಡಿಯಾಗಿ ನಿಂತಿದ್ದು ಸೋಮವಾರ ಕಂಡುಬಂದಿತು
ಕುಷ್ಟಗಿ ಬಸ್‌ ನಿಲ್ದಾಣದ ಬಳಿ ಖಾಸಗಿ ವಾಹನಗಳು ಮುಖ್ಯರಸ್ತೆಯಲ್ಲೇ ಅಡ್ಡಾದಿಡ್ಡಿಯಾಗಿ ನಿಂತಿದ್ದು ಸೋಮವಾರ ಕಂಡುಬಂದಿತು   

ಕುಷ್ಟಗಿ: ಸಾರಿಗೆ ಇಲಾಖೆ ನೌಕರರ ಮುಷ್ಕರದ ಕಾರಣಕ್ಕೆ ಪ್ರಯಾಣಿಕರ ಸಂಚಾರಕ್ಕೆ ಸರ್ಕಾರ ಖಾಸಗಿ ವಾಹನಗಳ ವ್ಯವಸ್ಥೆ ಮಾಡಿದೆ. ಆದರೆ, ಇದನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಖಾಸಗಿ ವಾಹನಗಳ ಮಾಲೀಕರು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.

ಇದರಿಂದ ಸುಗಮ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ.

ರಸ್ತೆ ಪಕ್ಕದಲ್ಲಿ ನಿಲ್ಲಿಸಬೇಕು ಎಂದು ಸೂಚನೆ ನೀಡಿದ್ದರೂ ಕೊಪ್ಪಳ, ಇಳಕಲ್‌, ಗಜೇಂದ್ರಗಡ, ಸಿಂಧನೂರು, ಹನುಮಸಾಗರ, ಯಲಬುರ್ಗಾದ ಕಡೆಗೆ ತೆರಳುವ ಖಾಸಗಿ ವಾಹನಗಳನ್ನು ನಡು ರಸ್ತೆಯಲ್ಲಿಯೇ ನಿಲ್ಲಿಸಲಾಗುತ್ತಿದೆ. ಬೇರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ADVERTISEMENT

‘ಬಸ್‌ ನಿಲ್ದಾಣದ ಬಳಿ ಇರುವ ಮುಖ್ಯರಸ್ತೆಯಲ್ಲಿ ಖಾಸಗಿ ವಾಹನಗಳದ್ದೇ ದರ್ಬಾರ್ ಆಗಿದೆ. ಎಲ್ಲಿ ನಿಂತರೂ ಸದ್ಯದ ಪರಿಸ್ಥಿತಿಯಲ್ಲಿ ಅವರಿಗೆ ಯಾರೂ ಹೇಳುವವರು ಕೇಳುವವರು ಇಲ್ಲದಂತಾಗಿದೆ. ರಸ್ತೆಯನ್ನೇ ಗುತ್ತಿಗೆ ಹಿಡಿದವರಂತೆ ವರ್ತಿಸುತ್ತಿದ್ದಾರೆ. ಪೊಲೀಸರೂ ಕೂಡ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸದಂತೆ ಖಾಸಗಿ ಚಾಲಕರಿಗೆ ಸೂಚಿಸದೆ ಮೌನಕ್ಕೆ ಶರಣಾಗಿದ್ದಾರೆ. ದ್ವಿಚಕ್ರ ವಾಹನ ಸೇರಿದಂತೆ ಎಲ್ಲ ರೀತಿಯ ಸಂಚಾರದಲ್ಲೂ ವ್ಯತ್ಯಯವಾಗುತ್ತಿದೆ’ ಎಂದು ಇತರ ವಾಹನಗಳ ಸವಾರರು ದೂರಿದರು.

‘ಅಂಗಡಿಗಳ ಮುಂದೆಯೇ ಖಾಸಗಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿರುವುದರಿಂದ ಅಲ್ಲಿಗೆ ಹೋಗಿಬರುವುದಕ್ಕೆ ಬಹಳಷ್ಟು ಪ್ರಯಾಸ ಪಡುವಂತಾಗಿದೆ. ಪಾದಚಾರಿಗಳಂತೂ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಿದೆ’ ಎಂದು ಸಾರ್ವಜನಿಕರೊಬ್ಬರು ಅಳಲು ತೋಡಿಕೊಂಡರು.

ಈ ಕುರಿತು ಸಬ್‌ ಇನ್‌ಸ್ಪೆಕ್ಟರ್ ತಿಮ್ಮಣ್ಣ ನಾಯಕ ಅವರನ್ನು ಸಂಪರ್ಕಿಸಿದಾಗ,‘ಸಾರಿಗೆ ಮುಷ್ಕರ ಮುಂದುವರಿದಿರುವುದರಿಂದ ಖಾಸಗಿಯವರಿಗೆ ತೊಂದರೆ ಕೊಡಬೇಡಿ ಎಂದು ಜಿಲ್ಲಾಡಳಿತ ಆದೇಶಿಸಿದೆ. ಆದ್ದರಿಂದ ಖಾಸಗಿಯವರಿಗೆ ನಿಯಮ ‍ಪಾಲನೆಯಲ್ಲಿ ಕೆಲ ರಿಯಾಯಿತಿ ನೀಡಲಾಗಿದೆ. ಆದರೂ ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗಿದೆ. ಇಲ್ಲಿಯ ಠಾಣೆಯ ಹೆಚ್ಚಿನ ಸಿಬ್ಬಂದಿಯನ್ನು ಮಸ್ಕಿ ಉಪಚುನಾವಣೆ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಆದ್ದರಿಂದ ಸಿಬ್ಬಂದಿ ಕೊರತೆಯಾಗಿದೆ. ಆದರೂ ರಸ್ತೆ ಸಂಚಾರಕ್ಕೆ ಅಡ್ಡಿಯಾಗದ ರೀತಿಯಲ್ಲಿ ವಾಹನ ನಿಲ್ಲಿಸುವಂತೆ ಖಾಸಗಿಯವರಿಗೆ ತಾಕೀತು ಮಾಡುತ್ತೇವೆ’ ಎಂದು ಹೇಳಿದರು.

ಕುಷ್ಟಗಿ ಘಟಕ; 10 ಬಸ್‌ ಸಂಚಾರ

ಸಾರಿಗೆ ನೌಕರರ ಮುಷ್ಕರ ಮುಂದುವರಿದಿದ್ದರೂ ಈಶಾನ್ಯ ಸಾರಿಗೆಯ ಇಲ್ಲಿಯ ಘಟಕದಿಂದ ಸೋಮವಾರ 10 ಬಸ್‌ಗಳು ಸಂಚರಿಸಿದವು.

ಕೊಪ್ಪಳ, ಗಂಗಾವತಿ, ವಿಜಯಪುರ ಕಡೆಗೆ ಬಸ್‌ಗಳು ಓಡಾಡುತ್ತಿವೆ ಎಂದು ತಿಳಿದುಬಂದಿದೆ.

ಈ ಕುರಿತು ಮಾಹಿತಿ ನೀಡಿದ ಘಟಕ ವ್ಯವಸ್ಥಾಪಕ ಸಂತೋಷಕುಮಾರ ಶೆಟ್ಟಿ,‘54 ತಾಂತ್ರಿಕ ಸಹಾಯಕರ ಪೈಕಿ ಮೂವರು ಮಾತ್ರ ಗೈರು ಹಾಜರಾಗಿದ್ದಾರೆ. ಆಡಳಿತ ಶಾಖೆಯ 41 ಜನರ ಪೈಕಿ 4 ಜನ ಗೈರು ಹಾಜರಾಗಿದ್ದಾರೆ. ಪರಿಸ್ಥಿತಿ ಅರ್ಥ ಮಾಡಿಕೊಂಡು ಕೆಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರೆ ಇನ್ನೂ ಕೆಲವರನ್ನು ಮನವೊಲಿಸಿ ಕೆಲಸಕ್ಕೆ ಕರೆತರಲಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.